- ಚಿನ್ನಿಕಟ್ಟೆಯಲ್ಲಿ ಕೆಳದಿ ಅರಸರು ನಿರ್ಮಿಸಿದ ಗುರುರುದ್ರಸ್ವಾಮಿ ಕಲ್ಮಠ ದೇವಸ್ಥಾನ
- - -ಕನ್ನಡಪ್ರಭ ವಾರ್ತೆ ನ್ಯಾಮತಿ
ತಾಲೂಕಿನ ಚಿನ್ನಿಕಟ್ಟೆ ಗ್ರಾಮದ ಶ್ರೀ ಗುರುರುದ್ರಸ್ವಾಮಿ ಕಲ್ಮಠ ದೇವಸ್ಥಾನಕ್ಕೆ ಹೋಗುವ ರಸ್ತೆ ಅತಿಕ್ರಮಣವಾಗಿದೆ. ಶೀಘ್ರ ಗೊಂದಲ ಪರಿಹರಿಸಿಸುವಂತೆ ಭಕ್ತರು ಮತ್ತು ಸೇವಾ ಸಮಿತಿಯವರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ಚಿನ್ನಿಕಟ್ಟೆಯಲ್ಲಿ ಕೆಳದಿ ಅರಸರು ನಿರ್ಮಿಸಿರುವ ಪುರಾತನ ಐತಿಹ್ಯ ಹೊಂದಿರುವ ಶ್ರೀ ಗುರುರುದ್ರಸ್ವಾಮಿ ಕಲ್ಮಠ ದೇವಸ್ಥಾನವಿದೆ. ದೇವಸ್ಥಾನವು ಗ್ರಾಮದ ಸರ್ವೆ ನಂ.146ರ ಮಠದ ಹಂಕಲು 6 ಎಕರೆ, 36 ಗುಂಟೆಯ ಜಮೀನಿನ ಮಧ್ಯಭಾಗದಲ್ಲಿದೆ.
ಮಠದ ವೀರಭದ್ರ ದೇವರು, ಮಗ ಗುರಪ್ಪದೇವರು ಕಾಲವಾದ ನಂತರ ಶ್ರೀ ಗುರುರುದ್ರಸ್ವಾಮಿ ಕಲ್ಮಠ ದೇವಸ್ಥಾನಕ್ಕೆ ಭಕ್ತರು ಎಂದಿನಂತೆ ಗದ್ದಿಗೆಯ ದರ್ಶನ ಪಡೆದು ಪೂಜೆಗಳನ್ನು ನೆರವೇರಿಸುತ್ತ ಬಂದಿದ್ದಾರೆ. ಮಠದ ಗುರುಗಳಾದ ಶ್ರೀ ನಿರಂಜನ ಸ್ವಾಮೀಜಿ 2006ನೇ ಇಸವಿಯಿಂದ ಮಠದ ಜೀರ್ಣೋದ್ಧಾರ ಮಾಡುತ್ತ, ಭಕ್ತಿನಿಷ್ಠೆಯಿಂದ ಪೂಜಾ ಕೈಂಕರ್ಯಗಳನ್ನು ಮಾಡುತ್ತಿದ್ದಾರೆ. 2008ರಲ್ಲಿ ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಸಹ ಮಠದಲ್ಲಿ 3 ದಿನಗಳ ಕಾಲ ಅನುಷ್ಠಾನ ಪೂಜಾ ಕಾರ್ಯಗಳನ್ನು ನಡೆಸುತ್ತಿದ್ದಾರೆ ಎಂದಿದ್ದಾರೆ.ಪೂರ್ವದಲ್ಲಿ ಮಠದ ಹಂಕಲಿನ ಒಂದು ಭಾಗಕ್ಕೆ ಕಾಲುದಾರಿ ಇದೆ. ಹಂಕಲಿನ ಮಧ್ಯ ಭಾಗದಲ್ಲಿರುವ ಮಠಕ್ಕೆ ಭಕ್ತರು ಸುಲಭವಾಗಿ ಹೋಗಿಬರುತ್ತಿದ್ದರು. ಕಾಲಕ್ರಮೇಣ ಸಾಗುವಳಿ ಅನುಭವದಿಂದ ಪೂರ್ವಜರು ಹಂಕಲನ್ನು ತಮ್ಮ ಹೆಸರಿಗೆ ದಾಖಲೆ ಮಾಡಿಸಿಕೊಂಡಿದ್ದರು. ಈಗ ಅವರ ಕುಟುಂಬದ ಪಂಡಿತಾರಾಧ್ಯ ಮತ್ತು ಸಹೋದರರು ತಮ್ಮ ಹೆಸರಿಗೆ ದಾಖಲೆ ಮಾಡಿಸಿಕೊಂಡು, ಸಂಚಾರಕ್ಕೆ ದಾರಿ ನೀಡದೇ, ಭಕ್ತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ಭಕ್ತರು ದಿನನಿತ್ಯ ಶ್ರೀ ಮಠಕ್ಕೆ ತೆರಳಿ, ದರ್ಶನ ಮತ್ತು ಪೂಜಾ ಕಾರ್ಯಗಳ ನೆರವೇರಿಸಲು ಸಂಚಾರಕ್ಕೆ ದಾರಿ ಬೇಕಾಗಿದೆ. ಈ ಹಿನ್ನೆಲೆ ಮಠದ ಹಂಕಲು ದಾರಿ ವ್ಯವಸ್ಥೆ ಕಲ್ಪಿಸಲು ನ್ಯಾಮತಿ ತಹಸೀಲ್ದಾರ್ ಎಂ.ಪಿ.ಕವಿರಾಜ್ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭ ಎಂಜಿನಿಯರ್ ಪ್ರದೀಪ್‌ಕುಮಾರ್, ಕಾಂತರಾಜ್, ಸದಾಶಿವಯ್ಯ ಹಿರೇಮಠ, ಸುರೇಶ್, ವಿನಯ್‌ಕುಮಾರ್ ಮತ್ತಿತರರಿದ್ದರು.
- - --ಚಿತ್ರ:
ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಗ್ರಾಮದ ಶ್ರೀ ಗುರುರುದ್ರ ಸ್ವಾಮಿ ಕಲ್ಮಠ ದೇವಸ್ಥಾನಕ್ಕೆ ಭಕ್ತರು ಹೋಗಿ ಬರಲು ಪೂರಕವಾದ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಶ್ರೀಮಠದ ಸೇವಾ ಸಮಿತಿ ಹಾಗೂ ಭಕ್ತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.