ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮುದ್ದೆ, ಚಪಾತಿಗೆ ಅನುಮತಿ ಸಿಕ್ಕಿದ್ರು ಗ್ರಾಹಕರಿಗಿಲ್ಲ

KannadaprabhaNewsNetwork |  
Published : Nov 08, 2024, 01:16 AM ISTUpdated : Nov 08, 2024, 10:09 AM IST
Namma metro Indira canteen bandh

ಸಾರಾಂಶ

ರಾಜಧಾನಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗಳಲ್ಲಿ ರಾಗಿ ಮುದ್ದೆ- ಸೊಪ್ಪಿನ ಸಾರು, ಚಪಾತಿ- ಸಾಗು, ಬನ್ಸ್‌ ಸೇರಿದಂತೆ ತರಾವರಿ ಖಾದ್ಯ ನೀಡಲು ಸರ್ಕಾರ ಅನುಮತಿ ಕೊಟ್ಟು ಮೂರು ತಿಂಗಳಾದರೂ ಇನ್ನೂ ಜಾರಿಯಾಗಿಲ್ಲ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು : ರಾಜಧಾನಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗಳಲ್ಲಿ ರಾಗಿ ಮುದ್ದೆ- ಸೊಪ್ಪಿನ ಸಾರು, ಚಪಾತಿ- ಸಾಗು, ಬನ್ಸ್‌ ಸೇರಿದಂತೆ ತರಾವರಿ ಖಾದ್ಯ ನೀಡಲು ಸರ್ಕಾರ ಅನುಮತಿ ಕೊಟ್ಟು ಮೂರು ತಿಂಗಳಾದರೂ ಇನ್ನೂ ಜಾರಿಯಾಗಿಲ್ಲ.

ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟಿನ್‌ ಸೊರಗಿದ ಹಿನ್ನೆಲೆಯಲ್ಲಿ ಅವುಗಳನ್ನು ಮತ್ತೆ ಜನ ಪರ ಮಾಡಲು ನಿರ್ಧರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನದಂತೆ ಕಳೆದ ಜುಲೈನಲ್ಲಿ ಆದೇಶವೊಂದು ಹೊರಬಿತ್ತು. ಅದರಂತೆ ನಗರದ 142 ಇಂದಿರಾ ಕ್ಯಾಂಟಿನ್‌ಗಳಲ್ಲಿ ಮುದ್ದೆ- ಸೊಪ್ಪಿನ ಸಾರು, ಚಪಾತಿ-ಸಾಗು, ಬನ್ಸ್‌ ಸೇರಿದಂತೆ ಮೊದಲಾದ ತರವಾರಿ ಖಾದ್ಯ ಪರಿಚಯಿಸಲು ಅವಕಾಶ ನೀಡಲಾಗಿತ್ತು.

ಈ ಆದೇಶ ಹೊರ ಬಿದ್ದು ಮೂರು ತಿಂಗಳಾದರೂ ಕೆಲಸ ಆರಂಭಿಸಲು ಅಗತ್ಯವಾದ ಕಾರ್ಯಾದೇಶವನ್ನು ಇನ್ನೂ ಅಧಿಕಾರಿಗಳು ನೀಡಿಲ್ಲ. ಹೀಗಾಗಿ, ಹೊಸದಾಗಿ ನೇಮಕಗೊಂಡ ಗುತ್ತಿಗೆದಾರರು ಆಹಾರ ವಿತರಣೆ ಆರಂಭಿಸಿಲ್ಲ.

ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು, ನಗರದ ಮಹದೇವಪುರ, ಬೊಮ್ಮನಹಳ್ಳಿಯ ಕೆಲವೆಡೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಈಗಾಗಲೇ ರಾಗಿ ಮುದ್ದೆ ಸೇರಿದಂತೆ ಹೊಸ ಮೆನು ಪ್ರಕಾರ ಆಹಾರ ವಿತರಣೆ ಆರಂಭಿಸಲಾಗಿದೆ ಎಂದು ಹೇಳುತ್ತಾರೆ. ಆದರೆ, ಈ ಬಗ್ಗೆ ಸ್ಥಳೀಯರನ್ನು ವಿಚಾರಿಸಿದಾಗ ಇಂದಿರಾ ಕ್ಯಾಂಟೀನ್‌ಗಳಲ್ಲಿ ರಾಗಿ ಮುದ್ದೆ ವಿತರಣೆ ಆಗುತ್ತಿಲ್ಲ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಆರಂಭಿಸಿದ್ದ ಮಹತ್ವಾಕಾಂಕ್ಷಿಯ ಯೋಜನೆ ಇಂದಿರಾ ಕ್ಯಾಂಟೀನ್‌ ಕಾಲಕಳೆದಂತೆ ಸೊರಗಿತ್ತು. ಹೀಗಾಗ 2ನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬಂದ ಅವರು ಇಂದಿರಾ ಕ್ಯಾಂಟೀನ್‌ಗೆ ಬಲ ನೀಡುವ ತೀರ್ಮಾನ ಕೈಗೊಂಡರು.

ಇದರ ಪರಿಣಾಮ ನಗರದಲ್ಲಿ ಹೊಸದಾಗಿ 50 ಇಂದಿರಾ ಕ್ಯಾಂಟೀನ್‌ ಆರಂಭಿಸಲು ಅನುಮತಿ ನೀಡಲಾಯಿತು. ಈ ಪೈಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಕ್ಯಾಂಟೀನ್‌ ಆರಂಭಗೊಂಡಿವೆ. ಇದಲ್ಲದೆ, ನಗರದಲ್ಲಿ ಚಾಲ್ತಿಯಲ್ಲಿರುವ 192 ಇಂದಿರಾ ಕ್ಯಾಂಟೀನ್‌ಗಳ ಪೈಕಿ 142 ಇಂದಿರಾ ಕ್ಯಾಂಟೀನ್‌ಗಳಿಗೆ ಹೊಸ ಗುತ್ತಿಗೆದಾರರನ್ನು ಅಂತಿಮಗೊಳಿಸಲಾಯಿತು. (ಉಳಿದ 50 ಕ್ಯಾಂಟೀನ್‌ ಆಹಾರ ವಿತರಣೆಗೆ ಸಂಬಂಧಿಸಿದ ಟೆಂಡರ್‌ ನ್ಯಾಯಾಲಯದಲ್ಲಿದೆ).

ಈ ಆದೇಶ ನೀಡುವಾಗಲೇ ಬೆಂಗಳೂರಿನ ಜನರ ಬಹುದಿನದ ಬೇಡಿಕೆಯಂತೆ ನಗರದಲ್ಲಿರುವ 142 ಇಂದಿರಾ ಕ್ಯಾಂಟೀನ್‌ನಲ್ಲಿ ರಾಗಿ ಮುದ್ದೆ- ಸೊಪ್ಪಿನ ಸಾರು, ಚಪಾತಿ-ಸಾಗು, ಬನ್ಸ್‌, ಕಾಫಿ-ಟೀ ಸೇರಿ ತರಾವರಿ ಖಾದ್ಯಗಳನ್ನು ವಿತರಣೆಗೆ ಸಂಬಂಧಿಸಿದ ಗುತ್ತಿಗೆ ನೀಡಲಾಯಿತು. ಇದಕ್ಕೆ ಪೂರಕವಾಗಿ ಗುತ್ತಿಗೆದಾರರಿಗೆ ನೀಡಲಾಗುತ್ತಿದ್ದ ಮೊತ್ತವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿತ್ತು.

ಈ ಗುತ್ತಿಗೆ ನಿಯಮಗಳ ಪ್ರಕಾರ ಉಪಹಾರಕ್ಕೆ 20 ರು. (ಈ ಪೈಕಿ ಸರ್ಕಾರ 15 ರು. ನೀಡಲಿದ್ದು, ಗ್ರಾಹಕರಿಂದ 5 ರು. ಪಡೆಯಬಹುದು). ಊಟಕ್ಕೆ 16.50 ರು. (ಈ ಪೈಕಿ ಸರ್ಕಾರ 6.51 ರು. ಹಾಗೂ ಗ್ರಾಹಕರು 10 ರು.), ರಾತ್ರಿ ಊಟಕ್ಕೆ 20 ರು. (ಸರ್ಕಾರ ಹಾಗೂ ಗ್ರಾಹಕರಿಂದ ತಲಾ 10 ರು) ಗುತ್ತಿಗೆದಾರರಿಗೆ ದೊರೆಯಲಿದೆ. ಅದರಂತೆ ಸರ್ಕಾರ 142 ಇಂದಿರಾ ಕ್ಯಾಂಟೀನ್‌ಗೆ ಎರಡು ವರ್ಷಕ್ಕೆ 77.12 ಕೋಟಿ ರು. ವೆಚ್ಚ ಮಾಡಲಿದೆ.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ