ಎನ್. ಪಂಪನಗೌಡ ಬಾದನಹಟ್ಟಿ
ಈ ಗ್ರಾಮದಲ್ಲಿ ಒಂದೇ ಒಂದೂ ಮುಸ್ಲಿಂ ಕುಟುಂಬ ಇಲ್ಲ. ಆದರೆ ಹಿಂದೂಗಳೇ ನೂರಾರು ವರ್ಷಗಳಿಂದ ಊರ ಹಬ್ಬದಂತೆ ಮೊಹರಂ ಆಚರಿಸುತ್ತಾ ಬಂದಿದ್ದಾರೆ.
ಜೂ. 26ರಂದು ಕತ್ತಲ್ ರಾತ್ರಿ ಅದ್ಧೂರಿಯಾಗಿ ಹಿಂದೂಗಳೇ ಮುಂದೆ ನಿಂತು ಆಚರಿಸುತ್ತಾರೆ. ಭಕ್ತರ ಇಷ್ಟಾರ್ಥ ಪೂರೈಸುವ ಪೀರಲ ದೇವರನ್ನು ಗ್ರಾಮಸ್ಥರು ಪೂಜಿಸುತ್ತಾರೆ. ಇಲ್ಲಿನ ಮಸೀದಿಯಲ್ಲಿ ಪ್ರತಿಷ್ಠಾಪಿಸುವ ಒಂಬತ್ತು ಬಗೆಯ ಪೀರಲ ದೇವರುಗಳಲ್ಲಿ ಮೂರುಗೆರೆ ಪೀರಲ ದೇವರು, ಕಂಪ್ಲಿ ಪೀರಲದೇವರು, ಮೂಕು ಪೀರಲದೇವರು ಮತ್ತು ಸೋಮಲಾಪುರ ಪೀರಲದೇವರುಗಳು ಹೆಚ್ಚು ಮಹತ್ವ ಪಡೆದಿದೆ.ಸುತ್ತಮುತ್ತಲಿನ ಗ್ರಾಮಸ್ಥರು ಮೊಹರಂ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ದೇವರಿಗೆ ಸಕ್ಕರೆ ಅರ್ಪಿಸುತ್ತಾರೆ. ನೆಂಟರು ಹಬ್ಬಕ್ಕೆ ಬಂದು ಗ್ರಾಮದ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ.
ಗ್ರಾಮದ ಆಂಜನೇಯಸ್ವಾಮಿ ಮತ್ತು ಈಶ್ವರ ದೇವಸ್ಥಾನದ ಮಧ್ಯೆ ಮಸೀದಿ ನಿರ್ಮಿಸಿರುವುದು ಇಲ್ಲಿಯ ವಿಶೇಷ.
ಗ್ರಾಮದಲ್ಲಿ ೬೦೦ ಮನೆಗಳಿದ್ದು, ೪,೦೦೦ ಜನಸಂಖ್ಯೆ ಇದೆ. ವಾಲ್ಮೀಕಿ, ಲಿಂಗಾಯತ, ಮಡಿವಾಳ ಮತ್ತು ಪರಿಶಿಷ್ಟ ಜಾತಿಯವರು ವಾಸಿಸುತ್ತಿದ್ದಾರೆ.
ಫಕೀರಸ್ವಾಮಿ ಮಠದಲ್ಲಿ ಪೀರಲು ದೇವರ ಪ್ರತಿಷ್ಠಾಪನೆ
ಬ್ಯಾಲಹುಣ್ಸಿ ಗ್ರಾಮದಲ್ಲಿ ಫಕೀರಸ್ವಾಮಿ ಮಠದ ಮುಂದೆ ಅಲಾಯಿ ಕುಣಿ ತೆಗೆದು, ಅದರಲ್ಲಿ ಕಟ್ಟಿಗೆಯಿಂದ ಬೆಂಕಿ ಹೊತ್ತಿಸಿ, ನಿಗಿ ನಿಗಿ ಬೆಂಕಿ ಕೆಂಡವಾದ ನಂತರದಲ್ಲಿ ಹಲವು ಯುವಕರು ಅಲಾಯಿ ಕುಣಿಯ ಬೆಂಕಿಯಲ್ಲಿ ಹಾಯ್ದು ಮಠದಲ್ಲಿರುವ ಪೀರಲು ದೇವರುಗಳನ್ನು ಕೈ ಹಿಡಿದು ಹಲಾಯಿ ಕುಣಿ ಸುತ್ತು ಹಾಕಿದರು. ಇಡೀ ರಾತ್ರಿ ಮಠದ ಮುಂದೆ ಸವಾಲು ಪದಗಳು, ಹೆಜ್ಜೆ ಮೇಳ ಕುಣಿತ ನೆರೆದಿದ್ದ ಭಕ್ತರ ಗಮನ ಸೆಳೆದವು.ನಮ್ಮೂರಿನಲ್ಲಿ ಕಳೆದ 35 ವರ್ಷಗಳಿಂದ ಮೊಹರಂ ಹಬ್ಬವನ್ನು ಹಿಂದೂಗಳೇ ಆಚರಿಸುತ್ತಾ ಬಂದಿದ್ದೇವೆ. ಹಿರಿಯರ ಮಾರ್ಗದರ್ಶನದಲ್ಲಿ ಮಕರಬ್ಬಿ ಗ್ರಾಮದ ಫಕೀರಸಾಬ್ ಅವರನ್ನು ಕರೆ ತಂದು ಹಬ್ಬ ಆಚರಿಸುತ್ತೇವೆ ಎಂದು ಬ್ಯಾಲಹುಣ್ಸಿ ಲಕ್ಷ್ಮಣ ಬಾರ್ಕಿ ಹೇಳಿದರು.ಮೊಹರಂ ಹಬ್ಬದಲ್ಲಿ ಭಕ್ತರು ಹಬ್ಬದ ಕೊನೆ ದಿನದ ವರೆಗೂ ವಿವಿಧ ರೀತಿಯಲ್ಲಿ ಹರಕೆ ತೀರಿಸುತ್ತಾರೆ. ಅಲಾಯಿ ಕುಣಿಯ ಬೆಂಕಿಗೆ ರೈತರು ಉಪ್ಪು ಹಾಕುವುದರಿಂದ ಜಾನುವಾರುಗಳಿಗೆ ಉಣ್ಣೆ ಕೀಟ ಬಾಧೆ ಬರುವುದಿಲ್ಲ ಎಂದು ಮಕರಬ್ಬಿ ಫಕೀರಸಾಬ್ ಹೇಳಿದರು.