ಶಿವಮೊಗ್ಗದಲ್ಲಿ ಝೀಕಾ ವೈರಸ್‌ ಪತ್ತೆಯಾಗಿದ್ದ ವೃದ್ಧ ಸಾವು, ಆತಂಕ

Published : Jul 07, 2024, 01:26 PM IST
Zika virus

ಸಾರಾಂಶ

ಡೆಂಘೀ ಭೀತಿ ನಡುವೆಯೇ ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ಝೀಕಾ ವೈರಸ್ ಪತ್ತೆಯಾಗಿರುವುದು ಮಲೆನಾಡಿಗರಲ್ಲಿ ಆತಂಕ ಮನೆ ಮಾಡಿದೆ.

ಶಿವಮೊಗ್ಗ :  ಡೆಂಘೀ ಭೀತಿ ನಡುವೆಯೇ ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ಝೀಕಾ ವೈರಸ್ ಪತ್ತೆಯಾಗಿರುವುದು ಮಲೆನಾಡಿಗರಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲೆಯಲ್ಲಿ ಜ್ವರದಿಂದ ಬಳಲುತ್ತಿದ್ದ ಇಬ್ಬರಲ್ಲಿ ಝೀಕಾ ವೈರಸ್‌ ಪತ್ತೆಯಾಗಿದ್ದು, ಇವರಲ್ಲಿ ಒಬ್ಬರು ಶನಿವಾರ ಮೃತಪಟ್ಟಿದ್ದಾರೆ. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಝೀಕಾ ವೈರಸ್‌ನಿಂದ ಈ ಸಾವು ಸಂಭವಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಜನ ಕಳೆದ ಕೆಲ ದಿನಗಳಿಂದ ಡೆಂಘೀಯಿಂದ ಹೈರಾಣಾಗಿದ್ದಾರೆ. ಇದರ ಜತೆಗೆ ಶಿವಮೊಗ್ಗ ನಗರದ 74 ವರ್ಷದ ವೃದ್ಧರೊಬ್ಬರು ಹಾಗೂ ಸಾಗರದ ಯುವಕನೊಬ್ಬನಲ್ಲಿ ಝೀಕಾ ವೈರಸ್‌ ಪತ್ತೆಯಾಗಿದೆ.

ಜ್ವರದಿಂದ ಬಳಲುತ್ತಿದ್ದ 74 ವರ್ಷದ ವೃದ್ಧ ಜೂ.19ರಂದು ಆಸ್ಪತ್ರೆಗೆ ದಾಖಲಾಗಿದ್ದರು. 21ರಂದು ಅವರ ರಕ್ತ ಪರೀಕ್ಷೆ ನಡೆಸಿದಾಗ ಝೀಕಾ ವೈರಸ್‌ ಪತ್ತೆಯಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜು.4ರಂದು ಅವರು ಬಿಡುಗಡೆಯಾಗಿದ್ದರು. ಆದರೆ ಇದೀಗ ಶನಿವಾರ ಅವರು ದಿಢೀರ್‌ ಮೃತಪಟ್ಟಿದ್ದಾರೆ. ಇದು ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಈ ಸಾವಿಗೆ ಝೀಕಾ ವೈರಸ್‌ ಕಾರಣವಲ್ಲ ಎಂದಿರುವ ಆರೋಗ್ಯ ಇಲಾಖೆ, ಅವರು ಬಹು ಅಂಗಾಂಗ ವೈಫಲ್ಯ ಸೇರಿ ಇತರೆ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರು, ಈ ಕಾರಣದಿಂದಲೇ ಮೃತಪಟ್ಟಿದ್ದಾರೆ ಎಂದಿದೆ.

ಇನ್ನು ಜೂ.29ರಂದು ಜ್ವರದಿಂದಾಗಿ ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕನನ್ನು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ರವಾನಿಸಲಾಗಿತ್ತು. ಅಲ್ಲಿ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಝೀಕಾ ವೈರಸ್‌ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಯುವಕನಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದ್ದು, ಯುವಕನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.ಯುವಕನಿಗೆ ಝಿಕಾ ವೈರಸ್ ಪತ್ತೆ ಹಿನ್ನೆಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಆತನ ಸಂಪರ್ಕದಲ್ಲಿದ್ದವರ ರಕ್ತದ ಮಾದರಿ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

PREV
Stay informed with the latest news and developments from Shivamogga district (ಶಿವಮೊಗ್ಗ ನ್ಯೂಸ್) — covering local politics, community issues, environment, tourism, culture, crime and civic matters in Shivamogga district on Kannada Prabha News.

Recommended Stories

ಅಂಚೆ ಕಚೇರಿಗಳ ಬಲವರ್ಧನೆ ವಿಷಯ ಪ್ರಸ್ತಾಪಿಸಿದ ಸಂಸದ ಬಿವೈಆರ್‌
ಬೆಳಗಾವಿಯಲ್ಲಿ ಸೊರಬದ ''''ಜನಧ್ವನಿ''''