ಮಲೆಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ

KannadaprabhaNewsNetwork | Published : Mar 29, 2025 12:36 AM

ಸಾರಾಂಶ

ಹನೂರು ಮಲೆಮಾದೇಶ್ವರ ಬೆಟ್ಟದಲ್ಲಿ ಚಂದ್ರಮಾನ ಯುಗಾದಿ ಹಬ್ಬದ ಪ್ರಯುಕ್ತ ದೇವಾಲಯದ ಪ್ರಾರಂಭದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಹನೂರು

ಪ್ರಸಿದ್ಧ ಪುರಾಣ ಧಾರ್ಮಿಕ ಪುಣ್ಯಸ್ಥಳ ಮಲೆಮಾದೇಶ್ವರ ಬೆಟ್ಟದಲ್ಲಿ ಯುಗಾದಿ ಹಬ್ಬದ ಜಾತ್ರಾ ಮಹೋತ್ಸವ ಪ್ರಯುಕ್ತ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಸಂಭ್ರಮ ಸಡಗರದೊಂದಿಗೆ ಜರುಗಿತು.ಮಲೆಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಚಂದ್ರಮಾನ ಯುಗಾದಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾದೇಶ್ವರನಿಗೆ ಸಾಲೂರು ಮಲ್ಲಿಕಾರ್ಜುನ ಸ್ವಾಮಿ ದಿವ್ಯ ಸಾನ್ನಿಧ್ಯದಲ್ಲಿ ಬುಡಕಟ್ಟು ಸಮುದಾಯದ ಬೇಡಗಂಪಣ ಅರ್ಚಕರಿಂದ ಮಾದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ವಿಶೇಷ ಧೂಪದ ಅಭಿಷೇಕ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮಗಳು ನಡೆಯಿತು.

ವಿಶೇಷ ಪೂಜೆಗಳು:

ಮಾ.29 ಮಲೆಮಾದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ಪೂಜಾ ಕಾರ್ಯಕ್ರಮ ಹಾಗೂ ಉತ್ಸವಾದಿಗಳು ಸಂಭ್ರಮ ಸಡಗರದೊಂದಿಗೆ ನಡೆಯಲಿದೆ. 30 ರಂದು ಚಂದ್ರಮಾನ ಯುಗಾದಿ ಮಹಾರಥೋತ್ಸವ ಬೆಳಗ್ಗೆ 8.08 ರಿಂದ 9ರವರೆಗೆ ನಡೆಯಲಿದೆ.ವಿಶೇಷ ಹೂವಿನ ಅಲಂಕಾರ:

ಮಲೆಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಚಂದ್ರಮಾನ ಯುಗಾದಿ ಜಾತ್ರಾ ಮಹೋತ್ಸವದ ಹಬ್ಬದ ಪ್ರಯುಕ್ತ ದೇವಾಲಯ ಸೇರಿದಂತೆ ಪ್ರಾರಂಭ ವಿವಿಧ ಕಡೆಗಳಲ್ಲಿ ವೈವಿಧ್ಯಮಯವಾಗಿ ವಿವಿಧ ಪುಷ್ಪಗಳಿಂದ ಅಲಂಕಾರಗೊಳಿಸಲಾಗಿದೆ. ವಿದ್ಯುತ್ ದೀಪಾಲಂಕಾರ ಮೂಲಕ ಮಾದಪ್ಪನ ಭಕ್ತರು ಕಣ್ಮನ ಸೆಳೆಯುವಂತೆ ಅಲಂಕಾರ ಮಾಡಲಾಗಿದೆ.

ಆಲಂಬಡಿ ಬಸವನಿಗೆ ಪೂಜೆ:

ಮಲೆಮಾದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ಹಾಗೂ ರೈತರು ವಿಶೇಷವಾಗಿ ದೇವಾಲಯದ ಹಿಂಬಾಗದ ಮೇಲಂತಸ್ತಿನಲ್ಲಿ ಬರುವ ಆಲಂಬಡಿ ಬಸವನಿಗೆ ಮಾದಪ್ಪನ ಭಕ್ತರು ಎಣ್ಣೆ ಹಾಗೂ ಹಾಲಿನಲ್ಲಿ ಅಭಿಷೇಕ ಮಾಡಿ ಪೂಜೆ ಸಲ್ಲಿಸಿ, ವಿಸ್ತೃತ ಸಿದ್ಧಿಸುವಂತೆ ಜೊತೆಗೆ ರೈತರು ತಾವು ಬೆಳೆದ ದವಸ ಧಾನ್ಯಗಳನ್ನು ತಂದು ಬಸವನಿಗೆ ಎರಚುವ ಮೂಲಕ ಇಷ್ಟಾರ್ಥ ಸಿದ್ಧಿಸುವಂತೆ ನಿವೇದನೆ ಮಾಡಿಕೊಳ್ಳುವ ಮೂಲಕ ಪೂಜೆ ಸಲ್ಲಿಸಿದರು.

ತ್ರಿಚಕ್ರ, ದ್ವಿಚಕ್ರ ವಾಹನಗಳಿಗೆ ನಿಷೇಧ: ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಚಂದ್ರಮಾನ ಯುಗಾದಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮಲೆಯ ಮಾದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇರುವುದರಿಂದ ಮಾ.29ರಿಂದ ಮಾ. 31 ರವರೆಗೆ ಎಲ್ಲ ಮಾದರಿಯ ತ್ರಿಚಕ್ರ ದ್ವಿಚಕ್ರ ವಾಹನಗಳಿಗೆ ಮಲೆಮಹದೇಶ್ವರ ಬೆಟ್ಟಕ್ಕೆ ನಿಷೇಧ ಹಿನ್ನೆಲೆ ಬೆಟ್ಟಕ್ಕೆ ಬರುವ ವಾಹನಗಳನ್ನು ಕೌದಳ್ಳಿ ಗ್ರಾಮದ ಬಳಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಭಕ್ತಾದಿಗಳಿಗೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶಿಸಿದ್ದಾರೆ.ಮಾದೇಶ್ವರ ಬೆಟ್ಟಕ್ಕೆ ಯುಗಾದಿ ಹಬ್ಬಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ಲೋಪದೋಷಗಳು ಬರದಂತೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ರಾಜ್ಯದ ನಾನಾ ಭಾಗಗಳಿಂದ ಬರುವ ಭಕ್ತಾದಿಗಳಿಗಾಗಿ ವಿಶೇಷ ದಾಸೋಹ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಬಿಸಿಲು ಹೆಚ್ಚಾಗಿರುವುದರಿಂದ ನೆರಳಿನ ವ್ಯವಸ್ಥೆ ಸಹ ಮಾಡಲಾಗಿದೆ.

ಎ.ಇ.ರಘು, ಕಾರ್ಯದರ್ಶಿ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಲೆಮಾದೇಶ್ವರ ಬೆಟ್ಟ

Share this article