ಮೂಲ್ಕಿ: ತೀವ್ರ ಕುತೂಹಲ ಕೆರಳಿಸಿದ್ದ ಮೂಲ್ಕಿ ಪಟ್ಟಣ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ಶುಕ್ರವಾರ ಪಟ್ಟಣ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸತೀಶ್ ಅಂಚನ್ ಹಾಗೂ ಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಲಕ್ಷ್ಮೀ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಾಲಚಂದ್ರ ಕಾಮತ್ ವಿರುದ್ಧ ಸತೀಶ್ ಅಂಚನ್ ಜಯಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜೆಡಿಎಸ್‌ನ ಲಕ್ಷ್ಮೀ ಕಾಂಗ್ರೆಸ್ ವಿಮಲಾ ಪೂಜಾರಿ ಅವರನ್ನು ಸೋಲಿಸಿ ಆಯ್ಕೆಯಾಗಿದ್ದಾರೆ.ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್ ಮತದಾನದಲ್ಲಿ ಭಾಗವಹಿಸಿದ್ದರು. ಪಟ್ಟಣ ಪಂಚಾಯಿತಿ ಆಡಳಿತ ಅಧಿಕಾರಿ ಪ್ರದೀಪ್ ಕುರ್ಡೇಕರ್, ಉಪತಹಸೀಲ್ದಾರ್ ದಿಲೀಪ್ ರೋಡ್ಕರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಧುಕರ್ ಮತ್ತಿತರರು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷ ಸತೀಶ್ ಅಂಚನ್ ಮಾತನಾಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವುದು ಮೊದಲ ಆದ್ಯತೆಯಾಗಿದೆ ಎಂದರು. ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿ ಮೆರವಣಿಗೆ ಮೂಲಕ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿ ಪೂಜೆ ಸಲ್ಲಿಸಿದರು.ಮೂಲ್ಕಿ ಪೊಲೀಸ್ ಇನ್ಸ್‌ಪೆಕ್ಟರ್ ವಿದ್ಯಾಧರ್ ಹಾಗೂ ಎಸ್‌ಐ ಅನಿತಾ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ನ್ಯಾಯಾಲಯದ ಆದೇಶದಂತೆ ನಗರ ಸಶಸ್ತ್ರ ಮೀಸಲು ಪಡೆಯ ಬಂದೋಬಸ್ತ್‌ನಲ್ಲಿ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಹಕೀಂ ಅವರನ್ನು ಜಿಲ್ಲಾ ಕಾರಾಗೃಹದಿಂದ ಮತದಾನಕ್ಕೆ ಕರೆತರಲಾಯಿತು.ಸರ್ಕಾರದ ನಿಯಮಾವಳಿಯಂತೆ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಒಟ್ಟು 18 ಸದಸ್ಯ ಬಲದ ಪಂಪನಲ್ಲಿ ಕಾಂಗ್ರೆಸ್ 9, ಬಿಜೆಪಿ 8 ಮತ್ತು ಜೆಡಿಎಸ್1 ಸ್ಥಾನ ಹೊಂದಿದೆ.
ಈ ಬಾರಿ ಬಿಜೆಪಿ- ಜೆಡಿಎಸ್ ರಾಜ್ಯ ಮಟ್ಟದ ಹೊಂದಾಣಿಕೆಯಿಂದ ಬಿಜೆಪಿ -ಕಾಂಗ್ರೆಸ್ ಬಲಾಬಲ 9- 9 ಆಗಿತ್ತು. ಸಂಸದರು ಮತ್ತು ಶಾಸಕರ ಮತದ ಬಲದಿಂದ ಬಿಜೆಪಿ ಮರಳಿ ಅಧಿಕಾರ ಪಡೆದಿದೆ.