ಕಲಬುರಗಿ : ‘ನಿನ್ನದು 4 ಎಕರೆ ಹಾಳಾಗಿರಬಹುದು, ನನ್ನದು ನಲವತ್ತು ಎಕರೆ ಹಾಳಾಗಿದೆ, ಬರೀ ತೊಗರಿ ಮಾತ್ರವಲ್ಲ, ಹೆಸರು, ಉದ್ದು, ಹತ್ತಿ, ಸೂರ್ಯಕಾಂತಿ ಬೆಳೆಗಳು ಸಹ ಹಾಳಾಗಿವೆ. ನಾನು ಯಾರಿಗೆ ಹೋಗಿ ಹೇಳಲಿ?. ಇಲ್ಲಿ ಬಂದು ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸ ಮಾಡಬೇಡ. ಆರು ಹಡೆದವಳ ಮುಂದೆ ಮೂರು ಹಡೆದವಳು ಬಂದು ಹೇಳಿದಂಗಾಯ್ತು ನಿನ್ನ ಕಥೆ’. ಅತಿವೃಷ್ಟಿಯಿಂದ ಹಾಳಾಗಿ ಹೋದ ತೊಗರಿ ಬೆಳೆಯನ್ನು ಕಿತ್ತು ತಂದು ತೋರಿಸಿದ ಯುವಕನಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತರಾಟೆಗೆ ತೆಗೆದುಕೊಂಡ ಪರಿಯಿದು.
ನಗರಕ್ಕೆ ಆಗಮಿಸಿದ್ದ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ನಿವಾಸದಲ್ಲಿ ಪಕ್ಷದ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸುತ್ತಿದ್ದರು. ಆಗ ಅವರ ನಿವಾಸಕ್ಕೆ ಆಗಮಿಸಿದ ಯುವಕನೊಬ್ಬ, ಅತಿವೃಷ್ಟಿಯಿಂದ ಹಾಳಾಗಿದ್ದ ತೊಗರಿ ಬೆಳೆ ತೋರಿಸಿ, ‘ನಾಲ್ಕು ಎಕರೆಯಲ್ಲಿ ಬೆಳೆದಿದ್ದ ತೊಗರಿ ಬೆಳೆ ಹಾಳಾಗಿದೆ, ಸರ್’ ಎಂದ. ಈ ವೇಳೆ ಕೋಪಗೊಂಡ ಖರ್ಗೆ, ‘ತೊಗರಿ ಬೆಳೆ ಹಾನಿಯಾಗಿದ್ದನ್ನು ನನಗೆ ತೋರಿಸಲು ಬಂದಿರುವೆಯಾ?. ನಿನ್ನ ತೊಗರಿ ಎಷ್ಟು ಹಾಳಾಗಿದೆ?’ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ‘ನಾಲ್ಕು ಎಕರೆಯಲ್ಲಿನ ಬೆಳೆ ಹಾಳಾಗಿದೆ ಸರ್’ ಎಂದು ಯುವಕ ವಿನಮ್ರನಾಗಿ ನುಡಿದ.
‘ನಿನ್ನದು ನಾಲ್ಕು ಎಕರೆ ಹಾಳಾಗಿರಬಹುದು, ನನ್ನದು ನಲವತ್ತು ಎಕರೆಯ ಬೆಳೆ ಹಾಳಾಗಿದೆ. ಬರೀ ತೊಗರಿ ಮಾತ್ರವಲ್ಲ, ಹೆಸರು, ಉದ್ದು, ಹತ್ತಿ, ಸೂರ್ಯಕಾಂತಿ ಬೆಳೆಗಳೂ ಸಹ ಹಾಳಾಗಿವೆ. ಬರೀ ಪ್ರಚಾರಕ್ಕಾಗಿ ಈ ರೀತಿ ಬರಬೇಡ. ಆರು ಹಡೆದವಳ ಮುಂದೆ ಮೂರು ಹಡೆದವಳು ಬಂದು ಹೇಳಿದಂಗೆ ನನಗೆ ಹೇಳುತ್ತಿರುವೆ’ ಎಂದು ಯುವಕನನ್ನು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹರಿಹಾಯ್ದ ಖರ್ಗೆ, ದೇಶದ ಹಲವೆಡೆ ಅತಿವೃಷ್ಟಿಯಿಂದಾಗಿ ಬೆಳೆಗಳು ಹಾಳಾಗಿವೆ. ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ, ಮೋದಿ ಸರ್ಕಾರ ಈ ಬಗ್ಗೆ ಗಂಭೀರತೆಯನ್ನೇ ಹೊಂದಿಲ್ಲ ಎಂದು ಆಕ್ರೋಶ ಹೊರಹಾಕಿದರು.