ಮುಡಾ ಪ್ರಕರಣ ಸಿಬಿಐದಿಂದ ತನಿಖೆಯಾಗಲಿ

KannadaprabhaNewsNetwork | Published : Jul 8, 2024 12:30 AM

ಸಾರಾಂಶ

ಮುಡಾ ಪ್ರಕರಣದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಹಾಗಿದ್ದರೆ ಇದರ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಬೇಕು

ಗದಗ: ಮುಡಾ ಸೈಟು ಹಂಚಿಕೆ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಮಾಡಿದರೆ ಸತ್ಯ ಹೊರ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಹಾಗಿದ್ದರೆ ಇದರ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಬೇಕು. ಒಂದು ಸಿಬಿಐ ಅಥವಾ ನ್ಯಾಯಾಧೀಶರಿಂದ ತನಿಖೆಯಾಗಬೇಕು. ಬೇರೆ ಬೇರೆ ಸರ್ಕಾರದಲ್ಲಿ ಸ್ಕೀಂನಲ್ಲಿ ಜಮೀನು ಹಂಚಿಕೆಯಾಗಿರುತ್ತದೆ. ಸ್ಕೀಮ್‌ನ ನ್ಯಾಯಸಮ್ಮತವಾಗಿ ಮಾಡಿಕೊಂಡಿದ್ದರೆ ತಕರಾರಿಲ್ಲ, ಆದರೆ, ಸ್ಕೀಂ ಬದಲಾವಣೆ ಮಾಡಿಕೊಂಡರೆ ತನಿಖೆಯಿಂದ ಹೊರಬರುತ್ತದೆ ಎಂದು ಹೇಳಿದರು.

ಡೆಂಘೀ ಎದುರಿಸುವಲ್ಲಿ ವಿಫಲ:

ಡೆಂಘೀ ಎದುರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರ್ಕಾರ ಬಡವರ ಜೀವನ ಜತೆ ಚೆಲ್ಲಾಟ ಆಡುತ್ತಿದೆ. ಡೆಂಘೀ ಪ್ರಕರಣಗಳು ಒಂದೂವರೆ ತಿಂಗಳಿಂದ ಪ್ರಾರಂಭವಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ, ಆರೋಗ್ಯ ಇಲಾಖೆ, ಡಿಎಚ್‌ಒ ತೆಗೆದುಕೊಳ್ಳಬೇಕಿತ್ತು. ಆದರೆ, ಯಾವುದೇ ಮುಂಜಾಗ್ರತಾ ಕ್ರಮ ಸರ್ಕಾರ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಹೊಸ ಮಳೆ ಬಂದಾಗ ನಿಂತ ನೀರಿನಿಂದ ಬರುವ ರೋಗವಿದು. ಜಾಗೃತಿ ಮೂಡಿಸುವುದು, ಔಷಧ ಸಿಂಪಡಿಸುವ ಕೆಲಸ ಮಾಡಬೇಕಿತ್ತು, ಆ ಕೆಲಸ ಮಾಡಿಲ್ಲ. ಡೆಂಘೀ ಜ್ವರ ಬಂದರೂ ಅವುಗಳನ್ನು ಬೇರೆ ಕೆಟಗೇರಿಗಳಲ್ಲಿ ಹಾಕಿ ಡೆಂಘೀ ಕಡಿಮೆ ಇದೆ ಅಂತ ತೋರಿಸುವ ಪ್ರಯತ್ನ ಮಾಡಿದರು. ಟೆಸ್ಟ್ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಈಗಲೂ ಟೆಸ್ಟ್ ಕಡಿಮೆ ಆಗುತ್ತಿವೆ. ಸರ್ಕಾರದ ಅಧಿಕೃತ ಸಂಖ್ಯೆ7 ಸಾವಿರ ಇದೆ ಅಂತಿದ್ದಾರೆ. ಆದರೆ, ಇದರ ಎರಡು ಪಟ್ಟು ರೋಗಿಗಳ ಸಂಖ್ಯೆ ಇದೆ. ಅದನ್ನು ಮುಚ್ಚಿಟ್ಟಿದ್ದಾರೆ‌‌. ಸಾಕಷ್ಟು ಸಾವು-ನೋವು ಆಗುತ್ತಿದೆ. ಆರೋಗ್ಯ ಇಲಾಖೆಯ ಮಂತ್ರಿಗಳು, ಅಧಿಕಾರಿಗಳು ಕೇವಲ ಸಭೆ ಮಾಡಿ‌ ಎಲ್ಲ ಸರಿ ಇದೆ ಎಂಬ ಭಾವನೆಯಲ್ಲಿದ್ದಾರೆ. ಚಿಕಿತ್ಸೆ, ಔಷಧಿ, ಟೆಸ್ಟ್ ಸರಿಯಾಗಿ ಮಾಡಬೇಕು. ಅನೇಕ ಜಿಲ್ಲಾಸ್ಪತ್ರೆಗಳಲ್ಲಿ ತಪಾಸಣೆ, ಸರಿಯಾದ ಔಷಧ ವ್ಯವಸ್ಥೆ ಇಲ್ಲ. ಇನ್ನು ತಾಲೂಕಿನ ಆಸ್ಪತ್ರೆಗಳಲ್ಲಿ ಕೇಳುವವರಿಲ್ಲ. ಒಟ್ಟಿನಲ್ಲಿ ಡೆಂಘೀ ಜ್ವರ ಎದುರಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ‌ ಎಂದು ಆರೋಪಿಸಿದರು.

ಸಾರ್ವಜನಿಕರು, ಬಡವರು ಸಾಕಷ್ಟು ಸಾವು-ನೋವುಗಳಾಗಿವೆ. ಅತ್ಯಂತ ಚಿಂತಾಜನಕವಾದ ಪರಿಸ್ಥಿತಿ ರಾಜ್ಯದಲ್ಲಿ ಎದುರಾಗಿದೆ. ಕೂಡಲೆ ಯುದ್ದೋಪಾದಿಯಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ಮಾಡಿ ಡೆಂಘೀ ವಿರುದ್ಧ ಕ್ರಮ ಕೈಗೊಳ್ಳಬೇಕು. ದೊಡ್ಡ ಪ್ರಮಾಣದಲ್ಲಿ ಹಬ್ಬಿದರೆ, ಮುಂದೆ ಬೇರೆ ರೋಗಕ್ಕೂ ಅಂಟಿಕೊಳ್ಳುತ್ತದೆ. ಈ ರೋಗದಿಂದ ಗುಣಮುಖರಾಗಲು ಮೂರು ಅಥವಾ ಆರು ತಿಂಗಳು ಬೇಕಾಗುತ್ತದೆ. ಆದ್ದರಿಂದ ಇದನ್ನು ವಾರ್ ಫುಂಟಿಗ್‌ನಲ್ಲಿ ತೆಗೆದುಕೊಂಡು ಎಲ್ಲ ಜಿಲ್ಲೆಗಳಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಗಮನಿಸಿ ಎಂದು ಆರೋಗ್ಯ ಸಚಿವರಿಗೆ ಒತ್ತಾಯ ಮಾಡಿದರು.

ಸರ್ಕಾರ ತಕ್ಷಣ ಟೆಸ್ಟ್ ಹೆಚ್ಚಿಸಿ, ಔಷಧ, ಚುಚ್ಚುಮದ್ದು ಹೆಚ್ಚಿನ ರೀತಿಯಲ್ಲಿ ಸರಬರಾಜು ಮಾಡಬೇಕು. ಇದನ್ನು ಪ್ರಾರಂಭಿಕ ಹಂತದಲ್ಲೇ ತಡಗಟ್ಟಬೇಕಿತ್ತು. ಬಡವರಿಗೆ ತಪಾಸಣೆ ಮಾಡಿಸುವ, ಚಿಕಿತ್ಸೆ ಪಡೆಯುವ ಸ್ಥಿತಿ ಇಲ್ಲ. ಆದ್ದರಿಂದ ಸರ್ಕಾರ ಎಲ್ಲರಿಗೂ ಉಚಿತ ತಪಾಸಣೆ ವ್ಯವಸ್ಥೆ ಮಾಡಬೇಕು ಎಂದರು.

Share this article