ಕನ್ನಡಪ್ರಭ ವಾರ್ತೆ ತುರುವೇಕೆರೆ
ತಮ್ಮ ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ತನ್ನ ಉಳಿವಿಗಾಗಿ ಬಿಜೆಪಿ ಸೇರಿಕೊಂಡಿದೆ. ದೇಶ ಉದ್ಧಾರ ಮಾಡಲು ಅಲ್ಲ. ತಮ್ಮ ಪಕ್ಷದ ಉದ್ಧಾರ ಮಾಡಿಕೊಳ್ಳಲು ಅಷ್ಟೆ. ಬಿಜೆಪಿ ಅಭ್ಯರ್ಥಿಯಾಗಿರುವ ಸೋಮಣ್ಣ ನವರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾರಣ ತಮ್ಮ ಜಾತಿ. ಆದರೆ ಈ ಕ್ಷೇತ್ರದಲ್ಲಿ ಜಾತಿ ರಾಜಕಾರಣ ನಡೆಯುವುದಿಲ್ಲ. ಈ ಕ್ಷೇತ್ರದ ಜನರಿಗೆ ಬಿಜೆಪಿಯ ಕೊಡುಗೆ ಏನು ಎಂಬುದು ತಿಳಿದಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಎಲ್ಲಾ ಪ್ರಮುಖ ಅಗತ್ಯವುಳ್ಳ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಾಗಾಗಿ ಜನರು ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ಕಾಯುತ್ತಿದ್ದಾರೆ ಎಂದು ಬೆಮಲ್ ಕಾಂತರಾಜ್ ಹೇಳಿದರು.
ವಿ.ಸೋಮಣ್ಣನವರಿಗೆ ಮಾಜಿ ಸಚಿವ ಮಾಧುಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪನವರ ಕುಟುಂಬದ ವಿರೋಧವಿದೆ. ಅವರು ಪ್ರಾಮಾಣಿಕವಾಗಿ ಸೋಮಣ್ಣನವರ ಪರ ಇರುತ್ತಾರೆಂದು ನಂಬುವುದು ಕಷ್ಟ ಎಂದು ಬೆಮಲ್ ಕಾಂತರಾಜ್ ಹೇಳಿದರು.ವಿ.ಸೋಮಣ್ಣನವರಿಗೆ ಹೋಲಿಸಿದರೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮುದ್ದಹನುಮೇಗೌಡರು ನೂರಕ್ಕೆ ನೂರರಷ್ಟು ಉತ್ತಮ ಅಭ್ಯರ್ಥಿ. ಸಾರ್ವಜನಿಕರೊಂದಿಗೆ ಉತ್ತಮ ಭಾಂಧವ್ಯ ಹೊಂದಿದ್ದಾರೆ. ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದ್ದಾರೆ. ಅಭ್ಯರ್ಥಿಯ ಬಗ್ಗೆ ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲವಿಲ್ಲ. ಹಾಗಾಗಿ ಮುದ್ದಹನುಮೇಗೌಡರು ಸುಮಾರು ೨ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುವುದು ಖಚಿತ ಎಂದು ಬೆಮಲ್ ಕಾಂತರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದು ಗ್ಯಾರಂಟಿ ಕೈಹಿಡಿಯುತ್ತವೆ:
ಮಾರ್ಚ್ ೨೩ ರಂದು ತುರುವೇಕೆರೆಗೆ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ, ಗೃಹ ಸಚಿವ ಡಾ.ಜಿ. ಪರಮೇಶ್ವರ್, ಸಚಿವ ಕೆ.ಎನ್. ರಾಜಣ್ಣ ಸೇರಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಆಗಮಿಸಲಿದ್ದಾರೆ. ಅಂದು ಸಂತೆ ಬೀದಿಯಲ್ಲಿರುವ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ. ನಂತರ ಪ್ರತಿ ಹೋಬಳಿ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಲಿದೆ. ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಬೆಮಲ್ ಕಾಂತರಾಜ್ ಮನವಿ ಮಾಡಿಕೊಂಡರು.
ಈ ಹಿಂದೆ ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಆಗಿದ್ದ ಮೈತ್ರಿಯ ವೇಳೆ ಅನ್ಯಾಯವಾಗಿತ್ತು. ಆ ಅನ್ಯಾಯವನ್ನು ಈಗ ಸರಿಪಡಿಸಲಾಗಿದೆ. ಮೈತ್ರಿಯಲ್ಲಿ ಜೆಡಿಎಸ್ ಗೆ ಬಿಟ್ಟುಕೊಡಬೇಕಾಗಿತ್ತು. ಈಗ ಪರಿಸ್ಥಿತಿ ಬೇರೆಯಾಗಿದೆ. ಬಿಜೆಪಿಗೆ ಮೋದಿ ಒಬ್ಬರೇ ಅಸ್ತ್ರ. ಅವರನ್ನು ಬಿಟ್ಟರೆ ಬೇರೆ ಏನಾದರೂ ಸಾಧನೆ ಇದೆಯಾ? ಇಲ್ಲ. ಮೋದಿಯವರು ಬಾಯಿ ಬಿಟ್ಟರೆ ಸುಳ್ಳು ಹೇಳ್ತಾರೆ. ಅದೂ ಜನರಿಗೆ ಗೊತ್ತಾಗಿದೆ. ಆದ್ದರಿಂದ ಬಿಜೆಪಿಗೆ ಸೋಲು ಖಚಿತ ಎಂದು ಬೆಮಲ್ ಕಾಂತರಾಜ್ ರವರು ಭವಿಷ್ಯ ನುಡಿದರು.