ಬುರುಡೆ ಸಿಕ್ಕ ಜಾಗದ ಮಣ್ಣು ಎಫ್‌ಎಸ್‌ಎಲ್‌ಗೆ

KannadaprabhaNewsNetwork |  
Published : Sep 08, 2025, 01:00 AM IST
ವಿಠ್ಠಲ ಗೌಡ | Kannada Prabha

ಸಾರಾಂಶ

ಧರ್ಮಸ್ಥಳ ಗ್ರಾಮದ ಬುರುಡೆ ಕೇಸಿನಲ್ಲಿ ಆರೋಪಿ ಚಿನ್ನಯ್ಯನಿಗೆ ಬುರುಡೆ ತಂದುಕೊಟ್ಟ ಸೌಜನ್ಯಳ ಮಾವ ವಿಠಲ ಗೌಡ ತೋರಿಸಿದ ಜಾಗದ ಸ್ಥಳ ಮಹಜರು ನಡೆಸಿರುವ ಎಸ್‌ಐಟಿ, ಅಲ್ಲಿನ ಮಣ್ಣನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದೆ.

 ಮಂಗಳೂರು/ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಬುರುಡೆ ಕೇಸಿನಲ್ಲಿ ಆರೋಪಿ ಚಿನ್ನಯ್ಯನಿಗೆ ಬುರುಡೆ ತಂದುಕೊಟ್ಟ ಸೌಜನ್ಯಳ ಮಾವ ವಿಠಲ ಗೌಡ ತೋರಿಸಿದ ಜಾಗದ ಸ್ಥಳ ಮಹಜರು ನಡೆಸಿರುವ ಎಸ್‌ಐಟಿ, ಅಲ್ಲಿನ ಮಣ್ಣನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದೆ. ಈ ಸ್ಥಳದಲ್ಲಿ ಮತ್ತೆ ಎಲುಬಿನ ಅವಶೇಷ ಪತ್ತೆಯಾಗಿದೆ, ಅದನ್ನೂ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಹೇಳಲಾಗಿದ್ದರೂ ಎಸ್‌ಐಟಿ ಅದನ್ನು ದೃಢಪಡಿಸಿಲ್ಲ.

ಈ ಮಧ್ಯೆ, ಬುರುಡೆ ಗ್ಯಾಂಗ್‌ಗೆ ಆರೋಪಿ ಚಿನ್ನಯ್ಯನನ್ನು ಪರಿಚಯಿಸಿದ್ದೇ ಸೌಜನ್ಯಳ ಮಾವ ವಿಠಲ ಗೌಡ. ನೇತ್ರಾವತಿ ಸ್ನಾನಘಟ್ಟ ಸಮೀಪದ ಬಂಗ್ಲೆಗುಡ್ಡೆ ಕಾಡಿನಿಂದ ಚಿನ್ನಯ್ಯನಿಗೆ ಬುರುಡೆ ತಂದುಕೊಟ್ಟಿದ್ದೂ ವಿಠಲ ಗೌಡ. ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಅವಶೇಷದ ಬುರುಡೆ ಅದಾಗಿತ್ತು. ಹೀಗಾಗಿ, ವಿಠಲ ಗೌಡ ಹಾಗೂ ಜಯಂತ್‌ ಸಮ್ಮುಖದಲ್ಲಿ, ಎಸ್‌ಐಟಿ ಭಾನುವಾರ ಅವರನ್ನು ಕರೆದುಕೊಂಡು ಹೋಗಿ ಸ್ಥಳದ ಮಹಜರು ನಡೆಸಿದ್ದು, ಈ ಪ್ರದೇಶದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ.ಚಿನ್ನಯ್ಯನಿಗೆ ನಾನೇ ಬುರುಡೆ ಕೊಟ್ಟಿದ್ದು:

ಚಿನ್ನಯ್ಯನಿಗೆ ಬಂಗ್ಲೆಗುಡ್ಡ ಕಾಡಿನಿಂದ ನಾನೇ ತಲೆಬುರುಡೆ ತಂದುಕೊಟ್ಟಿದ್ದೇನೆ ಎಂದು ವಿಠಲ ಗೌಡ ಎಸ್‌ಐಟಿ ಅಧಿಕಾರಿಗಳಿಗೆ ತನಿಖೆ ವೇಳೆ ತಿಳಿಸಿದ್ದಾನೆ. ಗಿರೀಶ್ ಮಟ್ಟಣ್ಣವರ್ ಕೂಡ ತನಿಖೆ ವೇಳೆ, ಎಸ್‌ಐಟಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ವಿಠಲ ಗೌಡನೇ ಚಿನ್ನಯ್ಯನಿಗೆ ಬುರುಡೆ ತಂದು ಕೊಟ್ಟಿದ್ದು ಎಂದು ತಿಳಿಸಿದ್ದರು. ಹೀಗಾಗಿ, ವಿಠಲ ಗೌಡನನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ, ಸ್ಥಳ ಮಹಜರು ನಡೆಸಲಾಗಿತ್ತು. ಹೀಗಾಗಿ, ಯಾವುದೇ ಕ್ಷಣದಲ್ಲಿ ವಿಠಲ ಗೌಡನನ್ನು ಎಸ್‌ಐಟಿ ಬಂಧಿಸುವ ಸಾಧ್ಯತೆ ಇದೆ.

ಈ ಪರಿಸರ ವಿಠಲ ಗೌಡಗೆ ಚಿರಪರಿಚಿತ:

ನೇತ್ರಾವತಿ ನದಿ ಪರಿಸರದಲ್ಲಿ ಅನಾಥ ಶವ ಹಾಗೂ ಆತ್ಮಹತ್ಯೆ ಮಾಡಿಕೊಂಡವರ ಶವಗಳನ್ನು ಚಿನ್ನಯ್ಯ ಹೂಳುತ್ತಿದ್ದ ಮಾಹಿತಿ ವಿಠಲ ಗೌಡಗೆ ತಿಳಿದಿತ್ತು. ಅಲ್ಲದೆ, ಬಂಗ್ಲೆಗುಡ್ಡೆ ಕಾಡಿನಲ್ಲಿ ಅಸ್ಥಿಪಂಜರಗಳಿರುವ ರಹಸ್ಯ ಕೂಡ ವಿಠಲ ಗೌಡನಿಗೆ ಮೊದಲೇ ಗೊತ್ತಿತ್ತು. ಧರ್ಮಸ್ಥಳದ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಬುರುಡೆಗಳಿವೆ. ಆ ತಲೆ ಬುರುಡೆಗಳನ್ನು ನಾನು ನೋಡಿದ್ದೇನೆ ಎಂದು ಕುಡ್ಲ ರಾಂಪೇಜ್ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ವಿಠಲ ಗೌಡ ಒಪ್ಪಿಕೊಂಡಿದ್ದ. ಬಂಗ್ಲೆಗುಡ್ಡೆ, ನೇತ್ರಾವತಿ ಭಾಗದ ಕಾಡಿನಲ್ಲಿ ಬುರುಡೆ ಎಲುಬುಗಳು ಇವೆ. ಬಹಳ ಹಿಂದಿನ ಎಲುಬುಗಳು ಈ ಕಾಡಿನಲ್ಲಿ ಸಿಗುತ್ತವೆ ಎಂದೂ ಹೇಳಿದ್ದ.

ನೇತ್ರಾವತಿ ಸ್ನಾನಘಟ್ಟದ ಬಳಿ ಹೋಟೆಲ್‌ನಲ್ಲಿ ಇದ್ದಾಗ ವಿಠಲ ಗೌಡ ಇಲ್ಲಿನ ಕಾಡಿನಲ್ಲಿ ಸುತ್ತಾಡಿದ್ದ. ಈ ಭಾಗದ ಕಾಡಿನಲ್ಲಿ ಬುರುಡೆ, ಅಸ್ಥಿಪಂಜರ ಇರುವುದನ್ನು ವಿಠಲ ಗೌಡ ಗಮನಿಸಿದ್ದ. ಆತ್ಮಹತ್ಯೆ ಮಾಡಿಕೊಂಡವರ ಅಸ್ಥಿಪಂಜರಗಳು ಕಾಡಿನಲ್ಲಿ ಇದ್ದವು. ಯಾರೂ ಆ ಜಾಗಗಳಿಗೆ ಹೋಗದ ಕಾರಣ ಹೊರ ಜಗತ್ತಿಗೆ ತಿಳಿಯುತ್ತಿರಲಿಲ್ಲ. ಆದರೆ, ವಿಠಲ ಗೌಡನಿಗೆ ಬಂಗ್ಲೆಗುಡ್ಡೆ ಕಾಡಿನ ಅಸ್ಥಿಪಂಜರ ರಹಸ್ಯ ಗೊತ್ತಿತ್ತು. ಹೀಗಾಗಿಯೇ ಬುರುಡೆ ಗ್ಯಾಂಗ್‌ಗೆ ಬಂಗ್ಲೆಗುಡ್ಡೆಯಿಂದ ಬುರುಡೆ ತಂದುಕೊಟ್ಟಿದ್ದ. ಆ ವೇಳೆ, ಬುರುಡೆ ತೆಗೆಯುವುದರ ವಿಡಿಯೋ ಕೂಡ ಮಾಡಲಾಗಿತ್ತು. ವಿಠಲ ಗೌಡನಿಂದ ಚಿನ್ನಯ್ಯನ ಪರಿಚಯವಾದ ಬಳಿಕ, ಮುಂದಿನ ಕಾರ್ಯತಂತ್ರಗಳ ಬಗ್ಗೆ ಪ್ಲ್ಯಾನ್‌ ರೂಪಿಸಿದ್ದು ಗಿರೀಶ್‌ ಮಟ್ಟಣ್ಣವರ್‌. ಈ ಪ್ಲ್ಯಾನ್‌ಗೆ ಚಿನ್ನಯ್ಯ ಪಾತ್ರಧಾರಿ ಆಗಿದ್ದ. ಈ ಪ್ಲ್ಯಾನ್‌ನ್ನು ಕಾರ್ಯಗತಗೊಳಿಸಲು ಬುರುಡೆ ತಂಡ 2014ರಲ್ಲಿ ಧರ್ಮಸ್ಥಳ ಬಿಟ್ಟಿದ್ದ ಚಿನ್ನಯ್ಯನಿಗಾಗಿ ಹುಡುಕಾಟ ನಡೆಸಿತ್ತು. ವಿಠಲ ಗೌಡ ನೀಡಿದ ಮಾಹಿತಿಯಂತೆ ಹುಡುಕಾಟ ನಡೆಸಿದಾಗ ಚಿನ್ನಯ್ಯ ಸಿಕ್ಕಿದ್ದ.

ಇನ್ನು, ಬಂಗ್ಲೆಗುಡ್ಡೆ ಕಾಡಿನಿಂದ ಬುರುಡೆ ತರಲು ವಿಠಲ ಗೌಡನಿಗೆ ಸಹಕರಿಸಿದ್ದು, ಕಾರು ಚಾಲಕ ಪ್ರದೀಪ್ ಗೌಡ ಎಂದು ಎಸ್‌ಐಟಿಗೆ ತಿಳಿದು ಬಂದಿದೆ. ಹೀಗಾಗಿ, ಪ್ರದೀಪ್ ಗೌಡನ ವಿಚಾರಣೆ ಕೂಡ ನಡೆಸಲಾಗಿದೆ. ಕತ್ತಿ ಹಾಗೂ ಗೋಣಿಚೀಲ ಹಿಡಿದುಕೊಂಡು ಪ್ರದೀಪ್‌ ಕೂಡ ಕಾಡಿಗೆ ಹೋಗಿದ್ದ. ಇಬ್ಬರೂ ರಾತ್ರಿ ವೇಳೆ ಬಂಗ್ಲೆಗುಡ್ಡೆಗೆ ಹೋಗಿ, ಬುರುಡೆ ಇರುವುದನ್ನು ಖಾತರಿ ಪಡಿಸಿಕೊಂಡಿದ್ದರು.ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟ ಸಮೀಪದ ಬಂಗ್ಲೆಗುಡ್ಡೆ ಪರಿಸರದಿಂದ ಚಿನ್ನಯ್ಯ ಬುರುಡೆ ತಂದ ಶಂಕೆ ಹಿನ್ನೆಲೆಯಲ್ಲಿ ಶನಿವಾರ ಸೌಜನ್ಯಾ ಮಾವ ವಿಠಲ ಗೌಡ ಹಾಗೂ ಜಯಂತ್‌ ಸಮ್ಮುಖದಲ್ಲಿ, ಎಸ್‌ಐಟಿ ಅವರು ಮಹಜರು ನಡೆಸಿದ್ದು, ಈ ಪ್ರದೇಶಕ್ಕೆ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!