ಪಕ್ಷದ ಕಾರ್ಯಾಲಯದಿಂದ ಮೆರವಣಿಗೆಯಲ್ಲಿ ಹೊರಟ ಕಾರ್ಯಕರ್ತರು ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪಕ್ಷದ ಕಾರ್ಯಾಲಯದಿಂದ ಮೆರವಣಿಗೆಯಲ್ಲಿ ಹೊರಟ ಕಾರ್ಯಕರ್ತರು ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ, ಸಮಾಜವಾದಿ, ಅಹಿಂದಾವಾದಿ ಎಂಬ ಮುಖವಾಡ ಧರಿಸಿ ಕೋಟಿಗಟ್ಟಲೇ ಹಣ ಲೂಟಿ ಮಾಡುತ್ತಿರುವ ಮುಖ್ಯಮಂತ್ರಿಗಳು ಜನತೆ ಕಣ್ಣಿಗೆ ಮಂಕುಬೂದಿ ಎರಚಿ ರಾಜಕೀಯ ನಾಟಕದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.ಸಿದ್ದರಾಮಯ್ಯನವರ ಭಾರೀ ಭ್ರಷ್ಟಾಚಾರ ಬಯಲಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಆದೇಶಿಸಿದ್ದರೂ ಮುಖ್ಯಮಂತ್ರಿ ಸ್ಥಾನ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದಾರೆ. ಕುರ್ಚಿ ಆಸೆ ಹಾಗೂ ಹಗರಣಗಳ ಸರಮಾಲೆ ಹಾಕಿಕೊಂಡ ಮುಖ್ಯಮಂತ್ರಿ ಪರಿಶಿಷ್ಟ ಜಾತಿಯವರ ಹಣಕ್ಕೆ ಕನ್ನಹಾಕಿ ಜನತೆಗೆ ವಿಷ ಉಣಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಕಾಂಗ್ರೆಸ್ ಪಕ್ಷ ಸಂವಿಧಾನದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರೆ ನೈತಿಕವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಪ್ರಕರಣ ಎದುರಿಸು ವಂತಾಗಲಿ ಎಂದ ಅವರು, ಹಿಂದೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಆರೋಪ ಬಂದಾಗ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಲಿ ಎಂದಿದ್ದವರು ಇದೀಗ ಅವರ ಸ್ಥಾನಕ್ಕೆ ಕುತ್ತು ಸಂಭವಿಸಿದಾಗ ರಾಜಕೀಯ ದೊಂಬರಾಟ ಮಾಡುತ್ತಿದ್ದಾರೆ ಎಂದು ದೂರಿದರು.ಸಿದ್ದರಾಮಯ್ಯ ಅನೇಕ ದಶಕಗಳ ಕಾಲ ರಾಜಕೀಯದಲ್ಲಿ ತೊಡಗಿಸಿಕೊಂಡ ಕಾರಣ ಸ್ಥಾನಕ್ಕೆ ಗೌರವಿಸಿ ರಾಜೀನಾಮೆ ಸಲ್ಲಿಸಬೇಕು. ಇದನ್ನು ಮೀರಿ ಭಂಡತನದಿಂದ ಮುಂದುವರಿದಲ್ಲಿ ಕಾನೂನಿನ ಪ್ರಕಾರ ಬಂಧನಕ್ಕೆ ಒಳಪಡಿಸುವ ಕಾಲ ಸನ್ನಿಹಿತವಾಗಲಿದ್ದು ಕೂಡಲೇ ಎಚ್ಚೆತ್ತು ಕೊಳ್ಳಬೇಕು. ಇಲ್ಲವಾದಲ್ಲಿ ದಿನಂಪ್ರತಿ ರಾಜ್ಯಾದ್ಯಂತ ಬಿಜೆಪಿ ಹೋರಾಟ ರೂಪಿಸಲಿದೆ ಎಂದು ಎಚ್ಚರಿಸಿದರು.ಬಿಜೆಪಿ ನಗರ ಘಟಕ ಅಧ್ಯಕ್ಷ ಕೆ.ಎಸ್.ಪುಷ್ಪರಾಜ್ ಮಾತನಾಡಿ, ಭ್ರಷ್ಟಚಾರ ಹಣೆಪಟ್ಟಿ ಹೊತ್ತಿರುವ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವ ಮುನ್ನವೇ ಪದತ್ಯಾಗ ಮಾಡಿ ಸಂವಿಧಾನಕ್ಕೆ ಗೌರವ ಸಲ್ಲಿಸಬೇಕು ಎಂದರು.ಅಹಿಂದಾ, ಬಡವರು, ದೀನ ದಲಿತರ ಉದ್ದಾರವೆಂಬ ಸಿದ್ದರಾಮಯ್ಯ ನಾಟಕೀಯ ಮುಖವಾಡ ಕಳಚಿಬಿದ್ದಿದೆ. ಸಿಎಂ ಸ್ಥಾನಕ್ಕೆ ಗೌರವದಿಂದ ರಾಜೀನಾಮೆ ಸಲ್ಲಿಸಬೇಕು. ಅತಿ ಆಸೆಯಿಂದ ಕುರ್ಚಿಗೆ ಅಂಟಿಕೊಂಡರೆ ಕಾನೂನು ಕಟ್ಟಳೇ ಮುಖಾಂತರ ಸ್ಥಾನದಿಂದ ಕೆಳಗಿಳಿಸಬೇಕಾಗುತ್ತದೆ ಎಂದು ಹೇಳಿದರು.ಬಿಜೆಪಿ ಮುಖಂಡ ಸಿ.ಎಚ್.ಲೋಕೇಶ್ ಮಾತನಾಡಿ, ಬಡವರು, ದೀನದಲಿತರ ಅಭಿವೃದ್ಧಿಗೆ ಒತ್ತು ಕೊಡುವನೆಂಬ ಮಾತು ನೀಡಿ ಪರಿಶಿಷ್ಟ ಜಾತಿ, ಪಂಗಡದ ಕೋಟ್ಯಾಂತರ ಹಣವನ್ನು ನೆರೆ ರಾಜ್ಯದ ಚುನಾವಣೆ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಈ ನಡುವೆ ಮುಡಾ ಹಗರಣದಲ್ಲಿ ಹಣ ಲೂಟಿ ಸಾಬೀತಾಗಿದೆ ಎಂದರು.ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ನಗರ ಅಧ್ಯಕ್ಷೆ ಪವಿತ್ರ ಮಧುಬಂಡಿ, ಜಿಲ್ಲಾ ಉಪಾಧ್ಯಕ್ಷ ಪ್ರೇಮ್‌ಕುಮಾರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಓಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಪ್ರೇಮ್‌ಕುಮಾರ್, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮುಖಂಡರುಗಳಾದ ಕೌಶಿಕ್, ಬಸವರಾಜ್, ಜಯವರ್ಧನ್, ಸೋಮಶೇಖರ್, ನವೀನ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. 19 ಕೆಸಿಕೆಎಂ 4ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಚಿಕ್ಕ ಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.