ದ್ವಿದಳ ಧಾನ್ಯ ಮಿಷನ್ ಅಡಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ₹191.67 ಕೋಟಿ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ದ್ವಿದಳ ಧಾನ್ಯ ಮಿಷನ್ ಅಡಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ₹191.67 ಕೋಟಿ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಅನುಮೋದನಾ ಪತ್ರ ಹಸ್ತಾಂತರಿಸಿ ಮಾತನಾಡಿ, ಕೇಂದ್ರ ಸರ್ಕಾರವು ಆತ್ಮನಿರ್ಭರ ಭಾರತ್ ಅಡಿ ದ್ವಿದಳ ಧಾನ್ಯ ಮಿಷನ್‌ನಿಂದ್ ರಾಜ್ಯಕ್ಕೆ ₹191.67 ಕೋಟಿ ಅನುದಾನ ನೀಡಿದ್ದು ಇದನ್ನು ದ್ವಿದಳ ಧಾನ್ಯಗಳ ಉತ್ಪಾದನೆ, ಮೌಲ್ಯವರ್ಧನೆ ಮತ್ತಿತರ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ರಾಷ್ಟ್ರೀಯ ಕೃಷಿ ಅಭಿವೃದ್ಧಿ ಯೋಜನೆಯಡಿ ಬಾಕಿ ಇರುವ ₹154 ಕೋಟಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ದೇಸಿ ಬೀಜ ಸಂರಕ್ಷಣೆ, ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ ಸೇರಿ ಕರ್ನಾಟಕದಲ್ಲಿ ಕೃಷಿ ಬಲಪಡಿಸಲು ಕೇಂದ್ರ ಸರ್ಕಾರ ಯಾವುದೇ ಭೇದ ಭಾವವಿಲ್ಲದೆ ರಾಜ್ಯ ಸರ್ಕಾರದೊಂದಿಗೆ ಹೆಗಲಿಗೆ ಹೆಗಲು ಸೇರಿಸಿ ಕೆಲಸ ಮಾಡಲಿದೆ. ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಬಿಜೆಪಿ ಅಥವಾ ಕಾಂಗ್ರೆಸ್ ಸರ್ಕಾರ ಎಂದು ತಾರತಮ್ಯ ಮಾಡುವುದಿಲ್ಲ. ಯಾವ ಪಕ್ಷ ಅಧಿಕಾರದಲ್ಲಿದ್ದರೂ, ರೈತರಿಗೆ ಸೇವೆ ಸಲ್ಲಿಸುವುದು ಕೇಂದ್ರ ಮತ್ತು ರಾಜ್ಯಗಳ ಜವಾಬ್ದಾರಿಯಾಗಿದೆ. ಕರ್ನಾಟಕಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.ಮಾವು, ಮೆಣಸಿನಕಾಯಿ ಮತ್ತು ತೊಗರಿ ಖರೀದಿ ಸೇರಿ ಕರ್ನಾಟಕ ಕೃಷಿ ಸಚಿವರು ಕಳುಹಿಸಿದ ಪ್ರಸ್ತಾಪಗಳಿಗೆ ಕೇಂದ್ರ ಯಾವತ್ತೂ ನಿರಾಕರಿಸಿಲ್ಲ. ರಾಜ್ಯದ ಕಾಫಿ ವಿಶ್ವಕ್ಕೆ ಶಕ್ತಿ ನೀಡುತ್ತದೆ, ಚಂದನ ತಾಜಾತನ ನೀಡುತ್ತದೆ, ರೇಷ್ಮೆ ಜಾಗತಿಕ ಮಾನ್ಯತೆ ತಂದುಕೊಡುತ್ತದೆ, ತೆಂಗು ಆರೋಗ್ಯ ಮತ್ತು ರುಚಿ ನೀಡುತ್ತದೆ. ಭತ್ತ, ಸಿರಿಧಾನ್ಯಗಳು ವಿಶ್ವ ಮಟ್ಟದಲ್ಲಿ ಪೌಷ್ಠಿಕತೆ ಮತ್ತು ಆರೋಗ್ಯಕ್ಕೆ ಸಹಕಾರಿ ಎಂದು ಬಣ್ಣಿಸಿದರು.
ತೊಗರಿ ಇಳುವರಿ ಹೆಚ್ಚಳ ಅಗತ್ಯ:ಬರೀ ಉತ್ಪಾದನೆ ಮಾಡಿದರಷ್ಟೇ ಸಾಕಾಗುವುದಿಲ್ಲ. ಮೌಲ್ಯವರ್ಧನೆ, ಸಂಸ್ಕರಣೆ ಮತ್ತು ಮಾರುಕಟ್ಟೆ ವಿಸ್ತರಣೆ ಅಗತ್ಯವಿದೆ. ಇದರಿಂದ ರೈತರಿಗೆ ಲಾಭದಾಯಕ ಬೆಲೆ ದೊರೆಯುತ್ತದೆ. ಈ ಕಾರ್ಯಗಳಲ್ಲಿ ಕೇಂದ್ರವು ಹಂತ ಹಂತವಾಗಿ ಕರ್ನಾಟಕದೊಂದಿಗೆ ಕೈಜೋಡಿಸಿ ಕೆಲಸ ಮಾಡಲಿದೆ. ತೊಗರಿ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ಪ್ರತಿ ಹೆಕ್ಟೇರ್ ಇಳುವರಿಯು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿದ್ದು, ಅದನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಕೃಷಿಯಲ್ಲಿ ಬೀಜಗಳ ಪಾತ್ರ ಮಹತ್ವದ್ದಾಗಿದ್ದು, 25 ಬೀಜ ಗ್ರಾಮ ಸ್ಥಾಪಿಸಲು ಕೇಂದ್ರ ಸಹಕಾರ ನೀಡಲಿದೆ. ರಾಜ್ಯದಲ್ಲಿ ತಲಾ ₹25 ಲಕ್ಷ ವೆಚ್ಚದಲ್ಲಿ 35 ಬೇಳೆ ಸಂಸ್ಕರಣಾ ಯಂತ್ರ ಸ್ಥಾಪನೆಗೆ ಅನುದಾನ ನೀಡಲಾಗುವುದು. ರಾಜ್ಯದಲ್ಲಿ ಹಳೆಯ ಮತ್ತು ರೋಗಬಾಧೆಗೆ ಒಳಗಾದ ತೆಂಗಿನ ಗಿಡಗಳಿಗೆ ತೆಂಗು ಅಭಿವೃದ್ಧಿ ಯೋಜನೆ ಮೂಲಕ ನೆರವು ನೀಡಲಾಗುವುದು. ಯೋಜನೆಯ ಪೂರ್ಣ ಪ್ರಯೋಜನ ಪಡೆಯಲು ರಾಜ್ಯವು ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದರು.ಸಿರಿಧಾನ್ಯಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ:
ಕೇಂದ್ರ ಸರ್ಕಾರವು ಗೋಡಂಬಿ, ಕಾಫಿ ಮತ್ತು ಕೋಕೋ ಬೆಳೆಗಳಿಗೆ ಉತ್ತೇಜನ ನೀಡಲು ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ಟೊಮೆಟೋ, ಮೆಣಸಿನಕಾಯಿ, ಮಾವು, ಡ್ರ್ಯಾಗನ್ ಫ್ರೂಟ್, ಬೆಣ್ಣೆಹಣ್ಣು ಸೇರಿ ತೋಟಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕ ಉತ್ತಮ ಪ್ರಗತಿ ಸಾಧಿಸಿದೆ. ರಾಜ್ಯದ ಸಿರಿಧಾನ್ಯ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸಲಾಗುವುದು. ರೈತಸಿರಿಯಡಿ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹10 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.ಕೃಷಿ ಸಚಿವ ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಂಸದ ಲೆಹರ್ ಸಿಂಗ್, ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಅಶೋಕ್ ದಳವಾಯಿ, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ನಿರ್ದೇಶಕ ಡಾ। ಜಿ.ಟಿ.ಪುತ್ರ, ಸೆಕೆಂಡರಿ ಅಗ್ರಿಕಲ್ಚರ್‌ನ ನಿರ್ದೇಶಕ ಡಾ। ವೆಂಕಟರಾಮಿರೆಡ್ಡಿ ಪಾಟೀಲ್ ಉಪಸ್ಥಿತರಿದ್ದರು.