ಮುದ್ದುಕೃಷ್ಣ ಸ್ಪರ್ಧೆ: 18 ಸ್ಪರ್ಧೆಯಲ್ಲಿ 17 ರಲ್ಲಿ ಆದ್ಯಾ ಪ್ರಥಮ!

KannadaprabhaNewsNetwork | Published : Sep 3, 2024 1:33 AM

ಸಾರಾಂಶ

ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಅವಿಭಜಿತ ದ.ಕ ಜಿಲ್ಲೆಯ ವಿವಿಧೆಡೆ ಜರಗಿದ ಮುದ್ದುಕೃಷ್ಣ ಸ್ಪರ್ಧೆಗಳಲ್ಲಿ ಆಲಂಗಾರಿನ ಏಳರ ಹರೆಯದ ಬಾಲೆ ಆದ್ಯಾ ವಿ. ಕೋಟ್ಯಾನ್ 18 ಕಡೆಗಳಲ್ಲಿ ಸ್ಪರ್ಧಿಸಿ 17 ಕಡೆಗಳಲ್ಲಿ ಪ್ರಥಮ ಸ್ಥಾನಿಯಾಗಿದ್ದಾಳೆ! ಒಂದೆಡೆ ದ್ವಿತೀಯ ಸ್ಥಾನ. ಆದ್ಯಾ ಕಳೆದ ಬಾರಿ ಅವಿಭಜಿತ ದ.ಕ ಜಿಲ್ಲೆಯ 11 ಕಡೆ ಸ್ಪರ್ಧಿಸಿ ಎಲ್ಲೆಡೆ ಪ್ರಥಮ ಸ್ಥಾನಿಯಾಗಿದ್ದಳು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಅವಿಭಜಿತ ದ.ಕ ಜಿಲ್ಲೆಯ ವಿವಿಧೆಡೆ ಜರಗಿದ ಮುದ್ದುಕೃಷ್ಣ ಸ್ಪರ್ಧೆಗಳಲ್ಲಿ ಆಲಂಗಾರಿನ ಏಳರ ಹರೆಯದ ಬಾಲೆ ಆದ್ಯಾ ವಿ. ಕೋಟ್ಯಾನ್ 18 ಕಡೆಗಳಲ್ಲಿ ಸ್ಪರ್ಧಿಸಿ 17 ಕಡೆಗಳಲ್ಲಿ ಪ್ರಥಮ ಸ್ಥಾನಿಯಾಗಿದ್ದಾಳೆ! ಒಂದೆಡೆ ದ್ವಿತೀಯ ಸ್ಥಾನ.

ಈ ಮೂಲಕ ಆದ್ಯಾ ಕಳೆದ ಬಾರಿ ಅವಿಭಜಿತ ದ.ಕ ಜಿಲ್ಲೆಯ 11 ಕಡೆ ಸ್ಪರ್ಧಿಸಿ ಎಲ್ಲೆಡೆ ಪ್ರಥಮ ಸ್ಥಾನಿಯಾಗಿದ್ದಳು. ಈ ಬಾರಿ ತನ್ನದೇ ದಾಖಲೆ ಮುರಿದು ಮತ್ತೊಂದು ಮೈಲಿಗಲ್ಲು ನೆಟ್ಟಿದ್ದಾಳೆ.ಎರಡರಿಂದ ಮೂರು ನಿಮಿಷಗಳ ಕಾಲಾವಕಾಶದಲ್ಲಿ ಬೆಣ್ಣೆ ಕಳವು, ಗಂಧರ್ವ ಶಾಪ ವಿಮೋಚನೆ, ಗೋವರ್ಧನ ಗಿರಿ ಧಾರಿ, ರಥ ಸಾರಥಿ, ಚಕ್ರಧಾರಿಯಾಗಿ ರಣಾಂಗಣದ ಆವೇಶ, ಕಲ್ಕಿಯಾಗಿ ಹಿನ್ನೆಲೆ ಗಾನದ ಜತೆಗೆ ಚಕಚಕನೆ ಭಾವಾಭಿನಯ ನೀಡುವ ಮೂಲಕ ಆದ್ಯಾ ಸ್ಪರ್ಧಾಕಣದಲ್ಲಿ ಮೆರೆದಿರುವುದು ವಿಶೇಷ.ಹೆತ್ತವರ ಜತೆ ನೃತ್ಯ ಗುರು ಎಂಜೆ ಡ್ಯಾನ್ಸ್ ಅಕಾಡೆಮಿಯ ಅನೀಶ್, ಮೇಕಪ್ ಕಲಾವಿದ ಸುನೀಲ್ ರೋಹಿತ್ ಹೀಗೆ ಹಲವರ ಪರಿಶ್ರಮ ಆದ್ಯಾ ಸಾಧನೆಗೆ ಸಹಕಾರಿಯಾಗಿದೆ.ಮಗಳ ಪ್ರತಿಭೆ, ಉತ್ಸಾಹವನ್ನು ಪ್ರೋತ್ಸಾಹಿಸುವುದರಲ್ಲೇ ಖುಷಿಯಿದೆ ಎನ್ನುತ್ತಾರೆ ವಿಠಲ ಅಮೀನ್. ಆಕೆಗಾಗಿ ಹಿನ್ನೆಲೆ ಪರಿಸರ, ಸೆಟ್ಟಿಂಗ್, ಸಹಾಯಕರ ತಂಡ ಕಟ್ಟಿಕೊಂಡು ಜಿಲ್ಲೆಯ ಹಲವೆಡೆ ಬಿಡುವಿಲ್ಲದ ಓಡಾಟಕ್ಕೆ ಪ್ರತಿಯಾಗಿ ಆದ್ಯಾಳ ಈ ಸಾಧನೆ ಅವರಿಗೆ ಸಂತಸ ತಂದಿದೆ.ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ ಆದ್ಯಾ ಆಲಂಗಾರಿನ ವಿಠಲ ಅಮೀನ್-ರಂಜಿತಾ ದಂಪತಿಯ ಇಬ್ಬರು ಮಕ್ಕಳ ಪೈಕಿ ಕಿರಿಯವಳು. ಆರು ತಿಂಗಳ ಮಗುವಾಗಿದ್ದಾಗಲೇ ಅಭಿನಯದಲ್ಲಿ ಸೈ ಎನಿಸಿಕೊಂಡಿದ್ದ ಆದ್ಯಾ ಮುದ್ದು ಕೃಷ್ಣ ಮಾತ್ರವಲ್ಲ ಮುದ್ದು ಶಾರದೆ, ಛದ್ಮವೇಷ, ಚಿತ್ರಕಲೆ, ಅಭಿನಯ ಗೀತೆ , ನೃತ್ಯ ಹೀಗೆ ಎಲ್ಲದರಲ್ಲೂ ಮುಂದೆ. ಹಲವೆಡೆ ಈಕೆ ಬಾಚಿಕೊಂಡ ಬಹುಮಾನಗಳ ಸಂಖ್ಯೆ ಅರ್ಧಶತಕದ ಗಡಿ ದಾಟುವುದರಲ್ಲಿದೆ!

Share this article