ಗುತ್ತಿಗೆದಾರರು ಮತ್ತು ಅಧಿಕಾರಿಗಳೊಂದಿಗೆ ನರಗುಂದ ತಾಲೂಕಿಗೆ ಭೇಟಿ, ಮಾಹಿತಿ ಸಂಗ್ರಹ
ತಾಲೂಕಿಗೆ ಮಂಜೂರಾಗಿರುವ 344 ಕೋಟಿ ರು. ಅನುದಾನದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಸ್ಥಳೀಯವಾಗಿ ಎದುರಾಗಿರುವ ನೀರಿನ ಅಡಚಣೆಗೆ ಪರಿಹಾರವನ್ನು ಕಂಡುಕೊಳ್ಳಲು ಸಹಕಾರಿಯಾಗಿದೆ. ನರಗುಂದ ತಾಲೂಕಿನಲ್ಲಿ ಕಳೆದ ಐದು ವರ್ಷದಿಂದ 3 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾದರಿಯಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಬೆಳಗಾವಿ ಅಧಿವೇಶನಕ್ಕೆ ಹೋಗುವ ಮಾರ್ಗದಲ್ಲಿ ತಾಲೂಕಿಗೆ ಮಂಜೂರಾಗಿರುವ 344 ಕೋಟಿ ರು. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಹಿಡಿದಿರುವ ಗುತ್ತಿಗೆದಾರರು ಮತ್ತು ಅಧಿಕಾರಿಗಳೊಂದಿಗೆ ನರಗುಂದ, ರೋಣ ಮತ್ತು ಗಜೇಂದ್ರಗಡ ತಾಲೂಕುಗಳಿಗೆ ಶುದ್ಧೀಕೃತ ಕುಡಿಯುವ ನೀರನ್ನು ಒದಗಿಸುವ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳೊಂದಿಗೆ ಮಾಹಿತಿಯನ್ನು ಪಡೆದರು.ನರಗುಂದಕ್ಕೆ ಸುಮಾರು 30 ಕಿ.ಮೀ. ದೂರದ ಮಲಪ್ರಭಾ ನದಿಯಿಂದ ಶುದ್ಧೀಕರಣ ಘಟಕಕ್ಕೆ ನೀರನ್ನು ತಂದು ಪ್ರತಿದಿನ ₹3.60 ಲಕ್ಷ ಜನರಿಗೆ ತಲಾ 75 ಲೀಟರ್ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ತಾಲೂಕಿಗೆ ಮಂಜೂರಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸ್ಥಳೀಯವಾಗಿ ಎದುರಾಗಿರುವ ಅಡಚಣೆಗೆ ನರಗುಂದದ ಈ ಯೋಜನೆಯಿಂದ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಮಾದರಿಯಾಗಿದೆ.
ಶುದ್ಧ ಕುಡಿಯುವ ನೀರಿನಿಂದ ಜನರ ಆರೋಗ್ಯ ಮಾತ್ರವಲ್ಲದೇ ಆಯಸ್ಸು ಕೂಡಾ ವೃದ್ಧಿಯಾಗುತ್ತದೆ ಎಂದರು. ಶಾಸಕರೊಂದಿಗೆ ತಾಲೂಕಿನ ಯೋಜನೆಯ ಗುತ್ತಿಗೆದಾರರಾಗಿರುವ ಇಬ್ರಾಹಿಂ ಷರೀಫ್ ಹಾಗೂ ಡಿ.ಎಸ್. ಅಬ್ದುಲ್ ರಹಮಾನ್ ಇತರರು ಇದ್ದರು.
08 ಟಿಟಿಎಚ್ 02: ನರಗುಂದ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಘಟಕದಲ್ಲಿ ಅಧಿಕಾರಿಗಳೊಂದಿಗೆ ಶಾಸಕ ಆರಗ ಜ್ಞಾನೇಂದ್ರ.