ಮೂಲ್ಕಿ ತಾಲೂಕು ಆಡಳಿತ ಕಚೇರಿ ಪ್ರಜಾ ಸೌಧದ ಸೇವಕ ಕಚೇರಿಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರು ಸಾರ್ವಜನಿಕರ ಸಮಸ್ಯೆ ಹಾಗೂ ಅಹವಾಲುಗಳನ್ನು ಸ್ವೀಕರಿಸಿದರು.
ಮೂಲ್ಕಿ: ಮೂಲ್ಕಿ ತಾಲೂಕು ಆಡಳಿತ ಕಚೇರಿ ಪ್ರಜಾ ಸೌಧದ ಸೇವಕ ಕಚೇರಿಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರು ಸಾರ್ವಜನಿಕರ ಸಮಸ್ಯೆ ಹಾಗೂ ಅಹವಾಲುಗಳನ್ನು ಸ್ವೀಕರಿಸಿದರು. ಸಾಮಾಜಿಕ ಕಾರ್ಯಕರ್ತ ನವೀನ್ ಪುತ್ರನ್ ಅವರು ಮೂಲ್ಕಿಯ ಕೆಎಸ್ ರಾವ್ ನಗರ ರೈಲ್ವೇ ನಿಲ್ದಾಣದಿಂದ ಮೂಲ್ಕಿ- ಮೂಡುಬಿದಿರೆ ರಾಜ್ಯ ಹೆದ್ದಾರಿ ಸಂಪರ್ಕಿಸುವ ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸಬೇಕು ಎಂದು ಶಾಸಕರಿಗೆ ಮನವಿ ಸಲ್ಲಿಸಿದರು.
ಕಿನ್ನಿಗೋಳಿ ಬಸ್ ಸ್ಟಾಂಡ್ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಅವರು ಶಾಸಕರ ಗಮನಕ್ಕೆ ತಂದು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಮೂಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿಯಲ್ಲಿ ಅಮೃತ್ 2.0 ಕುಡಿಯುವ ನೀರಿನ ಯೋಜನೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಅಲ್ಲಲ್ಲಿ ಪೈಪ್ ಅಳವಡಿಕೆ ಸಂದರ್ಭ ರಸ್ತೆಯನ್ನು ಅಗೆದಿದ್ದು, ಚರಂಡಿಗಳನ್ನು ಮುಚ್ಚಲಾಗಿದೆ. ಗುತ್ತಿಗೆದಾರರು ಸಮರ್ಪಕ ಕಾಮಗಾರಿ ನಡೆಸುತ್ತಿಲ್ಲ. ಮುಂದಿನ ಮಳೆಗಾಲದಲ್ಲಿ ಇದರಿಂದ ತೀವ್ರ ತೊಂದರೆಯಾಗಲಿದೆ ಎಂದು ಶಾಸಕರಿಗೆ ನಾಗರಿಕರೊಬ್ಬರು ದೂರು ನೀಡಿದರು. ಈ ಬಗ್ಗೆ ಶಾಸಕರು ಪರಿಶೀಲಿಸುವ ಭರವಸೆ ನೀಡಿದರು.
ಕಲ್ಲಾಪು ಶ್ರೀ ವೀರಭದ್ರ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು, ದೇವಸ್ಥಾನದ ಇನ್ನೊಂದು ಪಾರ್ಶ್ವದಲ್ಲಿರುವ ಅಂಗನವಾಡಿಯನ್ನು ಸ್ಥಳಾಂತರಗೊಳಿಸಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಶಾಸಕರಿಗೆ ಮನವಿ ಸಲ್ಲಿಸಿದರು. ವಿವಿಧ ಸಮಸ್ಯೆಗಳ ಬಗ್ಗೆ ತಾಲೂಕು ವ್ಯಾಪ್ತಿಯ ವಿವಿಧೆಡೆಯಿಂದ ಬಂದ ನಾಗರಿಕರು ಶಾಸಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಮೂಲ್ಕಿ ತಹಸೀಲ್ದಾರ್ ಶ್ರೀಧರ ಮುಂದಲಮನಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ, ಬಿಜೆಪಿ ನಾಯಕರಾದ ಸತೀಶ್ ಅಂಚನ್, ರಂಗನಾಥ ಶೆಟ್ಟಿ, ಸುಭಾಷ್ ಶೆಟ್ಟಿ, ಶೈಲೇಶ್ ಕುಮಾರ್, ನವೀನ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.