ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಇಲ್ಲಿಗೆ ಸಮೀಪದ ಬಜೆಗುಂಡಿ ಗ್ರಾಮದ ಖಿಳಾರಿಯ ಮಸಿದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ. ಮಂತರ್ ಗೌಡ ಪಾಲ್ಗೊಂಡು ಮಾತನಾಡಿ, ಮೊಹರಂ ಆಚರಣೆಯು ತ್ಯಾಗ, ಮಾನವೀಯತೆ, ಸಹೋದರತ್ವ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುವಂತಾಗಲಿ ಎಂದು ಆಶಿಸಿದರು.
ನಮ್ಮ ಜೀವನದಲ್ಲಿ ಬದಲಾವಣೆ ತರಲು ಮೊದಲು ನಮ್ಮ ಮನೆಗಳಿಂದಲೇ ಪ್ರಾರಂಭಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಆಸ್ತಿಯನ್ನಾಗಿ ಮಾಡಬೇಕು. ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ, ಅವರ ಜೀವನವನ್ನು ಅವರು ಮುನ್ನೆಡೆಸುವಂತಾದಾಗ ಅವರಿಗೆ ಮದುವೆ ಮಾಡಿದಲ್ಲಿ ಅವರ ಜೀವನ ಸುಗಮವಾಗಿ ನಡೆಯುತ್ತದೆ. ಮುಂದಿನ ದಿನಗಳಲ್ಲಿ ಮಸೀದಿಯ ಅಭಿವೃದ್ಧಿಗೆ ೧೦ ಲಕ್ಷ ರು. ಶಾಸಕರ ನಿಧಿಯಿಂದ ನೀಡಲಾಗುವುದು. ಸ್ಮಶಾನಕ್ಕೆ ಸ್ಥಳ ಮೀಸಲಿಡಲು ಶ್ರಮಿಸಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖಿಳಾರಿಯ ಮಸೀದಿ ಅಧ್ಯಕ್ಷ ಕೆ.ಎ. ಯಾಕೂಬ್ ಮಾತನಾಡಿ, ಮಹಮ್ಮದ್ ಪೈಗಂಬರ್ ಅವರ ೧೫೦೧ನೇ ಜನ್ಮದಿನಾಚರಣೆಯನ್ನು ನಾಡಿನೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅವರು ಸರ್ವಧರ್ಮದವರೊಂದಿಗೆ ನಾವುಗಳು ಹೇಗೆ ಒಂದಾಗಿ ಬದುಕಬೇಕು. ದೇಶದ ವಿಷಯ ಬಂದಾಗ ನಮ್ಮ ಮಾತೃ ಭೂಮಿಗೆ ಯಾವ ರೀತಿಯ ಗೌರವ ನೀಡಬೇಕು ಎಂದು ತಿಳಿಹೇಳಿದ್ದು, ಅದನ್ನು ಎಲ್ಲರೂ ಪಾಲಿಸಿಕೊಂಡು ಬರುತಿದ್ದೇವೆ. ತ್ಯಾಗ, ಧೈರ್ಯ ಹಾಗೂ ಸತ್ಯಕ್ಕಾಗಿ ಹೋರಾಡಿದ ಇಮಾಮ್ ಹುಸೇನ್ ಅವರ ಸ್ಮರಣೆಗೆ ವಿಶೇಷ ಮಹತ್ವ ಹೊಂದಿದ್ದು, ಎಲ್ಲರೂ ಅವರ ಆದರ್ಶಗಳನ್ನು ಪಾಲಿಸಿಕೊಂಡು ಮುನ್ನೆಡೆದಲ್ಲಿ ಮಾತ್ರ ಇಂದಿನ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದರು.