ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಐತಿಹಾಸಿಕತೆಯೊಂದಿಗೆ ಅಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ ಕ್ರಾಂತಿಯಲ್ಲಿ ಈ ವೀರಶೂರರ ನಾಡು ಸದಾ ಮುಂಚೂಣಿಯಲ್ಲಿದ್ದು, ನಾಗನೂರಿನ ಲಿಂ.ಡಾ.ಶಿವಬಸವ ಸ್ವಾಮೀಜಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅವಿರತ ಶ್ರಮಿಸಿದ್ದರು ಎಂದು ಗದಗ-ಡಂಬಳದ ಜಗದ್ಗುರು ತೋಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ನಡೆದ ಹಾನಗಲ್ ಕುಮಾರ ಮಹಾಸ್ವಾಮೀಜಿ ಅವರ 157ನೇ ಜಯಂತಿ ಮಹೋತ್ಸವ, ಕಾಯಕಯೋಗಿ ನಾಗನೂರ ರುದ್ರಾಕ್ಷಿಮಠದ ಡಾ.ಶಿವಬಸವ ಸ್ವಾಮೀಜಿ 30ನೇ ಪುಣ್ಯ ಸ್ಮರಣೋತ್ಸವದಲ್ಲಿ ಮಾಜಿ ಸಚಿವ ಶಿವಾನಂದ ಕೌಜಲಗಿ ಅವರು ರಚಿಸಿದ ನಾಗನೂರಿನ ತ್ರಿಕಾಲ ಪೂಜಾನಿಷ್ಠ ಶತಾಯುಷಿ ಡಾ.ಶಿವಬಸವ ಸ್ವಾಮೀಜಿ ಅವರ ಕುರಿತು ರಚಿಸಿದ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿ, ಡಾ.ಶಿವಬಸವ ಸ್ವಾಮೀಜಿ ಅ ವರು ಸಮಾಜಕ್ಕೆ ನೀಡಿದ ಕೊಡುಗೆ ಸೇರಿದಂತೆ ಬಾಗಲಕೋಟೆ ಜಿಲ್ಲೆಯಲ್ಲಿನ ಶಿವಮಂದಿರ ಮಂದಿರ ಜೀರ್ಣೋದ್ಧಾರಕ್ಕಾಗಿ ವಹಿಸಿದ ಶ್ರಮದ ಫಲವನ್ನು ಇದರಲ್ಲಿ ನಮೂದಿಸಲಾಗಿದ್ದು ಪ್ರತಿಯೊಬ್ಬರು ಓದುವಂತೆ ರಚಿಸಲಾಗಿದೆ ಎಂದರು.
ಮುರಗೋಡದ ಮಹಾಂತ ದುರದಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಮಾತನಾಡಿ, ಈ ಭಾಗದ ಮಠ-ಮಂದಿರಗಳ ಉದ್ದಾರಕ್ಕಾಗಿ ಸದಾ ಶ್ರಮಿಸುತ್ತಿರುವ ಜನಪರ ಸೇವಕ ಶಿವಾನಂದ ಕೌಜಲಗಿ ಸಾಧಕರಿಗೆ ಪ್ರೇರಣೆಯಾಗಿದ್ದಾರೆ. ಆದರೆ ಆಧುನಿಕತೆ ಭರಾಟೆಯಲ್ಲಿ ಸಂಪ್ರದಾಯ, ಅಧ್ಯಾತ್ಮದ ಒಲವು ಕಡಿಮೆಯಾಗುತ್ತಿರುವುದು ಕಳವಳಕಾರಿಯಾಗಿದೆ. ಹಿರಿಯರು ಕಿರಿಯರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕೆಂದರು.ಶೇಗುಣಿಸಿಯ ಡಾ.ಮಹಾಂತಪ್ರಭು ಸ್ವಾಮೀಜಿ ಪ್ರವಚನ ನೀಡಿ ಮಾತನಾಡಿ, ಚಿನ್ನದ ರಥದಲ್ಲಿ ಬರುವ ರಾಜನಿಗಿಂತ ಚಕ್ಕಡಿಯಲ್ಲಿ ಬರುವ ರೈತ ಶ್ರೇಷ್ಠವಾಗಿದ್ದಾನೆ ಎಂದು ಮಾರ್ಮಿಕವಾಗಿ ನುಡಿದರು.
ಮುನವಳ್ಳಿಯ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ. ಹೊಸೂರಿನ ಗಂಗಾಧರ ಸ್ವಾಮೀಜಿ, ಯಕ್ಕಂಡಿಯ ಪಂಚಾಕ್ಷರ ಸ್ವಾಮೀಜಿ, ಗೊರವಣಕೊಳ್ಳದ ಶಿವಾನಂದ ಸ್ವಾಮೀಜಿ, ಕಡೋಲಿಯ ಶ್ರೀ ದುರದುಂಡೇಶ್ವರ ಮಠದ ಗುರುಬಸವಲಿಂಗ ಸ್ವಾಮೀಜಿ, ಅರಳಿಕಟ್ಟಿಯ ಶಿವಮೂರ್ತಿ ಸ್ವಾಮೀಜಿ, ಕಾರಂಜಿಮಠದ ಶಿವಯೋಗಿ ದೇವರು, ಶ್ರೀ ಭಗಳಾಂಭಾ ದೇವಸ್ಥಾನದ ಡಾ.ವೀರಯ್ಯ ಸ್ವಾಮೀಜಿ ಇದ್ದರು.ವಿಶ್ವನಾಥ ಹಿರೇಮಠ, ಶಾಸಕ ಮಹಾಂತೇಶ ಕೌಜಲಗಿ, ಸುಶೀಲಮ್ಮ ಕೌಜಲಗಿ, ಅನೀಶ್ ಕೌಜಲಗಿ, ಶಾಂತವ್ವ ಗದಗ, ಗಿರೀಜಾ ಕೌಜಲಗಿ, ಸೀಮಾ ಮೆಟಗುಡ್ಡ, ಪುಷ್ಪಾ ದೇಶನೂರ, ಸುಧಾ ಸಂಗೊಳ್ಳಿ, ಶಿವಕುಮಾರ ಹಂಪಣ್ಣವರ, ಶ್ರೀಧರ ಶೆಟ್ಟರ ಮುಂತಾದವರು ಉಪಸ್ಥಿತರಿದ್ದರು. ಪಟ್ಟಣದ ಹಲವಾರು ಗಣ್ಯರು, ಮುಖಂಡರು, ಹಾನಗಲ್ ಕುಮಾರೇಶ್ವರರ ಭಕ್ತರು ಪಾಲ್ಗೊಂಡಿದ್ದರು. ಉಷಾ ಮಹೇಶ ಬೆಲ್ಲದ ಸ್ವಾಗತಿಸಿದರು. ಶರಣೆ ಶೋಭಾ ಛಬ್ಬಿ ನಿರೂಪಿಸಿದರು. ಪ್ರೇಮಾ ಅಂಗಡಿ ವಂದಿಸಿದರು. ಹಲವಾರು ಸಾಧಕರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.