ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ನಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟ ಮನೀಷ್ ಕರ್ಕಡ ಅವರ ಕುಟುಂಬಕ್ಕೆ ಒಟ್ಟು ₹ 1.20 ಕೋಟಿ ಆರ್ಥಿಕ ನೆರವು ಹಾಗೂ ವಿಮಾ ಸೌಲಭ್ಯ ನೀಡುವುದಾಗಿ ಸಂಸ್ಥೆ ಘೋಷಿಸಿದೆ.
ಮೃತರ ಕುಟುಂಬಕ್ಕೆ ಎಂಆರ್‌ಪಿಎಲ್‌ನಿಂದ ₹ 90 ಲಕ್ಷ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ. ಇದರ ಜತೆಗೆ ಗ್ರೂಪ್ ಟರ್ಮ್ ಲೈಫ್ ಇನ್ಶೂರೆನ್ಸ್ ಅಡಿ ಸುಮಾರು ₹ 10 ಲಕ್ಷ ಹಾಗೂ ವರ್ಕ್‌ಮೆನ್ ಕಾಂಪೆನ್ಸೇಷನ್ ಪಾಲಿಸಿ ಅಡಿ ಸುಮಾರು ₹ 20 ಲಕ್ಷ ವಿಮಾ ಸೌಲಭ್ಯ ದೊರೆಯಲಿದೆ. ಹೀಗಾಗಿ ಕುಟುಂಬಕ್ಕೆ ಒಟ್ಟಾರೆ ಸುಮಾರು ₹ 1.20 ಕೋಟಿ ನೆರವು ಮತ್ತು ವಿಮಾ ಪ್ರಯೋಜನ ಲಭಿಸಲಿದೆ ಎಂದು ಸಂಸ್ಥೆ ತಿಳಿಸಿದೆ.
ಇದೇ ವೇಳೆ ಎಂಆರ್‌ಪಿಎಲ್‌ನ ದ್ವಿತೀಯ ಹಂತದ ಕಾರ್ಮಿಕರಿಗೆ ಮೆಡಿಕ್ಲೇಮ್ ವಿಮೆ ಒದಗಿಸುವ ಪ್ರಸ್ತಾವನೆಯನ್ನೂ ಸಿದ್ಧಪಡಿಸಲಾಗುತ್ತಿದೆ. ಈ ಕುರಿತು ಚರ್ಚೆ ನಡೆಯುತ್ತಿದ್ದು, ದಕ್ಷಿಣ ಕನ್ನಡ ಸಂಸದರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.-------------