ಕನ್ನಡಪ್ರಭ ವಾರ್ತೆ ಮೂಲ್ಕಿ
ಮೂಲ್ಕಿಯಲ್ಲಿ ಮೆಸ್ಕಾಂ ಇಲಾಖೆಯ ಕಾರ್ಯವೈಖರಿ ಬಗ್ಗೆ ಸದಸ್ಯರು ಪಕ್ಷಭೇದ ಮರೆತು ಅಸಮಾಧಾನ ವ್ಯಕ್ತಪಡಿಸಿದರು. ನಗರ ಪಂಚಾಯಿತಿ ಸಭೆಯಲ್ಲಿ ಮೆಸ್ಕಾಂ ಅವ್ಯವಸ್ಥೆಗಳ ಬಗ್ಗೆ ನಿರ್ಣಯಗೊಂಡ ಕೆಲಸಗಳು ಅನುಷ್ಠಾನಗೊಳ್ಳುತ್ತಿಲ್ಲ ಎಂದು ಸದಸ್ಯ ಶೈಲೇಶ್ ತಿಳಿಸಿ, ಕೆ.ಎಸ್. ರಾವ್ ನಗರ ಬಳಿ ನಗರ ಪಂಚಾಯಿತಿ ಪರವಾನಗಿ ಪಡೆಯದೆ ಕೊಳವೆಬಾವಿ ತೋಡಿದ್ದು, ವಿದ್ಯುತ್ ಸಂಪರ್ಕ ಕೊಡಬೇಡಿ ಎಂದು ಮೆಸ್ಕಾಂ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
ಇದಕ್ಕೆ ಸದಸ್ಯ ಯೋಗೀಶ್ ಕೋಟ್ಯಾನ್ ಹಾಗೂ ಮಂಜುನಾಥ ಕಂಬಾರ ಆಕ್ಷೇಪ ವ್ಯಕ್ತಪಡಿಸಿ, ನ.ಪಂ. ವ್ಯಾಪ್ತಿಯಲ್ಲಿ ಅನೇಕ ಅನಧಿಕೃತ ಹಾಗೂ ಅಕ್ರಮಗಳು ಇದ್ದು ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.ಸದಸ್ಯ ಯೋಗೀಶ್ ಕೋಟ್ಯಾನ್ ಮಾತನಾಡಿ, ಚಿತ್ರಾಪು, ಪಡುಬೈಲು ಪ್ರದೇಶಗಳಲ್ಲಿ ಅಣೆಕಟ್ಟಿನಿಂದ ಉಪ್ಪು ನೀರು ಸೋರಿಕೆಯಾಗಿ ಬೆಳೆ ಹಾನಿಯಾಗಿದ್ದು, ಸೂಕ್ತ ಕ್ರಮ ಕೈಗೊಂಡು ರೈತರಿಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಹೆದ್ದಾರಿ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಅಧ್ಯಕ್ಷ ಸತೀಶ್ ಅಂಚನ್ ಸೂಚನೆ ನೀಡಿದರು.
ಸದಸ್ಯ ಮಂಜುನಾಥ ಕಂಬಾರ ಮಾತನಾಡಿ, ಕೆ.ಎಸ್. ರಾವ್ ನಗರದಲ್ಲಿ ಮಟ್ಕಾ ಇಸ್ಪೀಟ್ ಸಹಿತ ಅಕ್ರಮ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಮಾಹಿತಿ ಕೊಟ್ಟರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ ಮಾಹಿತಿ ಕೊಟ್ಟವರ ಹೆಸರು ಸೋರಿಕೆ ಮಾಡುತ್ತಾರೆ ಎಂದು ತಿಳಿಸಿದರು.ಕೆ.ಎಸ್. ರಾವ್ ನಗರದ ಲಿಂಗಪ್ಪಯ್ಯ ಕಾಡಿನಲ್ಲಿ ಅಂಗನವಾಡಿ ಜಾಗವನ್ನು ಅತಿಕ್ರಮಣ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಭೀಮಾಶಂಕರ್ ಒತ್ತಾಯಿಸಿದಾಗ ಪರ ವಿರೋಧ ಚರ್ಚೆ ನಡೆಯಿತು.
ನ.ಪಂ. ವ್ಯಾಪ್ತಿಯಲ್ಲಿ ಕಸ ತ್ಯಾಜ್ಯ ವ್ಯವಸ್ಥಿತ ರೀತಿಯಲ್ಲಿ ವಿಲೇವಾರಿ ಬಗ್ಗೆ ಎನ್‌ಜಿಒ ಸಾಹಸ್, ಮಾಹಿತಿ ನೀಡಿದರು.ಮೂಲ್ಕಿ ನಗರ ಪಂಚಾಯಿತಿ ಮುಖ್ಯಾಧಿಕಾರಿ ಮಧುಕರ್, ಉಪಾಧ್ಯಕ್ಷೆ ಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ, ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.