ಧಾರವಾಡ:
ಮುಡಾ ಹಗರಣದ ತನಿಖೆ ನಡೆಸುವ ಲೋಕಾಯುಕ್ತ ಸಂಸ್ಥೆ ಮೇಲೆ ಸರ್ಕಾರ ಹಸ್ತಕ್ಷೇಪ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಪ್ರಕರಣ ಸಿಬಿಐಗೆ ವಹಿಸುವಂತೆ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ರಿಟ್ ಅರ್ಜಿ ಸಲ್ಲಿಸಿದ್ದರು.
ಮುಖ್ಯಮಂತ್ರಿಗಳ ಪರವಾಗಿ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಮತ್ತು ರಾಜ್ಯಸಭಾ ಸದಸ್ಯ, ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ, ರಾಜ್ಯ ಸರ್ಕಾರದ ಪರವಾಗಿ ಕಪಿಲ್ ಸಿಬಲ್, ಎಜಿ ಶಶಿಕಿರಣ್ ಶೆಟ್ಟಿ ಮತ್ತು ಹಿಂದಿನ ಭೂ ಮಾಲೀಕ ದೇವರಾಜು ಪರ ದುಷ್ಯಂತ್ ದವೆ ಮತ್ತು ದೂರುದಾರ ಸ್ನೇಹಮಯಿ ಕೃಷ್ಣ ಪರ ಮಣೀಂದರ್ ಸಿಂಗ್ ಹಾಗೂ ವಸಂತಕುಮಾರ ಅವರು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಾದ-ಪ್ರತಿವಾದ ಮಂಡಿಸಿದರು.ವಿಚಾರಣೆ ಆರಂಭದಲ್ಲಿ ನ್ಯಾಯಪೀಠವು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ವಾದವನ್ನು ಸೀಮಿತಗೊಳಿಸಿ ಎಂದು ಎರಡೂ ಕಡೆ ವಕೀಲರಿಗೆ ಸೂಚನೆ ನೀಡಿತು. ಅಲ್ಲದೇ, ಈವರೆಗಿನ ತನಿಖೆ ವರದಿ ಸಲ್ಲಿಸಿಲ್ಲವೇಕೆ? ಕೂಡಲೇ ಈವರೆಗಿನ ತನಿಖೆ ವರದಿ ಸಲ್ಲಿಸಿ ಎಂದು ಲೋಕಾಯುಕ್ತ ಪೊಲೀಸರ ಪರ ವಕೀಲರಿಗೆ ಸೂಚಿಸಿತು.
ತನಿಖೆ ನಿಷ್ಪಕ್ಷಪಾತವಾಗಿರಬೇಕು. ಜನರಲ್ಲಿ ವಿಶ್ವಾಸ ಮೂಡಿಸುವಂತಿರಬೇಕು. ರಾಜಕಾರಣಿಗಳು ಈ ಪ್ರಕರಣದಲ್ಲಿರುವ ಕಾರಣ ನಿಷ್ಪಕ್ಷಪಾತ ತನಿಖೆ ಕಷ್ಟ. ಹೀಗಾಗಿ ಸ್ವತಂತ್ರ ತನಿಖೆ ನಡೆಸುವ ಅಗತ್ಯವಿದೆ. ಮೂವರು ಸದಸ್ಯರ ಸಮಿತಿಯು ತನಿಖೆಯ ಉಸ್ತುವಾರಿ ತೆಗೆದುಕೊಂಡಿದೆ. ರಾಜ್ಯ ಸರ್ಕಾರದಿಂದ ನೇಮಕವಾದ ಪೊಲೀಸರೇ ಇಲ್ಲಿ ತನಿಖೆ ನಡೆಸುತ್ತಾರೆ. ಲೋಕಾಯುಕ್ತ ಪೊಲೀಸರು ನಿಯೋಜನೆ ಮೇಲೆ ಬಂದಿರುತ್ತಾರೆ. ಹೀಗಾಗಿ, ನಿಷ್ಪಕ್ಷಪಾತ ತನಿಖೆ ಕಷ್ಟಸಾಧ್ಯ. ₹ 56 ಕೋಟಿ ಮೊತ್ತದ ನಿವೇಶನಗಳನ್ನು ಅಕ್ರಮವಾಗಿ ಪಡೆಯಲಾಗಿದೆ. ಮುಖ್ಯಮಂತ್ರಿ ಪತ್ನಿ ಈಗ 14 ಸೈಟ್‌ಗಳನ್ನು ಮಿಂಚಿನ ವೇಗದಲ್ಲಿ ಹಿಂತಿರುಗಿಸಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣದಿಂದ ಆರೋಪಿಗಳನ್ನು ರಕ್ಷಿಸಲು ಮುಂದಾಗಿದೆ ಎಂದು ಸ್ನೇಹಮಯಿ ಕೃಷ್ಣ ಪರ ಮಣೀಂದರ್ ಸಿಂಗ್ ವಾದ ಮಂಡಿಸಿದರು.
ಮುಖ್ಯಮಂತ್ರಿಗಳ ಪರ ಹಿರಿಯ ವಕೀಲ ರವಿವರ್ಮ ಕುಮಾರ್, ಸಂಬಂಧವಿಲ್ಲದ ವಾದಮಂಡನೆ ಮಾಡುತ್ತಿದ್ದಾರೆಂದು ಆಕ್ಷೇಪ ವ್ಯಕ್ತಪಡಿಸಿದರು. ಇದೇ ವೇಳೆ ರಿಟ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮುಖ್ಯಮಂತ್ರಿ ಪರ ವಕೀಲ ಕಪಿಲ್ ಸಿಬಲ್ ಸಮಯ ಕೋರಿದರು. ಜ.27ಕ್ಕೆ ವಿಚಾರಣೆ ಮುಂದೂಡುವಂತೆ ಮನವಿ ಮಾಡಿದರು. ಮನವಿ ಪರಿಗಣಿಸಿ ಹೈಕೋರ್ಟ್ ವಿಚಾರಣೆಯನ್ನು ಜ.27ಕ್ಕೆ ಮುಂದೂಡಿತು.