ಬಳ್ಳಾರಿ: ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ 18ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಮುಲ್ಲಂಗಿ ನಂದೀಶ್ ಹಾಗೂ ಉಪ ಮೇಯರ್ ಆಗಿ 26ನೇ ವಾರ್ಡ್‌ನ ಡಿ.ಸುಕುಂ ಆಯ್ಕೆಗೊಂಡಿದ್ದಾರೆ.
ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿದ ಚುನಾವಣೆಯಲ್ಲಿ ಮೇಯರ್ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಮುಲ್ಲಂಗಿ ನಂದೀಶ್ ಹಾಗೂ ಬಿಜೆಪಿಯ ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್ ನಾಮಪತ್ರ ಸಲ್ಲಿಸಿದ್ದರು.ಮುಲ್ಲಂಗಿ ನಂದೀಶ್ ಪರ 30 ಮತಗಳು, ಬಿಜೆಪಿಯ ಶ್ರೀನಿವಾಸ ಮೋತ್ಕರ್ ಪರ 14 ಮತಗಳು ಹಾಗೂ ಉಪ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಸುಕುಂ ಪರ 30 ಹಾಗೂ ಬಿಜೆಪಿಯ ಚೇತನಾ ಪರ 14 ಮತಗಳು ಬಂದವು.ಚುನಾವಣೆಯಲ್ಲಿ ಬಹುಮತ ಪಡೆದ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯನ್ನು ಕಲಬುರಗಿಯ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಘೋಷಿಸಿದರು.
ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಸಂಸದ ಈ.ತುಕಾರಾಂ, ಶಾಸಕರಾದ ಬಿ.ನಾಗೇಂದ್ರ, ನಾರಾ ಭರತ್ ರೆಡ್ಡಿ, ಬಿಜೆಪಿಯ ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಗಿ ನಾಗರಾಜ್ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ಮುಖಂಡರು ಹಾಗೂ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ನಾಲ್ವರು ಮೇಯರ್ ಆಕಾಂಕ್ಷಿಗಳ ನಾಮಪತ್ರ ಸಲ್ಲಿಕೆ:ಜಿಲ್ಲಾ ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿಲ್ಲ ಎಂಬುದು ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಮೇಯರ್ ಚುನಾವಣೆಯಲ್ಲಿ ಸಾಬೀತಾಯಿತು. ಮೇಯರ್ ಪ್ರಬಲ ಆಕಾಂಕ್ಷಿಗಳಾಗಿದ್ದ ಮುಲ್ಲಂಗಿ ನಂದೀಶ್ ಸೇರಿದಂತೆ ಪ್ರಭಂಜನಕುಮಾರ್, ಪೇರಲ ವಿವೇಕ್, ಪಿ.ಗಾದೆಪ್ಪ ನಾಮಪತ್ರ ಸಲ್ಲಿಸಿದ್ದರು. ಉಪ ಮೇಯರ್ ಗೆ ಕಾಂಗ್ರೆಸ್‌ನ ಡಿ.ಸುಕುಂ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು. ಬಳಿಕ ಖಾಸಗಿ ಹೋಟೆಲ್‌ವೊಂದರಲ್ಲಿ ಜರುಗಿದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮುಲ್ಲಂಗಿ ನಂದೀಶ್ ಹೊರತುಪಡಿಸಿ ಉಳಿದ ಮೂವರು ಆಕಾಂಕ್ಷಿಗಳನ್ನು ಮನವೊಲಿಸಲಾಯಿತು. ಅಲ್ಲದೆ, ಸ್ಥಳದಲ್ಲಿಯೇ ವಿಪ್ ಜಾರಿಗೊಳಿಸಲಾಯಿತು. ಅಂತಿಮವಾಗಿ ಪಕ್ಷದ ವರಿಷ್ಠರ ಸೂಚನೆಯಂತೆ ಮುಲ್ಲಂಗಿ ನಂದೀಶ್ ಅವರನ್ನು ಮೇಯರ್ ಆಗಿ ನೇಮಕ ಮಾಡಲು ಪಕ್ಷದ ಮುಖಂಡರು ನಿರ್ಧರಿಸಿದರು.
ಮುಲ್ಲಂಗಿ ನಂದೀಶ್ ಅವರನ್ನು ಮೇಯರ್ ಮಾಡಲು ಶಾಸಕ ಬಿ.ನಾಗೇಂದ್ರ ಹಾಗೂ ಪ್ರಭಂಜನಕುಮಾರ್ ಅವರನ್ನು ಮೇಯರ್ ಮಾಡಲು ಶಾಸಕ ನಾರಾ ಭರತ್ ರೆಡ್ಡಿ ಪ್ರಯತ್ನಿಸಿದರು. ಕೊನೆ ಹಂತದಲ್ಲಿ ನಂದೀಶ್ ಅವರನ್ನು ಮೇಯರ್ ಆಗಿಸಲು ನಿರ್ಧರಿಸಲಾಯಿತು.ನಮ್ಮಲ್ಲಿ ಯಾವುದೇ ಒಡಕಿಲ್ಲ ಎಂದ ನಾಗೇಂದ್ರ:
ನನ್ನ ಹಾಗೂ ಶಾಸಕ ಭರತ್ ರೆಡ್ಡಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಶಾಸಕ ನಾಗೇಂದ್ರ ತಿಳಿಸಿದರು.ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಕ್ಷದ ವರಿಷ್ಠರ ಸೂಚನೆಯಂತೆ ಆಯ್ಕೆ ಪ್ರಕ್ರಿಯೆ ನಡೆದಿದೆ. ಸಹೋದರ ಭರತ್ ರೆಡ್ಡಿ ಸೇರಿದಂತೆ ಪಕ್ಷದ ಮುಖಂಡರೆಲ್ಲ ಹೈಕಮಾಂಡ್ ಆದೇಶ ಪಾಲಿಸಿದ್ದೇವೆ. ಕಾಂಗ್ರೆಸ್‌ನಲ್ಲಿ ಮೇಯರ್ ಸ್ಥಾನಕ್ಕೆ ಹೆಚ್ಚಿನ ಆಕಾಂಕ್ಷಿಗಳಿದ್ದರು. ಹೀಗಾಗಿ ನಾಲ್ವರು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಪಕ್ಷದ ಹೈಕಮಾಂಡ್ ತೀರ್ಮಾನದಂತೆ ಮೇಯರ್ ಆಯ್ಕೆ ಮಾಡಲಾಯಿತು ಎಂದು ಶಾಸಕ ನಾಗೇಂದ್ರ ತಿಳಿಸಿದರು.
ಬಳ್ಳಾರಿ ಅಭಿವೃದ್ಧಿ ಕಡೆ ಗಮನ:ನೂತನ ಮೇಯರ್ ಆಗಿ ಆಯ್ಕೆಗೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮುಲ್ಲಂಗಿ ನಂದೀಶ್, ಬಳ್ಳಾರಿಯ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ. ಈವರೆಗೆ ಆಗಿರುವುದು ಬೇರೆ, ಇನ್ನು ಮುಂದಾಗುವ ಅಭಿವೃದ್ಧಿಯೇ ಬೇರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ನಗರದ ಪ್ರಗತಿಗೆ ಪೂರಕವಾಗಲಿದೆ. ಜನರ ಆಶಯದಂತೆ ಪಕ್ಷದ ಎಲ್ಲ ಮುಖಂಡರ ಮಾರ್ಗದರ್ಶನ ಪಡೆದು ಬಳ್ಳಾರಿಯನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವೆ ಎಂದು ತಿಳಿಸಿದರು.
ಕುತೂಹಲ ಮೂಡಿಸಿದ್ದ ಚುನಾವಣೆ:ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ಕಂಡು ಬಂದ ಹಿನ್ನೆಲೆಯಲ್ಲಿ ಮೇಯರ್ ಚುನಾವಣೆ ತೀವ್ರ ಕುತೂಹಲ ಮೂಡಿಸಿತ್ತು. ಮುಲ್ಲಂಗಿ ನಂದೀಶ್ ಹಾಗೂ ಪ್ರಭಂಜನಕುಮಾರ್ ನಡುವಿನ ಮೇಯರ್ ಹುದ್ದೆಯ ಪೈಪೋಟಿಯಿಂದಾಗಿ ಕೊನೆಯವರೆಗೆ ಯಾರು ಮೇಯರ್ ಆಗಲಿದ್ದಾರೆ ಎಂಬ ಕುತೂಹಲ ಮುಂದುವರಿದಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಇತ್ತು.