ಮಹೇಶ ಛಬ್ಬಿ
ಗದಗ: ತಾಲೂಕಿನ ಮುಳಗುಂದದಿಂದ ನಿತ್ಯ ಬೃಹತ್ ಲಾರಿಗಳಲ್ಲಿ ಓವರ್‌ಲೋಡ್ ಮಾಡಿಕೊಂಡು ಸಂಚರಿಸುತ್ತಿದ್ದರೂ ಅಧಿಕಾರಿಗಳು ಕಣ್ಣೆತ್ತಿ ನೋಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.ಪಟ್ಟಣದ ವ್ಯಾಪ್ತಿಯಲ್ಲಿ ಹತ್ತಾರು ಕಲ್ಲಿನ ಕ್ರಷರ್‌ಗಳು ಇವೆ. ಪಟ್ಟಣದಿಂದ ಲಕ್ಷ್ಮೇಶ್ವರ, ಗದಗ, ಹುಬ್ಬಳ್ಳಿ ಇನ್ನಿತರ ನಗರಗಳಿಗೆ ನಿತ್ಯ 6 ಚಕ್ರದ, 10 ಚಕ್ರದ ಹಾಗೂ 12 ಚಕ್ರದ ಟಿಪ್ಪರ್‌ಗಳಲ್ಲಿ ಖಡಿ, ಎಂ.ಸ್ಯಾಂಡ್ ಪೌಡರ್‌ನ್ನು ನಿಯಮ ಮೀರಿ ತುಂಬಿಕೊಂಡು ಧೂಳೆಬ್ಬಿಸುತ್ತಾ ಸಂಚರಿಸುವುದನ್ನು ಜನರು ನೋಡುತ್ತಿದ್ದಾರೆ.
ಬೈಕ್ ಸವಾರರು ಹೈರಾಣು: 10 ಚಕ್ರದ ಟಿಪ್ಪರ 24 ಟನ್ ಸಾಮರ್ಥ್ಯವಿದ್ದರೆ 30 ಟನ್‌ಗಿಂತಲೂ ಹೆಚ್ಚು ಲೋಡ್ ಮಾಡಲಾಗುತ್ತಿದೆ. ಹೀಗೆ ಸಾಮರ್ಥ್ಯಕ್ಕಿಂತ 8ರಿಂದ 10 ಟನ್‌ವರೆಗೂ ಹೆಚ್ಚಿನ ಲೋಡ್ ಹಾಕಲಾಗುತ್ತದೆ. ಗೋಪುರದಂತೆ ಹಾಕಿದ ಎಂ.ಸ್ಯಾಂಡ್‌ಗೆ ಹೊದಿಕೆ ಸಹ ಹಾಕಿರುವುದಿಲ್ಲ. ಗಾಳಿ ರಭಸಕ್ಕೆ ಹಿಂಬದಿಯ ಬೈಕ್ ಸವಾರರ ಕಣ್ಣಿಗೆ ರಾಚುತ್ತದೆ. ಅಷ್ಟೇ ಅಲ್ಲದೆ ಖಡಿಗಳು ರಸ್ತೆ ತುಂಬೆಲ್ಲ ಚೆಲ್ಲುವುದರಿಂದ ಎಷ್ಟೋ ಬೈಕ್ ಸವಾರರು ಬಿದ್ದು, ಸಾವು-ನೋವಿಗೆ ಈಡಾಗಿದ್ದಾರೆ. ಧೂಳಿನಿಂದ ರಸ್ತೆ ಅಕ್ಕಪಕ್ಕದ ಮನೆಯವರು, ರಸ್ತೆ ಬದಿ ವ್ಯಾಪಾರಸ್ಥರು ಹೈರಾಣಗಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಬೇಕಿದ್ದ ಸಾರಿಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಖಡಿ, ಎಂ. ಸ್ಯಾಂಡ್ ಸಾಗಾಟ:ನೈಸರ್ಗಿಕ ಮರಳು ದೊರೆಯದ ಹಿನ್ನೆಲೆಯಲ್ಲಿ ಎಂ. ಸ್ಯಾಂಡ್‌ಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಶೀತಾಹಲರಿ, ಪರಸಾಪುರ, ಹೊಳಲಾಪುರ ಹಾಗೂ ಖಾನಾಪುರ ವ್ಯಾಪ್ತಿಯಲ್ಲಿ ಬರುವ ಗುಡ್ಡದ ಪ್ರದೇಶದಲ್ಲಿ 25ಕ್ಕೂ ಹೆಚ್ಚು ಬೃಹದಾಕಾರದ ಕಲ್ಲಿನ ಕ್ರಷರ್‌ಗಳಿದ್ದು, ನಿತ್ಯ ಸಾವಿರಾರು ಟನ್ ಎಂ. ಸ್ಯಾಂಡ್, ಖಡಿ, ಗಿಲಿಟ್ ಉತ್ಪಾದನೆಯಾಗುತ್ತಿದೆ. ಈ ವಸ್ತುಗಳನ್ನು ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಗದಗ ಇತರ ಪ್ರದೇಶಗಳಿಗೆ ಸಾಗಾಟ ಮಾಡಲಾಗುತ್ತದೆ.ಒವರ್‌ಲೋಡ್‌ಗಿಲ್ಲ ತಡೆ: ಒಳ ಮಾರ್ಗದಲ್ಲಿ ಅಧಿಕ ಭಾರ ಹಾಕಿಕೊಂಡು ಸಂಚರಿಸುತ್ತಿರುವ ಟಿಪ್ಪರ್, ಲಾರಿಗಳಿಗೆ ಪೊಲೀಸ್, ಸಾರಿಗೆ ಇಲಾಖೆಯವರ ಭಯವು ಇಲ್ಲದಾಗಿದೆ. ಇದು ಅಧಿಕಾರಿಗಳಿಗೆ ತಿಳಿದಿಲ್ಲವೇ ಅಥವಾ ತಿಳಿದು ಕ್ರಮ ಕೈಗೊಳ್ಳಲು ಬರುತ್ತಿಲ್ಲವೇ? ಉದ್ಯಮಿಗಳ ಲಾಬಿಗೆ ಸುಮ್ಮನಿದ್ದಾರಾ? ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದರೂ ಸಹ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಥರ್ಡ್ ಐಗೆ ಓವರ್ ಲೋಡ್ ಕಾಣಲ್ವಾ?: ಸುಗಮ ಸಂಚಾರ ಹಾಗೂ ಕಳ್ಳತನ ಚಟುವಟಿಕೆ ನಿಯಂತ್ರಣ ದೃಷ್ಟಿಯಿಂದ ಗದಗ ಜಿಲ್ಲಾ ಪೊಲೀಸ್ ನಗರದಾದ್ಯಂತ ಅಳವಡಿಸಿದ ಥರ್ಡ್ ಐಗೆ ಒವರ್‌ಲೋಡ್ ಮಾಡಿಕೊಂಡು ಗದಗ ನಗರದಲ್ಲಿ ಸಂಚರಿಸುವ ವಾಹನಗಳು ಕಾಣುವುದಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಟಿಪ್ಪರ್‌ಗಳ ಡ್ರೈವರ್‌ಗಳ ಸಮವಸ್ತ್ರವೇ ಇರುವುದಿಲ್ಲ, ಸೀಟ್ ಬೆಲ್ಟ್ ಹಾಕಿಕೊಂಡಿರುವುದಿಲ್ಲ, ಕೆಲವೊಬ್ಬರ ಲೈಸೆನ್ಸ್ ಕೂಡಾ ಇರುವುದಿಲ್ಲ. ಜಿಲ್ಲಾ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಥರ್ಡ್ ಐ ಯೋಜನೆ ಜಾರಿಗೊಳಿಸಿ, ಕಳ್ಳತನ ಚಟುವಟಿಕೆ ನಿಯಂತ್ರಣ ಹಾಗೂ ಸಾರಿಗೆ ನಿಯಮ ಉಲ್ಲಂಘನೆ ನಿಯಂತ್ರಣ ಮಾಡುವ ಒಂದು ವಿನೂತನ ಯೋಜನೆ ರಾಜ್ಯಾದ್ಯಂತ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಥರ್ಡ್ ಐ ಕೇವಲ ಬೈಕ್, ಕಾರು ಸವಾರರು ಸಾರಿಗೆ ನಿಯಮ ಪಾಲಿಸದಿದ್ದರೆ ದಂಡ ವಿಧಿಸುತ್ತದೆ. ಆದರೆ ಎಂ. ಸ್ಯಾಂಡ್, ಖಡಿ ಒವರ್‌ಲೋಡ್ ಮಾಡಿಕೊಂಡು ಬರುವ ಟಿಪ್ಪರ್‌ಗಳು ಮಾತ್ರ ಕಾಣುವುದಿಲ್ಲವಾ ಎನ್ನುತ್ತಾರೆ ಸಾರ್ವಜನಿಕರು.ಅಧಿಕ ಭಾರ ಹೊತ್ತ ಟಿಪ್ಪರ್, ಲಾರಿಗಳ ಓಡಾಟದಿಂದ ಅಕ್ಕಪಕ್ಕದ ಜನರಿಗೆ ಧೂಳು ಎರಚುತ್ತಿದ್ದು, ಅಸ್ತಮಾ ಅಲರ್ಜಿಯಂತಹ ಅನೇಕ ರೋಗಗಳಿಗೆ ತುತ್ತಾಗುವಂತೆ ಮಾಡಿದೆ. ಅಲ್ಲದೇ ಬೆಳೆಗಳ ಮೇಲೆ ಕುಳಿತು ಇದು ಬೆಳವಣಿಗೆಗೆ ತೊಂದರೆಯನ್ನುಂಟು ಮಾಡುತ್ತದೆ. ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ರೈತ ದೇವಪ್ಪಅಣ್ಣಿಗೇರಿ ಹೇಳಿದರು.