ಮೂಲ್ಕಿ ನಗರ ಪಂಚಾಯಿತಿ ಬಜೆಟ್‌ ಮಂಡನೆ

KannadaprabhaNewsNetwork | Published : Jan 11, 2025 12:46 AM

ಸಾರಾಂಶ

ಈ ಬಾರಿಯ ಮುಂಗಡಪತ್ರದಲ್ಲಿ ಮೂಲಭೂತ ಸೌಕರ್ಯಗಳಾದ ದಾರಿದೀಪ, ರಸ್ತೆ, ಕುಡಿಯುವ ನೀರು ವ್ಯವಸ್ಥೆಗಾಗಿ 14,60,47,174 ರುಪಾಯಿ ಹಂಚಿಕೆ ಮಾಡಲಾಗಿದೆ .

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೂಲ್ಕಿ ನಗರ ಪಂಚಾಯಿತಿ ಸಭಾಭವನದಲ್ಲಿ ನಡೆದ ನಗರ ಪಂಚಾಯಿತಿ 2025- 26 ನೇ ಸಾಲಿನ ಸಾಲಿನ ಆಯವ್ಯಯ ಹಾಗೂ ಬಜೆಟ್‌ ಮಂಡನೆ ಸಭೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ಅನುದಾನ, ಇತರ ಮೂಲಗಳು ಸೇರಿ ಒಟ್ಟು 10,27,68,000 ಮೊತ್ತದ ಬಜೆಟ್‌ ಮಂಡಿಸಲಾಯಿತು.

ನಗರ ಪಂಚಾಯಿತಿ ಅಧ್ಯಕ್ಷ ಸತೀಶ್‌ ಅಂಚನ್ ಬಜೆಟ್‌ ಮಂಡಿಸಿ ಮಾತನಾಡಿದರು. 2025 26ನೇ ಸಾಲಿಗೆ ಪಂಚಾಯಿತಿಯ ಪ್ರಮುಖ ಸ್ವಂತ ಆದಾಯಗಳಾದ ಆಸ್ತಿ ತೆರಿಗೆ, ನೀರಿನ ಶುಲ್ಕ, ಪರವಾನಗಿ ಶುಲ್ಕ, ಅಂಗಡಿ ಬಾಡಿಗೆ ಮತ್ತು ಮಾರುಕಟ್ಟೆ ಮತ್ತು ಪಂಚಾಯಿತಿಯ ಇತರ ಮೂಲಗಳಿಂದ ಬರುವ ಆದಾಯ ನಿರೀಕ್ಷಿಸಲಾಗಿದೆ.

2,24,35,000,00 ರು. ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಬೇಕಾದ ಯೋಜನೇತರ ಅನುದಾನಗಳಾದ ವೇತನ ಅನುದಾನ, ನೀರು ಸರಬರಾಜು, ವಿದ್ಯುತ್‌ ಅನುದಾನ, ರಾಜಸ್ವ ವೆಚ್ಚಕ್ಕಾಗಿ ನಿರ್ದಿಷ್ಟ ಅನುದಾನ ರು. 2,79,85,000 ರು ಒಟ್ಟು ಆದಾಯ ನಿರೀಕ್ಷಿಸಲಾಗಿದೆ. ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಯೋಜನೆ ಸ್ವಚ್ಛ ಭಾರತ್ ಮತ್ತು ಇತರೆ 1,34,75, 000 ರು. ಅನುದಾವನ್ನು ಈ ಬಾರಿಯ ಆಯವ್ಯಯದಲ್ಲಿ ನಿರೀಕ್ಷಿಸಲಾಗಿದೆ ಎಂದು ಹೇಳಿದರು.

ಈ ಬಾರಿಯ ಮುಂಗಡಪತ್ರದಲ್ಲಿ ಮೂಲಭೂತ ಸೌಕರ್ಯಗಳಾದ ದಾರಿದೀಪ, ರಸ್ತೆ, ಕುಡಿಯುವ ನೀರು ವ್ಯವಸ್ಥೆಗಾಗಿ 14,60,47,174 ರುಪಾಯಿ ಹಂಚಿಕೆ ಮಾಡಲಾಗಿದೆ . ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪಂಚಾಯತ್ ಗೆ ಬಿಡುಗಡೆಯಾಗುವ ಅನುದಾನದ ಜೊತೆಗೆ ಪಂಚಾಯತ್ ನಿಧಿಯಲ್ಲಿ ಕಾದಿರಿಸಿದ ಮೊತ್ತವನ್ನು ಸಂಪೂರ್ಣವಾಗಿ ಮೂಲಭೂತ ಅಭಿವೃದ್ಧಿ ಕಾರ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಬೀದಿ ನಾಯಿ ಸಂತಾನ ಹರಣ ಚಿಕಿತ್ಸೆಗೆ, ಪೌರಕಾರ್ಮಿಕರ ಆರೋಗ್ಯ ಹಿತದೃಷ್ಟಿ, ಸ್ಲಮ್ ಅಭಿವೃದ್ಧಿ, ಹೊಸ ರಸ್ತೆ ನಿರ್ಮಾಣ, ಚರಂಡಿ ಅಭಿವೃದ್ಧಿಗೆ ಅನುದಾನದ ನಿರೀಕ್ಷೆ, ಸರ್ಕಾರದ ಮಾರ್ಗಸೂಚಿಯಂತೆ ನಗರ ಉದ್ಯಾನವನ ಹಾಗೂ ರುದ್ರ ಭೂಮಿಗಳ ನಿರ್ವಹಣೆಗೆ ಅನುದಾನಗಳನ್ನು ಕಾದಿರಿಸಲಾಗಿದೆ ಎಂದರು. ಬಜೆಟ್ ಮಂಡನೆಗೆ ಉತ್ತರಿಸಿದ ನಗರ ಪಂಚಾಯಿತಿ ಸದಸ್ಯ ಮಂಜುನಾಥ್ ಕಂಬಾರ್, ತಮ್ಮ ವಾರ್ಡ್‌ನಲ್ಲಿ ಕುಡಿಯುವ ನೀರಿನ ಅವ್ಯವಸ್ಥೆ ಬಗ್ಗೆ ಸಭೆಯ ಗಮನಕ್ಕೆ ತಂದರು.

ನಗರ ಪಂಚಾಯಿತಿ ಮುಖ್ಯಾಧಿಕಾರಿ ಮಧುಕರ್ ಮಾತನಾಡಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಕುಡಿಯುವ ನೀರಿನ ಸಂಪರ್ಕವಿದ್ದು ಸಕ್ರಮಗೊಳಿಸಲು ನಗರವಾಸಿಗಳ ಹಾಗೂ ಪಂಚಾಯಿತಿ ಸದಸ್ಯರ ಸಹಕಾರಬೇಕು ಎಂದು ಹೇಳಿದರು. ಬಜೆಟ್‌ ಮಂಡನೆಯ ಚರ್ಚೆಯಲ್ಲಿ ನಗರ ಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು.

Share this article