ಎಂಎಸ್‌ಪಿಎಲ್‌ ಕಾರ್ಖಾನೆ ವಿಸ್ತರಣೆಯಾದರೆ 27 ಹೊಗೆ ಕೊಳವೆ

KannadaprabhaNewsNetwork |  
Published : Sep 21, 2025, 02:01 AM IST
20ಕೆಪಿಎಲ್31 ಕೊಪ್ಪಳ ಬಳಿ  ಬಿಎಸ್ ಬಿಎಲ್ ಕಾರ್ಖಾನೆ ಸ್ಥಾಪಿಸುವುದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವುದು. | Kannada Prabha

ಸಾರಾಂಶ

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯಿಂದ ಸೆ. 18ರಿಂದ 24ರ ವರೆಗೆ ಕಾರ್ಖಾನೆಗಳ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳ ಸ್ಥಾಪನೆ ವಿರೋಧಿಸಿ ಪರಿಸರ ಜಾಗೃತಿ ಸಪ್ತಾಹ ನಡೆಯಿತು.

ಕೊಪ್ಪಳ: ಎಂಎಸ್‌ಪಿಎಲ್‌ ಬಲ್ದೋಟ ಕಾರ್ಖಾನೆ ವಿಸ್ತರಣೆಯಾದರೆ ಇಪ್ಪತ್ತೇಳು ಹೊಗೆ ಕೊಳವೆಗಳು ಬರುತ್ತವೆ ಎಚ್ಚರ ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಆಕ್ರೋಶದಿಂದ ಎಚ್ಚರಿಸಿದ್ದಾರೆ.

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯಿಂದ ಸೆ. 18ರಿಂದ 24ರ ವರೆಗೆ ಕಾರ್ಖಾನೆಗಳ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳ ಸ್ಥಾಪನೆ ವಿರೋಧಿಸಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾವು ಯಾರೂ ಉಸಿರಾಡುತ್ತೇವೆ, ಅವರೆಲ್ಲ ಎಚ್ಚರಗೊಳ್ಳಬೇಕಾದ ಕಾಲ ಬಂದಿದೆ. ಎಂಎಸ್‌ಪಿಎಲ್‌ ವಿಸ್ತರಣೆ ಜತೆಗೆ ಸುಮಿ ಎನ್ನುವಂತಹ ಜಪಾನಿನ ಇನ್ನೊಂದು ಕಂಪನಿಯೂ ಬರಲಿದೆ. ಇದರ ಹೊಗೆ ಬೂದಿಯಿಂದ ಇನ್ನಷ್ಟು ಪರಿಸರ ಹಾಳಾಗಲಿದೆ. ಗಿಣಿಗೇರಾ ಅಲ್ಲ, ನಗರ ಬಗನಾಳ ಕಾಸನಕಂಡಿ ಈಗಾಗಲೇ ಹೊಗೆಬೂದಿಯಿಂದ ಹಾಳಾಗಿವೆ. ಅಲ್ಲಿಯ ಜನರಿಗೆ ಟಿಬಿ, ಕ್ಯಾನ್ಸರ್ ಬಂದಿದೆ. ಗವಿಶ್ರೀ ನಗರ, ಕಾಳಿದಾಸ ನಗರ, ಜಿಲ್ಲಾ ಕಚೇರಿಗೂ ಹೊಗೆ ಬರುತ್ತಿದೆ. ಆದ್ದರಿಂದ ಇನ್ಮುಂದೆ ಯಾವುದೇ ಕಾರ್ಖಾನೆ ಬರುವುದಕ್ಕೆ ಅವಕಾಶ ನೀಡಬಾರದು ಎಂದು ಕಿಡಿಕಾರಿದ್ದಾರೆ.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಬಸವರಾಜ್ ಶೀಲವಂತರ್ ಮಾತನಾಡಿ, ಯಾವುದೇ ಕಾರಣಕ್ಕೂ ಎಂಎಸ್‌ಪಿಎಲ್‌ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳ ಬರಬಾರದು ಎಂದರು.

ಗವಿಶ್ರೀ ನಗರದಲ್ಲಿ ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ ಮಾತನಾಡಿ, ಬೆಳಗ್ಗೆ ನೋಡಿದರೆ ಈಗಿರುವ ಬೃಹತ್ ಕಾರ್ಖಾನೆಗಳಿಂದ ನಮ್ಮ ಗವಿಶ್ರೀ ನಗರದ ಮನೆಗಳೆಲ್ಲ ಹೊಗೆ ಧೂಳು ಆಕ್ರಮಿಸಿಕೊಂಡಿರುತ್ತದೆ. ಮತ್ತೊಂದು ಬೃಹತ್ ಕಾರ್ಖಾನೆ ಬರುತ್ತಿದೆ. ಆವಾಗ ನಮ್ಮ ಸ್ಥಿತಿ ಊಹಿಸಿಕೊಳ್ಳುವುದು ಕಷ್ಟ ಎಂದರು.

ಅಹಿಂದ ಮುಖಂಡ ಕರೀಮ್ ಪಾಷಾ ಎಂ. ಗಚ್ಚಿನ ಮನಿ, ಕೆ.ಬಿ. ಗೋನಾಳ , ಎಸ್.ಎ. ಗಫಾರ್ ಮಾತನಾಡಿದರು. ಗವಿಶ್ರೀ ನಗರ, ಬಸವೇಶ್ವರ ವೃತ್ತ, ಅಶೋಕ ವೃತ್ತದಲ್ಲಿ ಹಿರಿಯ ಮುಖಂಡ ಡಿ.ಎಚ್. ಪೂಜಾರ. ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮುದುಕಪ್ಪ ಹೊಸಮನಿ ಮಾತನಾಡಿದರು. ಗುಡದಪ್ಪ ಭಂಗಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಹಂಚಳಪ್ಪ ಇಟಗಿ ಮುಂತಾದವರು ಭಾಗವಹಿಸಿದ್ದರು.

PREV

Recommended Stories

ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಟಾಕ್ಸಿಕ್‌ ಮುಂಬೈ ಶೂಟ್‌ ಮುಗಿಸಿ ಲಂಡನ್‌ಗೆ ಹಾರಿದ ಯಶ್‌