ಒಂದೇ ಮುಸ್ಲಿಂ ಕುಟುಂಬವಿದ್ದರೂ ಮೊಹರಂ ಆಚರಣೆ

KannadaprabhaNewsNetwork | Published : Jul 16, 2024 12:31 AM

ಸಾರಾಂಶ

ತಾಲೂಕಿನ ದ್ಯಾಂಪೂರು ಗ್ರಾಮದಲ್ಲಿ ಒಂದೇ ಮುಸ್ಲಿಂ ಕುಟುಂಬವಿದ್ದರೂ ಸಹ ಮೊಹರಂ ಹಬ್ಬವನ್ನು ಇಡೀ ಗ್ರಾಮದ ಗ್ರಾಮಸ್ಥರೂ ಅದ್ಧೂರಿಯಿಂದ ಆಚರಿಸುತ್ತಾರೆ.

ದ್ಯಾಂಪೂರು ಗ್ರಾಮದಲ್ಲಿ ಅಲಾಯಿ ದೇವರಿಗೆ ಏಳು ಮೊಗ ಇದೆ

ಕನ್ನಡಪ್ರಭ ವಾರ್ತೆ ಕುಕನೂರು

ತಾಲೂಕಿನ ದ್ಯಾಂಪೂರು ಗ್ರಾಮದಲ್ಲಿ ಒಂದೇ ಮುಸ್ಲಿಂ ಕುಟುಂಬವಿದ್ದರೂ ಸಹ ಮೊಹರಂ ಹಬ್ಬವನ್ನು ಇಡೀ ಗ್ರಾಮದ ಗ್ರಾಮಸ್ಥರೂ ಅದ್ಧೂರಿಯಿಂದ ಆಚರಿಸುತ್ತಾರೆ.

ವಿಶೇಷವಾಗಿ ದ್ಯಾಂಪೂರು ಗ್ರಾಮದಲ್ಲಿ ಅಲಾಯಿ ದೇವರಿಗೆ ಏಳು ಮೊಗ ಇದೆ. ಏಳು ಮೊಗದ ಸವಾರಿ ಎಂದೇ ದ್ಯಾಂಪೂರು ಗ್ರಾಮದ ಅಲಾಯಿ ದೇವರು ಪ್ರಸಿದ್ಧಿ ಪಡೆದಿದೆ. ನಾನಾ ಗ್ರಾಮದಲ್ಲಿ ಐದು, ಮೂರು, ಎರಡು, ಒಂದು ಮೊಗದ ಅಲಾಯಿ ದೇವರು ಪ್ರತಿಷ್ಠಾಪನೆ ಆದರೆ, ದ್ಯಾಂಪೂರು ಗ್ರಾಮದಲ್ಲಿ ಪಾರಂಪರ್ಯವಾಗಿ ಏಳು ಮೊಗದ ಅಲಾಯಿ ದೇವರು ಸ್ಥಾಪನೆ ಆಗುತ್ತಾ ಬಂದಿದೆ. ವಿಶೇಷವೆಂಬಂತೆ ಈ ಅಲಾಯಿ ದೇವರನ್ನು ಹಿಂದೂಗಳೇ ಹೊರುತ್ತಾರೆ. ಗ್ರಾಮದಲ್ಲಿ ದಫೇದಾರ್ ಎಂಬ ಒಂದೇ ಒಂದು ಮುಸ್ಲಿಂ ಕುಟುಂಬ ಮಾತ್ರ ಇದೆ. ಒಂದೇ ಒಂದು ಮುಸ್ಲಿಂ ಕುಟುಂಬ ಇದ್ದರೂ ಸಹ ಇಡೀ ಗ್ರಾಮಸ್ಥರು ಸೇರಿಕೊಂಡು ಮೊಹರಂ ಅನ್ನು ತಮ್ಮ ಹಿಂದೂ ಹಬ್ಬದಂತೆಯೇ ತಿಳಿದು ವಿಜೃಂಭಣೆಯಿಂದ ಆಚರಿಸುತ್ತಾರೆ. ಸೋಮವಾರ ಅಲಾಯಿ ದೇವರ ಸ್ಥಾಪನೆ ಆಗಿದ್ದು, ಕುಕನೂರು ಹಾಗು ಸುತ್ತಮುತ್ತಲಿನ ನಾನಾ ಗ್ರಾಮಸ್ಥರು ದ್ಯಾಂಪೂರು ಏಳು ಮೊಗದ ಅಲಾಯಿ ದೇವರಿಗೆ ಕುಟುಂಬ ಸಮೇತವಾಗಿ ಆಗಮಿಸಿ ಸಕ್ಕರೆ ನೈವೈದ್ಯ ಸಮರ್ಪಿಸುತ್ತಿದ್ದಾರೆ.

ದ್ಯಾಂಪೂರು ಗ್ರಾಮದಲ್ಲಿ ನಮ್ಮದು ಒಂದೇ ಮುಸ್ಲಿಂ ಕುಟುಂಬವಿದ್ದರೂ ಸಹ ಗ್ರಾಮದ ಎಲ್ಲ ಜನರು ಸೇರಿಕೊಂಡು ಮೊಹರಂ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ. ಗ್ರಾಮದಲ್ಲಿ ಹಿಂದೂ ಹಬ್ಬದಂತೆ ಮೊಹರಂನ್ನು ಎಲ್ಲರೂ ಸೇರಿಕೊಂಡು ಆಚರಣೆ ಮಾಡುತ್ತೇವೆ. ಅದರಲ್ಲೂ ದ್ಯಾಂಪೂರು ಗ್ರಾಮದ ಅಲಾಯಿ ದೇವರು ವಿಶಿಷ್ಟವಾಗಿದೆ ಎನ್ನುತ್ತಾರೆ ದ್ಯಾಂಪೂರು ಗ್ರಾಮದ ಶಿಕ್ಷಕ ಫೀರಸಾಬ್ ದಫೇದಾರ್.

Share this article