ಮುದ್ದಂಡ ಕಪ್‌ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ಚಾಲನೆ

KannadaprabhaNewsNetwork |  
Published : Mar 29, 2025, 12:37 AM IST
ಚಿತ್ರ : 28ಎಂಡಿಕೆ2 :  ಮಡಿಕೇರಿಯಲ್ಲಿ ಮುದ್ದಂಡ ಹಾಕಿ ಉತ್ಸವದ ಕ್ರೀಡಾ ಜ್ಯೋತಿ ಮೆರವಣಿಗೆ ನಡೆಸಲಾಯಿತು.  | Kannada Prabha

ಸಾರಾಂಶ

ಕೊಡವ ಕುಟುಂಬಗಳ ನಡುವಿನ 25ನೇ ವರ್ಷದ ಕೌಟುಂಬಿಕ ಹಾಕಿ ಪಂದ್ಯಾವಳಿ ಮುದ್ದಂಡ ಹಾಕಿ ಉತ್ಸವಕ್ಕೆ ಶುಕ್ರವಾರ ನಗರದಲ್ಲಿ ಚಾಲನೆ ನೀಡಲಾಯಿತು.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಕುಟುಂಬಗಳ ನಡುವಿನ 25ನೇ ವರ್ಷದ ಕೌಟುಂಬಿಕ ಹಾಕಿ ಪಂದ್ಯಾವಳಿ ಮುದ್ದಂಡ ಹಾಕಿ ಉತ್ಸವಕ್ಕೆ ಶುಕ್ರವಾರ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಅದ್ಧೂರಿ ಚಾಲನೆ ದೊರೆಯಿತು.

ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಮುಖ್ಯ ರಸ್ತೆಯ ಮೂಲಕ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನಕ್ಕೆ ಬೃಹತ್ ಮೆರವಣಿಗೆಯ ಮೂಲಕ ಕ್ರೀಡಾಜ್ಯೋತಿ ಕೊಂಡೊಯ್ಯಲಾಯಿತು. ಕ್ರೀಡಾ ಜ್ಯೋತಿಯ ಮೆರವಣಿಗೆ ಸಂದರ್ಭ ಜನರಲ್ ಕೆ.ಎಸ್. ತಿಮ್ಮಯ್ಯ ಪ್ರತಿಮೆ, ಮೇಜರ್ ಮಂಗೇರಿರ ಮುತ್ತಣ್ಣ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆಗೆ ಮಾಲಾರ್ಪರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಮಾಜಿ ಒಲಂಪಿಯನ್ ಅಂಜಪರವಂಡ ಬಿ. ಸುಬ್ಬಯ್ಯ, ಮೈದಾನದಲ್ಲಿ ಕ್ರೀಡಾ ಜ್ಯೋತಿ ಬೆಳಗಿದರು.

ಹಾಕಿ ಉತ್ಸವಕ್ಕೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಎ.ಎಸ್. ಪೊನ್ನಣ್ಣ, ಕೊಡವ ಕೌಟುಂಬಿಕ ಹಾಕಿ ಉತ್ಸವ ಉಗಮಕ್ಕೆ ಪಾಡಂಡ ಕುಟ್ಟಣಿ ಕುಟ್ಟಪ್ಪ ಕಾರಣಕರ್ತರಾಗಿದ್ದಾರೆ. ಈ ಹಾಕಿ ಉತ್ಸವ ಕ್ರೀಡೆಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಕೊಡವ ಸಂಸ್ಕೃತಿ, ಆಚಾರ - ವಿಚಾರ ಉಳಿಸಲು ಹೆಜ್ಜೆಯಾಗಿದೆ. ಕೊಡಗನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಕಾರ್ಯಕ್ರಮ ಇದಾಗಿದೆ ಎಂದು ಶ್ಲಾಘಿಸಿದರು.

ಒಂದು ತಿಂಗಳು ಸುಮಾರು 396 ಕುಟುಂಬವನ್ನು ಸೇರಿಸಿ ಹಾಕಿ ಉತ್ಸವ ನಡೆಸುವುದು ಸುಲಭವಲ್ಲ. ಹಲವಾರು ಸಂಕಷ್ಟದ ನಡುವೆ ಈ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲೂ ಈ ಉತ್ಸವ ನಿರಂತರವಾಗಿ ನಡೆಯಬೇಕಿದೆ. ಹಾಕಿ ಉತ್ಸವಕ್ಕೆ ಸರ್ಕಾರದಿಂದ ಕೂಡ ಒಂದು ಕೋಟಿ ರುಪಾಯಿ ಅನುದಾನ ದೊರಕಲಿದೆ. ಕ್ರೀಡೆಗೆ ಇರುವ ಸಹಕಾರ ಬೇರೆ ಯಾವುದಕ್ಕೂ ಇಲ್ಲ. ರಾಷ್ಟ್ರೀಯ ತಂಡದಲ್ಲಿ ಕೊಡಗಿನವರು ಹೆಚ್ಚಾಗಿದ್ದಾರೆ ಎಂದು ಹೇಳಿದರು.

ಸಂಸದ ಯದುವೀರ್ ಒಡೆಯರ್ ಮಾತನಾಡಿ, ಕೊಡಗಿನಲ್ಲಿ ಹಾಕಿ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಕುಟ್ಟಪ್ಪ ಕಾರ್ಯ ಸ್ಮರಣೀಯವಾಗಿದೆ. 30 ದಿನದಲ್ಲಿ 5 ಲಕ್ಷ ಜನರನ್ನು ನಿರೀಕ್ಷೆ ಮಾಡಲಾಗಿದೆ. ಮಹಿಳೆಯರಿಗೆ ಹಾಕಿ ಪಂದ್ಯ ಆಯೋಜಿಸಲಾಗಿರುವುದು ವಿಶೇಷ ಎಂದರು.

ಶಾಸಕ ಡಾ. ಮಂತರ್ ಮಾತನಾಡಿ, ಕ್ರೀಡೆಯಿಂದ ಹಲವು ಕೊಡವ ಕುಟುಂಬಗಳು ಒಟ್ಟು ಸೇರುತ್ತವೆ. ಮುದ್ದಂಡ ಕುಟುಂಬಕ್ಕೆ ಈ ಬಾರಿ ಗಿನ್ನಿಸ್ ದಾಖಲೆ ಮಾಡಲು ಉತ್ತಮ ಅವಕಾಶವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ ಮಾತನಾಡಿದರು.

ಕೊಡವ ಹಾಕಿ ಉತ್ಸವಕ್ಕೆ ಸಂಬಂಧಿಸಿದ ಮುದ್ದಂಡ ಹಾಕಿ ನಮ್ಮೆ ಸ್ಮರಣ ಸಂಚಿಕೆ ಹಾಗೂ ಬಿದ್ದಂಡ ನಾಣಯ್ಯ ರಚಿತ ಕೊಡವ ಹಾಕಿ ಹಾಡನ್ನು ಇದೇ ಸಂದರ್ಭ ಗಣ್ಯರು ಅನಾವರಣಗೊಳಿಸಿದರು.

ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ, ಮೈದಾನದಲ್ಲಿ ‘ಬೆಳ್ಳಿಯ ಸ್ಟಿಕ್’ನಿಂದ ‘ಬೆಳ್ಳಿಯ ಚೆಂಡು’ ತಳ್ಳುವ ಮೂಲಕ ಹಾಕಿ ಪಂದ್ಯಾಟಕ್ಕೆ ಚಾಲನೆ ನೀಡಿದರು.

ಮಾಜಿ ಸಭಾಪತಿ ಕೆ.ಜಿ. ಬೋಪಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಮುದ್ದಂಡ ಹಾಕಿ ಉತ್ಸವ ಅಧ್ಯಕ್ಷ ರಶಿನ್ ಸುಬ್ಬಯ್ಯ, ಗೌರವಾಧ್ಯಕ್ಷ ಎಂ.ಬಿ. ದೇವಯ್ಯ, ಕೊಡಗು ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ, ಮಾಜಿ ಎಂಎಲ್ಸಿ ವೀಣಾ ಅಚಯ್ಯ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

..................

24 ಕುಟುಂಬಗಳಿಗೆ ಗೌರವ

1997ರಿಂದ 2024ರ ವರೆಗೆ ಕೌಟುಂಬಿಕ ಹಾಕಿ ಉತ್ಸಗಳನ್ನು ಆಯೋಜಿಸಿದ 24 ಕೊಡವ ಕುಟುಂಬಗಳನ್ನು ಮುದ್ದಂಡ ಕುಟುಂಬದಿಂದ ಬಾಳೆ ದಿಂಡನ್ನು ಕಡಿಯುವ ಮೂಲಕ ಹಾಗೂ ಬಾನಲ್ಲಿ ಗುಂಡು ಹಾರಿಸುವ ಮೂಲಕ ಗೌರವಿಸಲಾಯಿತು. ಪ್ರತಿ ಕುಟುಂಬದ ಪ್ರಮುಖರು ಬಾಳೆ ಕಡಿಯುವುದಕ್ಕೂ ಮುನ್ನ ಬಾನಲ್ಲಿ ಗುಂಡು ಹಾರಿಸಿದರು. ಕೊಡವ ಹಾಕಿ ಅಕಾಡೆಮಿಯ ಧ್ವಜವನ್ನು ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಹಾಗೂ ಮುದ್ದಂಡ ಕುಟುಂಬದ ಧ್ವಜವನ್ನು ಮುದ್ದಂಡ ಕುಟುಂಬದ ಪ್ರಮುಖರು ಅನಾವರಣ ಮಾಡಿದರು. ಉತ್ಸವದ ಅಂಗವಾಗಿ ಮುದ್ದಂಡ ಕುಟುಂಬದ ಲಾಂಛನ ಹೊತ್ತ ಬೃಹತ್ ಏರ್ ಬಲೂನ್ ಅನ್ನು ಮೈದಾನದಲ್ಲಿ ಹಾರಿಬಿಡಲಾಗಿತ್ತು.

ಆಯೋಜಕ ತಂಡ-ಹಾಕಿ ಅಕಾಡೆಮಿ ತಂಡಗಳಿಗೆ ಗೆಲವು

ಕೊಡವ ಕೌಟುಂಬಿಕ ‘ಮುದ್ದಂಡ ಕಪ್ ಹಾಕಿ ನಮ್ಮೆ’ಯ ಉದ್ಘಾಟನಾ ಸಮಾರಂಭದ ಆಕರ್ಷಕ ಪ್ರದರ್ಶನ ಪಂದ್ಯಗಳಲ್ಲಿ ಹಾಕಿ ಉತ್ಸವದ ಆಯೋಜಕ ತಂಡ ಮತ್ತು ಕೊಡವ ಹಾಕಿ ಅಕಾಡೆಮಿ ಇಲೆವೆನ್ ತಂಡಗಳು ಸೊಗಸಾದ ಆಟದ ಮೂಲಕ ಗೆಲವು ಸಾಧಿಸಿದವು.

ಪಂದ್ಯಾವಳಿ ಆಯೋಜಕ ತಂಡವು ಮೊದಲ ಪ್ರದರ್ಶನ ಪಂದ್ಯದಲ್ಲಿ ಕೊಡಗು ಜಿಲ್ಲಾಡಳಿತ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿತು. ವಿಜೇತ ತಂಡದ ಪರವಾಗಿ ಅಮ್ಮುಣಿಚಂಡ ವಿಘ್ನೇಶ್ ಬೋಪಣ್ಣ, ಮುದ್ದಂಡ ಆದ್ಯ ಪೂವಣ್ಣ ಹಾಗೂ ನೆಲ್ಲಮಕ್ಕಡ ಚಂಗಪ್ಪ ತಲಾ 1 ಗೋಲು ಸಿಡಿಸಿ ಗಮನ ಸೆಳೆದರು.

ದ್ವಿತೀಯ ಪ್ರದರ್ಶನ ಪಂದ್ಯದಲ್ಲಿ ಕೊಡವ ಹಾಕಿ ಅಕಾಡೆಮಿ ಇಲೆವೆನ್ ತಂಡ 3-0 ಗೋಲುಗಳ ಅಂತರದಿಂದ ಕರ್ನಾಟಕ ಇಲೆವೆನ್ ತಂಡವನ್ನು ಪರಾಭವಗೊಳಿಸಿತು. ರೋಚಕತೆಯಿಂದ ಕೂಡಿದ್ದ ಪಂದ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ವಿವಿಧ ಬಗೆಯ ಮಳಿಗೆಗಳು

ಹಾಕಿ ಉತ್ಸವದ ಅಂಗವಾಗಿ ಮೈದಾನದಲ್ಲಿ ಸುಮಾರು 20ಕ್ಕೂ ಅಧಿಕ ವಿವಿಧ ಬಗೆಯ ಮಳಿಗೆಗಳನ್ನು ತೆರೆಯಲಾಗಿದೆ. ಕೊಡವ ಸಾಂಪ್ರದಾಯಿಕ ಆಹಾರ ಕಡುಂಬಿಟ್ಟು-ಪಂದಿಕರಿ, ನೂಪುಟ್ಟು-ಕೋಳಿಕರಿ, ವಿವಿಧ ಖಾದ್ಯಗಳ ಮಳಿಗೆಗಳು, ತಂಪು ಪಾನೀಯ, ಕಾರುಗಳ ಪ್ರದರ್ಶನ, ಎಳನೀರು, ಕಬ್ಬು ಜ್ಯೂಸ್ ಸೇರಿದಂತೆ ಹಲವು ಮಳಿಗೆಗಳು ತೆರೆಯಲಾಗಿದೆ.

ಇಂದಿನ ಪಂದ್ಯಾಟ

ಕ್ರೀಡಾಂಗಣ ‘ಎ’

ಬೆಳಗ್ಗೆ 9 ಗಂಟೆಗೆ ಅಯ್ಯರಣಿಯಂಡ - ಅಡ್ಡಂಡ (ಸೂರ್ಲಬ್ಬಿ)

ಬೆಳಗ್ಗೆ 10 ಗಂಟೆಗೆ ಬೊಳ್ಳಚೆಟ್ಟಿರ - ಗಾಂಡಂಗಡ

ಬೆಳಗ್ಗೆ 11 ಗಂಟೆಗೆ ಬೊಳ್ಳಿಮಾಡ - ಬೇರೆರಾ

ಮಧ್ಯಾಹ್ನ 12 ಗಂಟೆಗೆ ಅಜ್ಜಮಕ್ಕಡ - ಅಜ್ಜಿನಂಡ

ಮಧ್ಯಾಹ 1 ಗಂಟೆಗೆ ಬೊಳ್ಳೇರಪಂಡ -ಪುಲಿಯಂಡ

ಮಧ್ಯಾಹ್ನ 2 ಗಂಟೆಗೆ ಗುಡ್ಡಂಡ – ಕುಂಡ್ಯೋಳಂಡ

ಮಧ್ಯಾಹ್ನ 3 ಗಂಟೆಗೆ ಮುಕ್ಕಾಟಿರ (ಕಡಗದಾಳು) - ಚೆಟ್ಟಿರ

ಸಂಜೆ 4 ಗಂಟೆಗೆ ಕುಟ್ಟೇರ -ಮೊಳ್ಳೇರ ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದೆ.

ಕ್ರೀಡಾಂಗಣ ‘ಬಿ’

ಬೆಳಗ್ಗೆ 9 ಗಂಟೆಗೆ ಮೂವೇರ - ಚೆರುವಾಳಂಡ

ಬೆಳಗ್ಗೆ 10 ಗಂಟೆಗೆ ಕಾಂಗೀರ - ಪಾಲಚಂಡ

ಬೆಳಗ್ಗೆ 11 ಗಂಟೆಗೆ ಹಂಚೆಟ್ಟಿರ-ಮಾಚಂಗಡ

ಮಧ್ಯಾಹ್ನ 12 ಗಂಟೆಗೆ ಓಡಿಯಂಡ – ಮೋರ್ಕಂಡ

ಮಧ್ಯಾಹ್ನ 1 ಗಂಟೆಗೆ ಸರ್ಕಂಡ-ಉದ್ದಿನಾಡಂಡ

ಮಧ್ಯಾಹ್ನ 2 ಗಂಟೆಗೆ ತಡಿಯಂಗಡ-ಕನ್ನಿಕಂಡ

ಮಧ್ಯಾಹ್ನ 3 ಗಂಟೆಗೆ ಕಳ್ಳೀರ-ಬೊಪ್ಪಡ್ತಂಡ

ಸಂಜೆ 4 ಗಂಟೆಗೆ ತಾತಪಂಡ - ಮೂಡೆರಾ

ಕ್ರೀಡಾಂಗಣ ‘ಸಿ’

ಬೆಳಗ್ಗೆ 11 ಗಂಟೆಗೆ ಕೊಟ್ರಮಾಡ - ತಾಪಂಡ

ಮಧ್ಯಾಹ್ನ 12 ಗಂಟೆಗೆ ಚೆಯ್ಯಂಡಿರ-ತಾಣಚ್ಚಿರ

ಮಧ್ಯಾಹ್ನ 1 ಗಂಟೆಗೆ ಚೋಕಂಡ - ಮೂಕಚಂಡ

ಮಧ್ಯಾಹ್ನ 2 ಗಂಟೆಗೆ ಬಡುಮಂಡ-ಮದ್ರೀರ

ಮಧ್ಯಾಹ್ನ 3 ಗಂಟೆಗೆ ನಂಬ್ಯಪಂಡ- ಕುಮ್ಮಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''