ಶಿರಸಿ: ಜನಸಂಘದ ಸಂಸ್ಥಾಪಕ ದಿ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸವನ್ನು ಬನವಾಸಿ ಬಿಜೆಪಿ ಶಕ್ತಿ ಕೇಂದ್ರದಿಂದ ಗಿಡ ನೆಡುವ ಮೂಲಕ ಆಚರಿಸಲಾಯಿತು.
ಬಿಜೆಪಿಯ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ್ ನಾಯ್ಕ್ ಮಾತನಾಡಿ, ಮುಖರ್ಜಿಯವರು ಹಿಂದೂಗಳ ಒಗ್ಗಟ್ಟಿಗಾಗಿ ಶ್ರಮಿಸಿದ ಮಹಾನ್ ಚೇತನರಾಗಿದ್ದಾರೆ. ನಾವೆಲ್ಲರೂ ಅವರ ತತ್ವ ಆದರ್ಶಗಳ ಅಳವಡಿಸಿಕೊಂಡು ಸಾಗಬೇಕಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಗೆಲುವ ಶತಸಿದ್ಧ. ಆದರೆ ನಮ್ಮಲ್ಲಿ ಸಂಘಟನೆಯ ಕೊರತೆಯಿದೆ. ಪಕ್ಷ ಸಂಘಟನೆಯು ಅತಿಮುಖ್ಯವಾಗಿದ್ದು ನಾವೆಲ್ಲರೂ ಪಕ್ಷ ಸಂಘಟನೆಯ ಕಡೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಕಳೆದ ಚುನಾವಣೆಯ ಸಮಯದಲ್ಲಿ ಬಿಜೆಪಿಯ ಪ್ರಮುಖರು ನನ್ನ ಸೋಲಿಗೆ ಷಡ್ಯಂತ್ರ ನಡೆಸಿದ್ದರು ಎಂಬ ಶಾಸಕರ ಹೇಳಿಕೆಯಲ್ಲಿ ಹುರುಳಿಲ್ಲ. ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತರ ಪರಿಶ್ರಮದಿಂದ ಉಪಚುನಾವಣೆಯಲ್ಲಿ ೩೨ಸಾವಿರಕ್ಕೂ ಅಧಿಕ ಮತ ಹಾಗೂ ಕಳೆದ ಚುನಾವಣೆಯಲ್ಲಿ ೪ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶಾಸಕರು ಕಾಂಗ್ರೆಸ್ ಪಕ್ಷದಲ್ಲಿರುವಾಗ ಎರಡು ಬಾರಿ ಅತಿ ಕಡಿಮೆ ಮತಗಳಿಂದ ಗೆದ್ದು, ಒಂದು ಬಾರಿ ಸೋಲನುಭವಿಸಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಶಾಸಕರು ಇಂತಹ ಹೇಳಿಕೆ ನಿಲ್ಲಿಸಬೇಕು. ಮುಂದಿನ ಚುನಾವಣೆಗೆ ಇಂದಿನಿಂದಲೇ ಪಕ್ಷ ಸಂಘಟನೆಯ ಕಾರ್ಯದಲ್ಲಿ ನಾವೆಲ್ಲರೂ ತೊಡಗಿಕೊಳ್ಳೋಣ ಎಂದರು.
ಹಿರಿಯ ಮುಖಂಡ ಭಾಶಿ ಶಂಕರ ಗೌಡ ಮಾತನಾಡಿ, ರಾಜಕೀಯದಲ್ಲಿ ಪಕ್ಷ ನಿಷ್ಠೆ ಮುಖ್ಯವಾಗಿದೆ. ಈ ಭಾಗದ ಶಾಸಕರಿಗೆ ಪಕ್ಷ ನಿಷ್ಠೆಯಿಲ್ಲವಾಗಿದೆ. ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ನಾಯಕರು ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರಕ್ಕೆ ಒಳ್ಳೆಯ ನಾಯಕನನ್ನು ಪರಿಚಯಿಸಬೇಕಾಗಿದೆ. ಸಾಮಾನ್ಯ ಕಾರ್ಯಕರ್ತರಿಗೆ ತೊಂದರೆಯಾಗದಂತೆ ಅವರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕನನ್ನು ಆಯ್ಕೆಮಾಡಬೇಕಾಗಿದೆ. ಮುಂಬರುವ ಜಿಪಂ, ತಾಪಂ ಹಾಗೂ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕಾಗಿ ದುಡಿದಿರುವ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂದರು.ಬಿಜೆಪಿ ಜಿಲ್ಲಾ ಸದಸ್ಯ ಅರವಿಂದ ಶೆಟ್ಟಿ, ಗ್ರಾಮೀಣ ಮಂಡಳ ಉಪಾಧ್ಯಕ್ಷ ಮೃತ್ಯುಂಜಯ ಚೌದರಿ, ವಿ.ಎಸ್. ನಾಯ್ಕ್, ಜಿಲ್ಲಾ ಓಬಿಸಿ ಮೋರ್ಚಾ ಸದಸ್ಯ ವಿಶ್ವನಾಥ ಹಾದಿಮನಿ ಪಕ್ಷ ಸಂಘಟನೆಯ ಕುರಿತು ಮಾತನಾಡಿದರು.
ಹಿರಿಯರಾದ ಗಣೇಶ ಸಣ್ಣಲಿಂಗಣ್ಣನವರ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಪುಟ್ಟರಾಜ ಸವಣೂರು, ಬನವಾಸಿ ಶಕ್ತಿಕೇಂದ್ರದ ಅಧ್ಯಕ್ಷ ಚಂದ್ರಶೇಖರ ಗೌಡ ಹಾಗೂ ವಿವಿಧ ಶಕ್ತಿ ಕೇಂದ್ರದ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು.