ಅನಿವಾರ್ಯ ಕಾರಣಗಳಿಂದಾಗಿ ಅಗತ್ಯ ವಸ್ತುಗಳ ಬೆಲೆ ಕೊಂಚ ಏರಿಕೆಯಾಗಿದೆ. ಬಡವರಿಗೆ ಉಚಿತವಾಗಿ ನೀಡುತ್ತಿದ್ದೇವೆ. ಸ್ಥಿತಿವಂತರಿಗೆ ಒಂದಿಷ್ಟು ದರ ಹೆಚ್ಚಳವಾಗಲಿದೆ ಬೆಲೆ ಹೆಚ್ಚಳವನ್ನು ಸಚಿವ ಎಚ್.ಕೆ. ಪಾಟೀಲ ಸಮರ್ಥಿಸಿಕೊಂಡರು
ಹುಬ್ಬಳ್ಳಿ: ಹಾಲು ಮತ್ತು ವಿದ್ಯುತ್ ದರ ಹೆಚ್ಚಳ ಮಾಡಿರುವುದನ್ನು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಸಮರ್ಥಿಸಿಕೊಂಡಿದ್ದು, ಯಾವುದೇ ರಾಜ್ಯಕ್ಕೆ ಹೋಲಿಸಿದರೂ ನಮ್ಮ ರಾಜ್ಯದಲ್ಲೇ ಹಾಲಿನ ದರ ಕಡಿಮೆಯಿದೆ. ವಿದ್ಯುತ್ ದರ ಹೆಚ್ಚಳ ಮಾಡುವುದು ಅನಿವಾರ್ಯವಿತ್ತು ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನಿವಾರ್ಯ ಕಾರಣಗಳಿಂದಾಗಿ ಅಗತ್ಯ ವಸ್ತುಗಳ ಬೆಲೆ ಕೊಂಚ ಏರಿಕಯಾಗಿದೆ. ಬಡವರಿಗೆ ಉಚಿತವಾಗಿ ನೀಡುತ್ತಿದ್ದೇವೆ. ಸ್ಥಿತಿವಂತರಿಗೆ ಒಂದಿಷ್ಟು ದರ ಹೆಚ್ಚಳವಾಗಲಿದೆ ಎಂದ ಅವರು, ಹಾಲಿನ ದರ ದೇಶದಲ್ಲಿ ಎಲ್ಲ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಕಡಿಮೆಯಿದೆ. ದರ ಇಷ್ಟು ಹೆಚ್ಚಳವಾದರೂ ಇತರೆ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ದರ ಕಡಿಮೆಯಿದೆ. ರೈತರ ಹಿತದೃಷ್ಟಿಯಿಂದ, ಬೇಡಿಕೆಯ ಅನುಗುಣವಾಗಿ ಹಾಲಿನ ದರ ಹೆಚ್ಚಳ ಮಾಡಲಾಗಿದೆ. ಹೆಚ್ಚಳ ಮಾಡಲಾದ ₹4 ರೈತರಿಗೆ ನೀಡಲಾಗುತ್ತದೆ ಎಂದು ಸಮರ್ಥಿಸಿಕೊಂಡರು.ರಾಜ್ಯ ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ. ಹು-ಧಾ ಮಹಾನಗರ ಪಾಲಿಕೆಗೆ ನೀಡಬೇಕಾದ ಅನುದಾನ ನೀಡಲಾಗಿದೆ. ಪಾಲಿಕೆ ನೌಕರರ ವೇತನಾನುದಾನದ ಕುರಿತು ಮಾಹಿತಿಯಿಲ್ಲ. ಬಿಜೆಪಿಯವರು ಸರ್ಕಾರದ ಮೇಲೆ ಕೇವಲ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.
ಕಾನೂನು ಬಾಹಿರ ಯಾವುದೇ ಚಟುವಟಿಕೆಯಾದರೂ ನಮ್ಮ ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಸಂವಿಧಾನ ರಕ್ಷಿಸಲು ಕಾಂಗ್ರೆಸ್ ಕಟಿಬದ್ಧವಾಗಿದೆ ಎಂದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ಕುರಿತ ಪ್ರಶ್ನೆಗೆ ಉತ್ತರಿಸಿ, ಇದು ಬಿಜೆಪಿ ವಿಚಾರ. ಇದರ ಬಗ್ಗೆ ನಾನು ಯಾವುದೇ ರೀತಿಯ ಹೇಳಿಕೆ ನೀಡುವುದಿಲ್ಲ. ಅವರನ್ನು ಪಕ್ಷಕ್ಕೆ ಕರೆದುಕೊಳ್ಳುವುದು, ಬಿಡುವುದು ಹೈಕಮಾಂಡ್‌ಗೆ ಬಿಟ್ಟ ತೀರ್ಮಾನವಾಗಿದೆ ಎಂದರು.ಸಚಿವ ರಾಜಣ್ಣ ಪುತ್ರ ಕೊಲೆ ಆರೋಪ ವಿಚಾರವಾಗಿ ಕೇಳಿದ ಪ್ರಶ್ನೆಗೆ, ನೀವು ಅದನ್ನು ಗೃಹ ಸಚಿವರನ್ನೇ ಕೇಳಬೇಕು. ಅದರ ಬಗ್ಗೆ ಮಾಹಿತಿ ಇಲ್ಲ ಎಂದರು. ಹನಿಟ್ರ್ಯಾಪ್ ಅಂದರೆ ಏನು ಎಂಬುದೇ ನನಗೆ ಗೊತ್ತಿಲ್ಲ ಎಂದು ನುಡಿದರು.
ರಾಜ್ಯದಲ್ಲಿ ಬೇಸಿಗೆಯ ಬೇಗೆ ಜಾಸ್ತಿಯಾಗುತ್ತಿದೆ. ಕುಡಿಯುವ ನೀರಿನ ನಿರ್ವಹಣೆ ಮಾಡುವುದು ಅತ್ಯಂತ ಮಹತ್ವದ ಕೆಲಸ. ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಜಲಾಶಯಗಳಿಂದ ನೀರು ಸಮರ್ಪಕವಾಗಿ ಬಿಡುಗಡೆ ಮಾಡುವ ಕುರಿತು ಚರ್ಚೆ ಮಾಡಲಾಗಿದೆ. ರಾಜ್ಯಾದ್ಯಂತ ಸೂಕ್ತ ನಿರ್ಣಯ ತೆಗೆದುಕೊಳ್ಳಲು ಸಮಿತಿ ರಚನೆ ಮಾಡಲಾಗಿದೆ ಎಂದರು.