ಮುಂದಾಗಿದ್ದಾಗ ಅಂಬೇಡ್ಕರ್ ಅವರ ಸಮಾಜವಾದಿ ಭಾವನೆಗೆ ಕಾಂಗ್ರೆಸ್ ನ ಪ್ರಧಾನಿ ನೆಹರು ತೀವ್ರ ವಿರೋಧ ಮಾಡಿದ್ದರು. ಸಮಾಜವಾದಿ ಮೂಲಕ ಸಮಾಜ ನಿಯಂತ್ರಣ ಮಾಡುವುದೇ ಇವರ ಉದ್ದೇಶವಿತ್ತು. ಪ್ರಸ್ತುತ ಇಂಥ ಸತ್ಯ ಸಂಗತಿ ತಿಳಿಸುವುದು ಅನಿವಾರ್ಯ, ಕರ್ತವ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಣಕಾಸು ಮಂತ್ರಿಯಾಗಿ ಆರ್ಥಿಕ ಸಮಾನತೆ ತರಲು ಮುಂದಾದಾಗ ಅಂದಿನ ಪ್ರಧಾನಿ ಜವಾಹರ್‌ ಲಾಲ್ ನೆಹರು ತೀವ್ರ ವಿರೋಧ ಮಾಡಿದರು. ನೆಹರು ಅವರ ದೃಷ್ಟಿಕೋನ ಆರ್ಥಿಕ ಸಮಾನತೆ ಮಾಡುವ ಉದ್ದೇಶವಿರಲಿಲ್ಲ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ನಾನೂ ಕಾಫಿರ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎರಡನೇ ವಿಶ್ವ ಯುದ್ಧ ನಂತರ ಜರ್ಮನಿ, ಜಪಾನ್, ಚೈನಾ ಸಂಪೂರ್ಣ ನಾಶವಾಗಿದ್ದರೂ ಆನಂತರ ಆರ್ಥಿಕವಾಗಿ ಬೆಳೆದರು. ಆದರೆ, ಅವರ ಜೊತೆಯೇ ನಾವು ಆರ್ಥಿಕವಾಗಿ ಬೆಳೆಯಬಹುದಾಗಿತ್ತು. ಅದು ಸಮಾಜವಾದಿ ಮೂಲಕವೇ ಹೋಗಬೇಕು ಎಂಬುದು ನೆಹರೂ ಅವರ ನಿಲುವಾಗಿದ್ದರಿಂದ ಬಹುಶಃ ನಮಗೆ ಹಿನ್ನಡೆಯಾಯಿತು ಎಂದರು.

ಅಂಬೇಡ್ಕರ್ ಅವರ ಇತಿಹಾಸ ಎಲ್ಲರಿಗೂ ಗೊತ್ತಿದೆ. ಅರ್ಥಶಾಸ್ತ್ರದಲ್ಲಿ ಪಿಎಚ್‌.ಡಿ ಮಾಡಿ ನಾಯಕರಾದರು. ಆರ್ಥಿಕ ಶಿಸ್ತು ಕಾಪಾಡಲು ಮುಂದಾಗಿದ್ದಾಗ ಅಂಬೇಡ್ಕರ್ ಅವರ ಸಮಾಜವಾದಿ ಭಾವನೆಗೆ ಕಾಂಗ್ರೆಸ್ ನ ಪ್ರಧಾನಿ ನೆಹರು ತೀವ್ರ ವಿರೋಧ ಮಾಡಿದ್ದರು. ಸಮಾಜವಾದಿ ಮೂಲಕ ಸಮಾಜ ನಿಯಂತ್ರಣ ಮಾಡುವುದೇ ಇವರ ಉದ್ದೇಶವಿತ್ತು. ಪ್ರಸ್ತುತ ಇಂಥ ಸತ್ಯ ಸಂಗತಿ ತಿಳಿಸುವುದು ಅನಿವಾರ್ಯ, ಕರ್ತವ್ಯವಾಗಿದೆ ಎಂದರು.

ಯುಎಸ್‌ಎ ಎಡಪಂಥೀಯ ಇರುವ ವಿವಿಯಲ್ಲಿ ನಾನು ವ್ಯಾಸಂಗ ಮಾಡಿದ್ದೇನೆ. ಅಲ್ಲಿ ಬೇರೊಬ್ಬರನ್ನು ಅವಮಾನ ಮಾಡಿ ತಮಾಷೆ ಮಾಡುತ್ತಾರೆ. ಅವಮಾನ ಮಾಡಿದವರಿಗೆ ವೇದಿಕೆಯೇ ಸಿಗುತ್ತಿರಲಿಲ್ಲ. ನಾನು ಭಾರತಕ್ಕೆ ಬಂದಾಗ ಹೊಸ ಕ್ರಾಂತಿ ಮೂಡಿತ್ತು. ಬಲಪಂಥಿ, ಎಡಪಂಥಿ ನಡುವೆ ಮಧ್ಯೆಪಂಥಿಯಿಂದ ಸತ್ಯಾಂಶ ಹೊರಬರುತ್ತಿದೆ. ಇದಕ್ಕೆ ಪುಸ್ತಕ, ಪ್ರಕಾಶನಗಳು ಕಾರಣವಾಗಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ. ಮೀರಾ ಶಿವಲಿಂಗಯ್ಯ ಮಾತನಾಡಿ, ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಇಬ್ಬರೂ ಮಹಾನ್ ವ್ಯಕ್ತಿಗಳು. ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ನೈತಿಕ ನಾಯಕರಾಗಿದ್ದರೆ, ಅಂಬೇಡ್ಕರ್ ಸಂವಿಧಾನ ಶಿಲ್ಪಿಗಳಾಗಿದ್ದಾರೆ. ಅಂಬೇಡ್ಕರ್ ಅವರನ್ನು ಎಲ್ಲ ಸಮಸ್ಯೆಗಳಲ್ಲೂ ನೆನಪಿಸಿಕೊಳ್ಳುತ್ತೇವೆ. ದೇಶದ ಸಮಾನ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ಮಾನವತಾವಾದಿ ಎಂದು ಬಣ್ಣಿಸಿದರು.

ಇದೇ ವೇಳೆ ಪದ್ಮಶ್ರೀ ಪುರಸ್ಕೃ ಪುಸ್ತಕ ಪ್ರೇಮಿ ಅಂಕೇಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್‍ಯದರ್ಶಿ ಬಿ.ಎಲ್.ಸಂತೋಷ್, ಕೃತಿ ಕರ್ತೃ ಡಾ. ಸುಧಾಕರ್ ಹೊಸಹಳ್ಳಿ, ಅನುಪಮಾ ಇತರರು ಇದ್ದರು.