ಶಿರಸಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶಿರಸಿ ತಾಲೂಕಿನ ಕಾಗೇರಿಯ ನಿವಾಸದಲ್ಲಿ ಜ. ೧೩ರಂದು ತಡರಾತ್ರಿ ಚಿರತೆ ನುಗ್ಗಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಸಂಸದ ಕಾಗೇರಿ ನಿವಾಸದಲ್ಲಿ ಇರುವಾಗಲೇ ಈ ಘಟನೆ ನಡೆದಿದ್ದು, ಸಿಸಿ ಕ್ಯಾಮೆರಾದ ದೃಶ್ಯದಲ್ಲಿ ಸೋಮವಾರ ರಾತ್ರಿ ೧೧ ಗಂಟೆ ಸುಮಾರಿಗೆ ಚಿರತೆ ನುಗ್ಗಿದೆ.
ಕುಮಟಾ: ಅರಣ್ಯ ಹಕ್ಕು ಅರ್ಜಿ ಪುನರ್ ಪರಿಶೀಲನೆ ಪ್ರಕ್ರಿಯೆ ಕಾನೂನುಬಾಹಿರ ಎಂದು ತಾಲೂಕಿನ ಅರಣ್ಯ ಅತಿಕ್ರಮಣದಾರರು ಉಪವಿಭಾಗಾಧಿಕಾರಿ ಹಾಗೂ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷೆ ಕಲ್ಯಾಣಿ ಕಾಂಬ್ಳೆ ಅವರಿಗೆ ಸೋಮವಾರ ಸಾಮೂಹಿಕವಾಗಿ ಆಕ್ಷೇಪ ಪತ್ರ ಸಲ್ಲಿಸಿದರು.ಪಟ್ಟಣದ ಮಹಾಸತಿ ಸಭಾಭವನದಿಂದ ಬೃಹತ್ ಮೆರವಣಿಗೆ ಮೂಲಕ ತಾಲೂಕು ಸೌಧಕ್ಕೆ ತೆರಳಿ ಮನವಿ ಸಲ್ಲಿಸಿದರು.ಕಳೆದ ನ. ೨೮ರಂದು ರಾಜ್ಯಾದಂತ ವಿವಿಧ ಅರಣ್ಯ ಹಕ್ಕು ಸಮಿತಿಗಳು ಅರಣ್ಯ ಹಕ್ಕು ಕಾಯಿದೆ ಅಡಿ ಸಲ್ಲಿಸಿದ ಅರ್ಜಿಗಳನ್ನು ಪುನರ್ ಪರಿಶೀಲಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನಿರ್ದೇಶನ ನೀಡಿದ್ದರು. ಅಪೂರ್ಣ, ಅಸ್ತಿತ್ವವಿಲ್ಲದ ಕಾನೂನುಬಾಹಿರ ಹಕ್ಕು ಸಮಿತಿಗಳಿಂದ ಅರ್ಜಿ ಸಲ್ಲಿಸಲು ಸಮಿತಿಯಲ್ಲಿ ಶೇ. ೫೦ರಷ್ಟು ಸದಸ್ಯರ ಅನುಪಸ್ಥಿತಿಯಲ್ಲಿ ಅರ್ಜಿ ವಿಲೇವಾರಿ ಮಾಡಲು ಪ್ರಾರಂಭಿಸಿರುವುದನ್ನು ಆಕ್ಷೇಪಿಸಲಾಗಿದೆ.
ಈ ವೇಳೆ ಮಾತನಾಡಿದ ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ಕಾನೂನಿಗೆ ವ್ಯತಿರಿಕ್ತವಾಗಿ ಉಚ್ಚ ನ್ಯಾಯಾಲಯದ ಮತ್ತು ಕೇಂದ್ರ ಸರ್ಕಾರದ ಆದೇಶ ನಿರ್ಲಕ್ಷಿಸಿ ಮೂರು ತಲೆಮಾರಿನ ನಿರ್ದಿಷ್ಟ ೧೯೩೦ರ ಪೂರ್ವದ ದಾಖಲೆಗೆ ಸಾಕ್ಷ್ಯ ಒದಗಿಸಲು ಸಮಿತಿಗಳು ನೋಟಿಸ್ ನೀಡುತ್ತಿರುವುದು ಕಾನೂನುಬಾಹಿರ ಎಂದರು.ತಾಲೂಕು ಅಧ್ಯಕ್ಷ ಮಂಜುನಾಥ ಮರಾಠಿ, ಜಿಲ್ಲಾ ಸಂಚಾಲಕ ಮಹೇಂದ್ರ ನಾಯ್ಕ, ಸುರೇಶ ಪಟಗಾರ, ಸೀತಾರಾಮ ನಾಯ್ಕ, ಜಗದೀಶ ಹರಿಕಾಂತ, ಸಾರಾಂಬಿ ಬೆಟ್ಕುಳಿ, ಶಂಕರ ಗೌಡ, ಗಣಪತಿ ಮರಾಠಿ, ಜಯಂತ ಮರಾಠಿ, ಸುನೀತಾ ಹರಿಕಾಂತ ಕಿಮಾನಿ, ಯಾಕೂಬ್ ಸಾಬ ಬೆಟ್ಕುಳಿ, ಗಜಾನನ ಪಟಗಾರ ಹೊಲನಗದ್ದೆ, ವೆಂಕಟರಮಣ ಪಟಗಾರ, ರಾಜೀವ ಎಂ. ಗೌಡ ಇತರರು ಇದ್ದರು. ಅರ್ಜಿ ಸಲ್ಲಿಕೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು.