ನವಲಗುಂದ: ಪಟ್ಟಣವು ಸೇರಿದಂತೆ ತಾಲೂಕಿನೆಲ್ಲಡೆ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬದ ರಂಗು ಮನೆ ಮಾಡಿದೆ. ತಾಲೂಕಿನ ಹಳ್ಳಿಗಳಲ್ಲೂ ಹಬ್ಬದ ಕಳೆ ಕಟ್ಟಿದ್ದು, ಕಳೆದ 3-4 ದಿನದಿಂದ ಹುಲಿವೇಷ ಧರಿಸಿ ಭಕ್ತರು ಹರಕೆ ತೀರಿಸುತ್ತಿದ್ದಾರೆ. ಮಕ್ಕಳಾದಿಯಾಗಿ ಯುವಕರು, ಹಿರಿಯರು ಹುಲಿ ವೇಷದಲ್ಲಿ ಓಣಿ ಓಣಿಗಳಲ್ಲಿ ಕಾಣುತ್ತಿದ್ದಾರೆ.
ಜು. 6 ರಂದು ಪಟ್ಟಣದಲ್ಲಿ ಮೋಹರಂ ಆಚರಣೆ ಇರುವುದರಿಂದ ಹತ್ತು ದಿನದ ಆಚರಣೆಗೆ ಎಲ್ಲೆಡೆ ಸಡಗರ ಕಂಡು ಬರುತ್ತಿದೆ. ಇತಿಹಾಸ ಪ್ರಸಿದ್ಧ ಶ್ರೀ ನಾಗಲಿಂಗಜ್ಜನ ಮಠ, ಹೊರಗಿನ ಟಕ್ಕೆ, ಕುಂಬಾರ ಓಣಿ, ಮಲಂಗಶಾವಲಿ ದರ್ಗಾ, ನಾಸಿಪುಡಿ ಓಣಿ, ಜಟಕಾ ಓಣಿ, ತೆಗ್ಗಿನಕೇರಿ ಓಣಿ, ಮೆಹಬೂಬ ನಗರ, ಬಸವೇಶ್ವರ ನಗರ, ಹುಗ್ಗಿಯವರ ಓಣಿ ಸೇರಿದಂತೆ ವಿವಿಧ ಕಡೆ ದೇವರನ್ನು ಕೂರಿಸಲಾಗಿದ್ದು, 10ನೇ ದಿನ ಅಂದರೆ ಜು. 5ರಂದು ಕತ್ತಲ್ ರಾತ್ ನಡೆಯಲಿದೆ. ಭಾನುವಾರ ಪಂಜಾಗಳ ಮೆರವಣಿಗೆ ನಡೆಯಲಿದೆ.ಜಟಕಾ ಓಣಿ ಹಾಗೂ ಮೆಹಬೂಬ ನಗರ ದೇವರ ಸಡಗರ ಮನಮೋಹಕವಾಗಿರುತ್ತದೆ. ವಿಶೇಷವಾಗಿ ಇಮಾಮಹಸನ್ ಹಾಗೂ ಇಮಾಮಹುಸೇನ ಅವರ ನೆನಪಿನಲ್ಲಿ ಎರಡು ದಿನ ಉಪವಾಸ ಮಾಡುವ ಮೂಲಕ ಭಕ್ತಿ ಸಮರ್ಪಿಸಲಾಗುತ್ತದೆ. ಜು. ಮತ್ತು 6ರಂದು ದೇವರಿಗೆ ಸಕ್ಕರೆ ಓದಿಸುವುದರ ಜತೆಗೆ ದರ್ಶನ ಪಡೆಯುತ್ತಾರೆ. ಸಾರ್ವಜನಿಕರಿಗೆ ಶರಬತ್ ಹಂಚಿಕೆ ಮಾಡಲಾಗುತ್ತದೆ. ಪಂಜಾಗಳ ಮೆರವಣಿಗೆ ಕೂಡ ವೈಭವದಿಂದ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೇವರನ್ನು ಕೂಡಿಸಿರುವ ಪ್ರದೇಶಗಳಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಹಬ್ಬಕ್ಕೆ ವಿಶೇಷವಾಗಿ ಸಿಹಿಯಾದ ಮಾದಲಿ, ಚೊಂಗೆ ಮಾಡಲಾಗುತ್ತದೆ. ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆ ಕೂಡ ಜನರಿಂದ ತುಂಬಿ ತುಳುಕುತ್ತಿದೆ. ಜನರು ಖರೀದಿ ಭರಾಟೆಯಲ್ಲಿ ತೊಡಗಿದ್ದಾರೆ.ದುಡಿಯಲು ವಲಸೆ ಹೋದವರೂ ಕೂಡ ವರ್ಷಕ್ಕೆ ಒಂದು ಬಾರಿ ಮೊಹರಂ ಹಬ್ಬಕ್ಕೆ ತಮ್ಮ ತಮ್ಮ ಊರಿಗೆ ಮರಳುತ್ತಾರೆ. ಮೊಹರಂ ಕೊನೆಯ ಎರಡು ದಿನಗಳು ಮುಸ್ಲಿಂ ಸಮುದಾಯದವರು ರಂಝಾನ್ ಹಬ್ಬದಂತೆ ಉಪವಾಸ ಇರುತ್ತಾರೆ.
ಸತತ 10 ದಿನಗಳ ಕಾಲ ಆಚರಿಸುವ ಮೊಹರಂನಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. 9ನೇ ದಿನ ಹಸನ್- ಹುಸೇನ್ (ಕತ್ತಲ್ ರಾತ್ರಿ) ಸವಾರಿ ಎಂದು ಹಾಗೂ ಕೊನೆಯ 10ನೇ ದಿನ ದಫನ್ ಕಾರ್ಯಕ್ರಮ ನಡೆಯುತ್ತವೆ. ಆಲಂ(ದೇವರು)ಗಳ ಕೊನೆಯ ಭೇಟಿ ರೊಮಾಂಚನಕಾರಿಯಾಗಿರುತ್ತದೆ.