ಮುಲ್ಕಿ: ಕಳೆದ ಕೆಲವು ದಿನಗಳಿಂದ ಮೂಲ್ಕಿ ಪರಿಸರದಲ್ಲಿ ದಾಂದಲೆ ನಡೆಸಿ ಸಿಕ್ಕ ಸಿಕ್ಕವರಿಗೆ ಕಲ್ಲಿನಿಂದ ಹೊಡೆಯುತ್ತಿದ್ದ ಮಾನಸಿಕ ಆಸ್ವಸ್ಥನನ್ನು ಕೊನೆಗೂ ಮುಲ್ಕಿ ಪೊಲೀಸರು ಹಿಡಿದಿದ್ದಾರೆ. ಸಾಮಾಜಿಕ ಕಾರ್ಯಕರ್ತ, ಆಪದ್ಬಾಂಧವ ಪೇಚು ಯಾನೆ ಪ್ರಸಾದ್ ಪೂಜಾರಿ ಸಹಾಯದಿಂದ ಹಿಡಿದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಂಗಳವಾರ ಪಡುಪಣಂಬೂರು ಕಲ್ಲಾಪು ರೈಲ್ವೇ ಗೇಟ್ ಬಳಿ ವಾಹನಗಳಿಗೆ ಕಲ್ಲುತೂರಾಟ ನಡೆಸಿ ದಾಂದಲೆ ನಡೆಸಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿ ಬುಧವಾರ ಕೊಲಕಾಡಿ ರೈಲ್ವೇ ಗೇಟ್ ಬಳಿ ರೈಲು ಬರುವ ಸಮಯದಲ್ಲಿ ರೈಲ್ವೇ ಕಂಬಿಯಲ್ಲಿ ಕುಳಿತುಕೊಂಡಿದ್ದ.
ಈ ಸಂದರ್ಭ ಗೇಟ್ ಕೀಪರ್ ವಿಜಯ್ ಆತನನ್ನು ಎಬ್ಬಿಸಲು ಹೋದಾಗ ಅವರ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದ. ಅಲ್ಲಿಂದ ಸಂತೋಷ್ ಎಂಬವರ ಮನೆಗೆ ಹೋದಾಗ ಅಲ್ಲಿ ನಾಯಿ ಬೊಗಳಿದ ಕಾರಣ ಹೆದರಿ ಅಲ್ಲಿಂದ ಮತ್ತೊಂದು ಮನೆಗೆ ಹೋಗಿ ಅಲ್ಲಿದ್ದ ಮಹಿಳೆಯರಿಗೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ಸಂದರ್ಭ ಮನೆಯವರು ಆತನನ್ನು ಹಿಡಿದು ಕಟ್ಟಿಹಾಕಿದ್ದಾರೆ.
ಸ್ಥಳಕ್ಕೆ ಪೊಲೀಸರು ಬಂದು ಆತನನ್ನು ಹಿಡಿಯುವ ವೇಳೆ ಆತ ಕೆಸರಲ್ಲಿ ಹೊರಳಾಡಿ ಅಲ್ಲಿಂದ ಓಡಿ ಹೋಗಿದ್ದ. ಬಳಿಕ ಸಂಜೆ ವೇಳೆ ಕುಬೆವೂರು ಶಿಮಂತೂರು ರಸ್ತೆಯ ಟೈಲ್ಸ್ ಫ್ಯಾಕ್ಟರಿ ರೇಲ್ವೇ ಕ್ರಾಸಿಂಗ್ ಜಂಕ್ಷನ್ ಬಳಿ ದಾರಿಯಲ್ಲಿ ಹೋಗುತ್ತಿರುವವರಿಗೆ ಕಲ್ಲು ಎಸೆಯಲು ಶುರು ಮಾಡಿದ್ದು ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೂಲ್ಕಿ ಪೊಲೀಸರಾದ ಚಂದ್ರಶೇಖರ್ ಹಾಗೂ ಕಿಶೋರ್ ಧಾವಿಸಿದ್ದು ಅವರಿಗೂ ಮಾನಸಿಕ ಅಸ್ವಸ್ಥ ಕಲ್ಲು ಎಸೆದಿದ್ದು ಗಾಯಗಳಾಗಿವೆ.ಕೂಡಲೇ ಸ್ಥಳಕ್ಕೆ ಮೂಲ್ಕಿ ಆಪದ್ಬಾಂಧವ ಪೇಚು ಯಾನೆ ಪ್ರಸಾದ್ ಪೂಜಾರಿ ಧಾವಿಸಿ ಪೊಲೀಸರ ಸಹಾಯದೊಂದಿಗೆ ಆತನನ್ನು ಹಿಡಿದು ಮೂಲ್ಕಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಈ ವ್ಯಕ್ತಿಯ ಗುರುತು ಪತ್ತೆಹಚ್ಚಿದ್ದು, ತುಕಾರಾಮ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ. ಈತ ಮಾಹಿತಿ ನೀಡಿದಂತೆ ತಂದೆ ಪೂವಪ್ಪ ಶೆಟ್ಟಿಗಾರ್, ನಿಟ್ಟೆ ಕಾರ್ಕಳ ನಿವಾಸಿ ಎಂದು ಹೇಳಿಕೊಂಡಿದ್ದು ಸಂಬಂಧಿಸಿದವರು ಇದ್ದಲ್ಲಿ ಮೂಲ್ಕಿ ಪೊಲೀಸರನ್ನು ಸಂಪರ್ಕಿಸಬಹುದು.