ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಆಗ್ರಹಿಸಿದ್ದಾರೆ. ಅಲ್ಲದೆ, ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಗುತ್ತಿಗೆ ಕಾರ್ಮಿಕರು ಪಂಜಿನ ಮೆರವಣಿಗೆ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ, ಭದ್ರಾವತಿ
ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಶಾಸಕ ಬಿ.ಕೆ. ಸಂಗಮೇಶ್ವರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.
ನಗರದ ವಿಐಎಸ್‌ಎಲ್ ಕಾರ್ಖಾನೆ ಶಾಶ್ವತವಾಗಿ ಮುಚ್ಚಲು ಕೇಂದ್ರ ಸರ್ಕಾರದ ಆದೇಶದ ಮೇರೆಗೆ 2023ರ ಜ.16ರಂದು ಕೇಂದ್ರ ಉಕ್ಕು ಪ್ರಾಧಿಕಾರ ತೀರ್ಮಾನ ತೆಗೆದುಕೊಂಡಿತ್ತು. ಇದನ್ನು ವಿರೋಧಿಸಿ ವಿಐಎಸ್‌ಪಿ ಕಾಂಟ್ರ್ಯಾಕ್ಟ್ ವರ್ಕರ್ಸ್ ಯೂನಿಯನ್ ವತಿಯಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಹೋರಾಟ 1 ವರ್ಷ ಪೂರೈಸಿರುವ ಹಿನ್ನೆಲೆ ಮಂಗಳವಾರ `ಭದ್ರಾವತಿಯ ಕರಾಳ ದಿನ'''' ಆಚರಿಸಲಾಯಿತು.
ಬಿ.ಕೆ. ಸಂಗಮೇಶ್ವರ್, ಕಾಂಗ್ರೆಸ್ ಮುಖಂಡರು ಸಂಜೆ ನಡೆದ ಪಂಜಿನ ಮೆರವಣಿಗೆಯಲ್ಲಿ ಮಾತನಾಡಿ, ಸಂಸದ ರಾಘವೇಂದ್ರ ಅವರು ಈಗಲೂ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಹೊರತು, ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿಲ್ಲ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹೊಸ ಸೇತುವೆ ರಸ್ತೆ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ ಹಾಗೂ ಅಂಬೇಡ್ಕರ್ ವೃತ್ತದವರೆಗೂ ಕಾರ್ಮಿಕರು ಪಂಜಿನ ಮೆರವಣಿಗೆ ನಡೆಸಿದರು. ಪ್ರಮುಖ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರ ಹಾಗೂ ಉಕ್ಕು ಪ್ರಾಧಿಕಾರದ ಧೋರಣೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೆರವಣಿಗೆಯಲ್ಲಿ ಪ್ರಮುಖರಾದ ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಎಸ್.ಕುಮಾರ್, ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ನೇತ್ರಾವತಿ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ. ಮೋಹನ್, ಮುಖಂಡರಾದ ಎಚ್.ರವಿಕುಮಾರ್, ಅಭಿಲಾಷ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.
- - - -ಡಿ16ಬಿಡಿವಿಟಿ2 ಮತ್ತು 2(ಎ):
ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ಮಂಗಳವಾರ `ಭದ್ರಾವತಿಯ ಕರಾಳ ದಿನ'''''''' ಆಚರಣೆ ಅಂಗವಾಗಿ ಸಂಜೆ ಪಂಜಿನ ಮೆರವಣಿಗೆ ನಡೆಸಿದರು. ಶಾಸಕ ಬಿ.ಕೆ. ಸಂಗಮೇಶ್ವರ್ ಸೇರಿದಂತೆ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.