ಕನ್ನಡಪ್ರಭ ವಾರ್ತೆ ಬೆಂಗಳೂರು
ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣಕ್ಕೆ ಸಂಬಂಧಿಸಿ ಮೈಸೂರು ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ದೂರುದಾರ ಸ್ನೇಹಮಯಿ ಕೃಷ್ಣ ಅವರ ತಕರಾರು ಅರ್ಜಿ ವಿಚಾರಣೆ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏ.15ಕ್ಕೆ ಕಾಯ್ದಿರಿಸಿದೆ.ಬುಧವಾರ ಇ.ಡಿಗೆ ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ಪ್ರಶ್ನಿಸಲು ಅಧಿಕಾರ ಇದೆಯೇ? ಎಂಬುದರ ಬಗ್ಗೆ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶವನ್ನು ಕಾಯ್ದಿರಿಸಿದ್ದಾರೆ.
ಇ.ಡಿಯ ತಕರಾರು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಲೋಕಾಯುಕ್ತ ಪೊಲೀಸರ ಪರ ವಕೀಲರು, ಇ.ಡಿ ಅರ್ಜಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಇ.ಡಿಯಿಂದ ಒಂದು ಪತ್ರ ಮತ್ತು 27 ದಾಖಲೆಗಳನ್ನು ನೀಡಿದ್ದು, ಆ ದಾಖಲೆಗಳನ್ನು ಪರಿಗಣಿಸಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ಬಿ ರಿಪೋರ್ಟ್ ಪ್ರಶ್ನಿಸಲು ಇ.ಡಿಯು ಅರ್ಹ ನೊಂದ ವ್ಯಕ್ತಿಯಲ್ಲ. ಹೀಗಾಗಿ ಇಂಥ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ವಾದಿಸಿದರು.ಇ.ಡಿ ಪರ ವಕೀಲರು, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಇ.ಡಿ ಶಾಸನಬದ್ಧ ಮಾಹಿತಿದಾರ. ಇ.ಡಿ ಅಧಿಕಾರ ಸಮರ್ಥಿಸುವ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ ಎಂದು ವಾದಿಸಿದರು. ವಾದ ಪ್ರತಿವಾದ ಆಲಿಸಿದ ಕೋರ್ಟ್ ಏ.15ರಂದು ಆದೇಶ ಕಾಯ್ದಿರಿಸಿದೆ.
ಇ.ಡಿ, ಸ್ಥಳೀಯ ಪೊಲೀಸರ ತನಿಖೆ ಪರಸ್ಪರ ಪೂರಕವಾಗಿರಬೇಕು ಎಂದು ಹೇಳಿದೆ. ಪ್ರಕರಣದಲ್ಲಿ ನೊಂದ ವ್ಯಕ್ತಿಗಳಿಗೆ ಮುಖವಿರಬೇಕು ಎಂದಿಲ್ಲ. ಇ.ಡಿ ಸಹ ಬಿ ರಿಪೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಬಹುದು.ಈಗಾಗಲೇ ದೂರುದಾರ ಸ್ನೇಹಮಹಿ ಕೃಷ್ಣ ಅವರ ತಕಾರರು ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದೆ. ಇ.ಡಿ ಮತ್ತು ಸ್ನೇಹಮಯಿ ಕೃಷ್ಣ ಅವರ ತಕರಾರು ಅರ್ಜಿ ಒಂದೇ ಆಗಿರುವುದರಿಂದ ಎರಡು ಅರ್ಜಿಗಳ ಆದೇಶವನ್ನು ಮಂಗಳವಾರಕ್ಕೆ ಕಾಯ್ದಿರಿಸಲಾಗಿದೆ.