ಎಸ್‌ಐಟಿ ತನಿಖೆ ಬೇಡ। ನಿಯಮ ಬಾಹಿರವಾಗಿ ನೀಡಿದ ನಿವೇಶನಗಳ ಹಕ್ಕುಪತ್ರ ರದ್ದುಪಡಿಸಿ
ಮೈಸೂರಿನ ಮೂಡಾ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಟಿ ತನಿಖೆ ನೀಡಬಾರದು. ನಿಯಮ ಬಾಹಿರವಾಗಿ ಎಷ್ಟು ನಿವೇಶನಗಳನ್ನು ಹಂಚಲಾಗಿದೆಯೋ ಅವುಗಳ ಹಕ್ಕುಪತ್ರಗಳನ್ನು ರದ್ದುಪಡಿಸಬೇಕು. ಫಲಾನುಭವಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆಗೆ ಆಗ್ರಹಿಸಿ ಶುಕ್ರವಾರ ಮೈಸೂರಿನ ಮೂಡಾ ಕಚೇರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಧಾನ ಸಭೆ ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.ಮೂಡಾದಲ್ಲಿ ಸಾವಿರಾರು ಕೋಟಿ ರು. ಬೆಲೆಬಾಳುವ ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ನಿಯಮ ಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ. ಇದು, ಸುಮಾರು 4-5 ಸಾವಿರ ಕೋಟಿ ರು. ಹಗರಣ. ಈ ವಿಷಯದಲ್ಲಿ ರಾಜ್ಯದ ಮುಖ್ಯ ಮಂತ್ರಿ ಅವರು ಬುದ್ಧಿವಂತಿಕೆ ಉತ್ತರ ನೀಡುವ ಮೂಲಕ ಜನರನ್ನು ಯಾಮಾರಿಸುತ್ತಿದ್ದಾರೆ. ಈ ನಡವಳಿಕೆ ಪ್ರಾಮಾಣಿಕತೆಯ ಸಮರ್ಥನೆ ಅಲ್ಲ, ಅವರ ಪತ್ನಿ ಮೇಲೆ ಬಂದಿರುವ ಆರೋಪ ಇದಾಗಿದೆ ಎಂದ ಸಿ.ಟಿ. ರವಿ ಒಮ್ಮೆ ನೋಟಿಫಿಕೇಷನ್ ಆಗಿರುವ ಭೂಮಿಯನ್ನು ಖರೀದಿ ಮಾಡಿರುವುದು ಅಪರಾಧ ಎಂದರು.
ರಾಜಕಾರಣದಲ್ಲಿ ಈ ರೀತಿ ಆರೋಪಗಳು ಬಂದ ಸಂದರ್ಭದಲ್ಲಿ ಮತ್ತೆ ಅಧಿಕಾರದಲ್ಲಿ ಮುಂದುವರಿಯದೆ ಇರುವುದು ಹಲವು ನಿರ್ದೇಶನಗಳು ನಮ್ಮ ಮುಂದೆ ಇವೆ. ಈ ಪ್ರಕರಣದಲ್ಲಿ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆಗಿದೆ. ಹಾಗಾಗಿ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದೇ ಜುಲೈ 15 ರಿಂದ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಈ ಬಗ್ಗೆ ಚರ್ಚೆಯನ್ನು ಕೈಗೆತ್ತಿಕೊಳ್ಳಲಿದೆ ಎಂದ ಅವರು, ನಗರ ಹಾಗೂ ಪಟ್ಟಣಗಳಲ್ಲಿ ನಿವೇಶನಗಳ ಬಗ್ಗೆ ಪಬ್ಲಿಕ್ ಆಡಿಟ್ ನಡೆಸಬೇಕೆಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ನಗರಾಧ್ಯಕ್ಷ ಪುಷ್ಪರಾಜ್ ಹಾಗೂ ಸೋಮಶೇಖರ್ ಉಪಸ್ಥಿತರಿದ್ದರು.ಪೋಟೋ ಫೈಲ್ ನೇಮ್ 11 ಕೆಸಿಕೆಎಂ 1