ಮುಡಿಪು: ಸಾಮಾಜಿಕ ಸ್ವಾಸ್ಥ್ಯ, ಸಾಮರಸ್ಯ ಅಭಿಯಾನ ಕಾರ್ಯಕ್ರಮ

KannadaprabhaNewsNetwork | Published : Dec 10, 2024 12:31 AM

ಸಾರಾಂಶ

ಉಳ್ಳಾಲ ಸದ್ಭಾವನಾ ವೇದಿಕೆ, ಪೊಸಕುರಲ್ ಬಳಗ, ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ ಕೊಣಾಜೆ, ಕಾರುಣ್ಯ ಕೇಂದ್ರ ಮುಡಿಪು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರೆಡ್ ಕ್ರಾಸ್ ಹಾಗೂ ಶಿಕ್ಷಕ ರಕ್ಷಕ ಸಂಘದ ಆಶ್ರಯದಲ್ಲಿ ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಮಾಜಿಕ ಸ್ವಾಸ್ಥ್ಯ ಹಾಗೂ ಸಾಮರಸ್ಯ ಅಭಿಯಾನ ನೆರವೇರಿತು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಗೆಳೆಯರ ಒತ್ತಾಯ, ಸಂತೋಷಕೂಟ, ಬೇಸರ, ಒತ್ತಡ ಇತ್ಯಾದಿ ಕಾರಣಗಳಿಂದ ಆರಂಭಗೊಳ್ಳುವ ಮಾದಕ ದ್ರವ್ಯ ದುಶ್ಚಟಗಳು ನಮ್ಮ ಬದುಕನ್ನೇ ನಾಶಮಾಡುತ್ತವೆ ಎಂದು ದೇರಳಕಟ್ಟೆ ಯೆನಪೋಯ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ, ಮನೋರೋಗ ತಜ್ಞ ಡಾ. ರಾಜೇಶ್ ಅಭಿಪ್ರಾಯಪಟ್ಟಿದ್ದಾರೆ.

ಉಳ್ಳಾಲ ಸದ್ಭಾವನಾ ವೇದಿಕೆ, ಪೊಸಕುರಲ್ ಬಳಗ, ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ ಕೊಣಾಜೆ, ಕಾರುಣ್ಯ ಕೇಂದ್ರ ಮುಡಿಪು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರೆಡ್ ಕ್ರಾಸ್ ಹಾಗೂ ಶಿಕ್ಷಕ ರಕ್ಷಕ ಸಂಘದ ಆಶ್ರಯದಲ್ಲಿ ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಾಮಾಜಿಕ ಸ್ವಾಸ್ಥ್ಯ ಹಾಗೂ ಸಾಮರಸ್ಯ ಅಭಿಯಾನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಕೊಣಾಜೆ ಠಾಣಾ ಉಪ ಆರಕ್ಷಕ ನಿರೀಕ್ಷಕ ಪುನೀತ್ ಗಾಂವ್‍ಕರ್ ಮಾತನಾಡಿ, ಕುತೂಹಲ ಸಹವಾಸದಿಂದ ಆರಂಭವಾಗುವ ವ್ಯಸನ, ಕಳ್ಳತನ, ಮಾರಾಟ, ಹೀಗೆ ಹಂತ ಹಂತವಾಗಿ ಬೆಳೆದು ಕೊನೆಗೆ ಜೈಲು ಶಿಕ್ಷೆ ಪಡೆಯುವ ಹಂತಕ್ಕೆ ತಲುಪುತ್ತದೆ ಎಂದರು.

ಮುಡಿಪು ಸರ್‌ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ ಗಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದ ಗುರಿ ಸಾಧನೆಗಾಗಿ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಉಳ್ಳಾಲ ಸದ್ಭಾವನಾ ವೇದಿಕೆ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಅಧ್ಯಕ್ಷತೆ ವಹಿಸಿದ್ದರು.

ಮಂಗಳಗಂಗೋತ್ರಿ ಲಯನ್ಸ್ ಕ್ಲಬ್ ಅಧ್ಯಕ್ಷ ಮಂಜುನಾಥ ಆಳ್ವ, ಮುಡಿಪು ಕಾರುಣ್ಯ ಕೇಂದ್ರದ ಸಂಚಾಲಕ ರಿಝ್ವಾನ್ ಅಝ್‍ಹರಿ, ಮುಡಿಪು ಸರ್‌ಕಾರಿ ಪ್ರಥಮ ದರ್ಜೆ ಕಾಲೇಜು ರೆಡ್ ಕ್ರಾಸ್ ಸಂಚಾಲಕ ಪ್ರೊ. ಹೈದರಾಲಿ, ಶಿಕ್ಷಕ ರಕ್ಷಕ ಸಂಘದ ಸಂಚಾಲಕ ಪ್ರೊ. ಪವನ ಬಿ. ಪಿ., ಆಂತರಿಕ ಭದ್ರತಾ ಕೋಶ ಸಂಚಾಲಕಿ ಕವಿತಾ ಎಮ್. ಎಲ್., ಕ್ಷೇಮ ಪಾಲನಾ ಅಧಿಕಾರಿ ಡಾ. ಶೇಷಪ್ಪ ಇದ್ದರು.

ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಅಕ್ಷತಿ ಸುವರ್ಣ ನಿರೂಪಿಸಿದರು. ಸದ್ಭಾವನಾ ವೇದಿಕೆ ಕಾರ್ಯದರ್ಶಿ ಇಸಾಕ್ ಕಲ್ಲಾಪು ವಂದಿಸಿದರು.

Share this article