ತರಾತುರಿಯಲ್ಲಿ ₹ 9 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಆಸ್ಪತ್ರೆ ಉದ್ಘಾಟನೆಗೆ ಮುಂದಾಗಿದ್ದ ಆರೋಗ್ಯ ಅಧಿಕಾರಿಗಳ ನಡೆಯಿಂದ ಆಕ್ರೋಶಗೊಂಡಿದ್ದ ತಾಲೂಕಿನ ಮುದೇನೂರು ಗ್ರಾಮಸ್ಥರು ಮೇ 28ರಂದು ಉದ್ಘಾಟನೆಗೆ ವಿರೋಧಿಸಿದ್ದರು.
ಕುಷ್ಟಗಿ:
ತರಾತುರಿಯಲ್ಲಿ ₹ 9 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಆಸ್ಪತ್ರೆ ಉದ್ಘಾಟನೆಗೆ ಮುಂದಾಗಿದ್ದ ಆರೋಗ್ಯ ಅಧಿಕಾರಿಗಳ ನಡೆಯಿಂದ ಆಕ್ರೋಶಗೊಂಡಿದ್ದ ತಾಲೂಕಿನ ಮುದೇನೂರು ಗ್ರಾಮಸ್ಥರು ಮೇ 28ರಂದು ಉದ್ಘಾಟನೆಗೆ ವಿರೋಧಿಸಿದ್ದರು. ಶಾಸಕ ದೊಡ್ಡನಗೌಡ ಪಾಟೀಲ ಸಹ ಗ್ರಾಮಸ್ಥರ ವಿಶ್ವಾಸ ತೆಗೆದುಕೊಂಡು ಕಾರ್ಯಕ್ರಮ ಆಯೋಜಿಸುವಂತೆ ತಾಕೀತು ಮಾಡಿದ್ದರು. ಅದರಂತೆ ಬುಧವಾರ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆ ಗ್ರಾಮಸ್ಥರ ಸಮ್ಮಖದಲ್ಲಿ ಅದ್ಧೂರಿಯಾಗಿ ನಡೆಯಿತು.
ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ, ಆಸ್ಪತ್ರೆಗೆ ಧಕ್ಕೆ ಬರದಂತೆ ಗ್ರಾಮಸ್ಥರು ನೋಡಿಕೊಳ್ಳಬೇಕು. ಈ ಗ್ರಾಮದ ಭಾಗದಲ್ಲಿನ ಹಳ್ಳಿಗಳು ಜಿಲ್ಲೆಯ ಗಡಿಭಾಗಕ್ಕೆ ಸೇರಿದ್ದರಿಂದ ಇಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಆರೋಗ್ಯ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಈಗಾಗಲೆ ಆಸ್ಪತ್ರೆಗೆ ಅವಶ್ಯವಿರುವ ಸಿಬ್ಬಂದಿ ನೇಮಕಾತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಶಾಸಕರು, ಈಗ ತಾತ್ಕಾಲಿಕ ಸಿಬ್ಬಂದಿ ಮೂಲಕ ಆಸ್ಪತ್ರೆ ಆರಂಭಿಸಲಾಗುವುದು ಎಂದರು.
ಕಾಡಾ ನಿಗಮ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾತನಾಡಿ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಸೇರಿದಂತೆ ಅನೇಕ ನಾಯಕರ ಶ್ರಮದಿಂದ ಆರೋಗ್ಯ ಕೇಂದ್ರ ನಿರ್ಮಾಣವಾಗಿದೆ. ಉದ್ಘಾಟನೆಗೆ ಮಾತ್ರ ಸೀಮಿತಗೊಳ್ಳದೆ ವೈದ್ಯರನ್ನು ನೇಮಿಸಬೇಕೆಂದು ಒತ್ತಾಯಿಸಿದರು.
ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ವೈದ್ಯರಿಗೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ತಿಳಿಸಿದರು.
ಡಿಎಚ್‌ಒ ಡಾ. ಟಿ. ಲಿಂಗರಾಜು ಮಾತನಾಡಿ, ವೈದ್ಯರಿಗೆ ಸಾಕಷ್ಟು ಸಮಸ್ಯೆಗಳಿದ್ದು ಒಂದೆಡೆ ನಿಲ್ಲುವ ಸ್ಥಿತಿ ಇಲ್ಲ. ನೇಮಕಾತಿ ನಂತರ ಎಲ್ಲ ಸಿಬ್ಬಂದಿಗಳ ವ್ಯವಸ್ಥೆ ಮಾಡಿಕೊಡಲಾಗುವುದು. ಆರಂಭಿಕವಾಗಿ ಒಬ್ಬರು ಎಂಬಿಬಿಎಸ್ ವೈದ್ಯರು, ಒಬ್ಬರು ಸ್ತ್ರೀರೋಗ ತಜ್ಞರನ್ನು ನೇಮಕಾತಿ ಮಾಡುವ ಮೂಲಕ ಆರಂಭಿಸಲಾಗುವುದು ಎಂದರು.
ಟಿಎಚ್‌ಒ ಡಾ. ಆನಂದ ಗೋಟೂ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಜಿಪಂ ಸದಸ್ಯ ಕೆ. ಮಹೇಶ, ಗ್ರಾಪಂ ಸದಸ್ಯ ಹುಸೇನಪ್ಪ ಮಾತನಾಡಿದರು. ಈ ವೇಳೆ ಮುದೇನೂರು ಗ್ರಾಪಂ ಅಧ್ಯಕ್ಷ ಮಂಜುಳಾ ಛಲವಾದಿ, ಆಡಳಿತ ವೈದ್ಯಾಧಿಕಾರಿ ಸಂತೋಷಕುಮಾರ ಬಿರಾದಾರ, ಪಿಡಿಒ ಕವಿತಾ ಪಾಟೀಲ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ, ಗ್ರಾಪಂ ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು ಇದ್ದರು.ದೋಟಿಹಾಳ ಹಾಗೂ ಮುದೇನೂರು ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಲು ಪ್ರಯತ್ನಗಳು ನಡೆದಿದ್ದವು. ಮೊದಲ ಹಂತದಲ್ಲಿ ಮುದೇನೂರಿನಲ್ಲಾಗಿದೆ. ಮುಂದಿನ ದಿನಗಳಲ್ಲಿ ದೋಟಿಹಾಳದಲ್ಲಿ ನಿರ್ಮಿಸಲಾಗುವುದು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.