ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಕೇವಲ ಏಳು ಹಾಸಿಗೆಗಳ ಇಬ್ಬರು ವೈದ್ಯರು ಹಾಗೂ ಇಬ್ಬರು ದಾದಿಯರಿಂದ ಎರಡು ದಶಕಗಳ ಹಿಂದೆ ಪ್ರಾರಂಭವಾದ ಬೆನಕ ಆಸ್ಪತ್ರೆ ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ತನ್ನ ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸುತ್ತಾ ಇದೀಗ 130 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆರೋಗ್ಯ ಸೇವೆಗಳನ್ನೊಳಗೊಂಡ ಆಸ್ಪತ್ರೆಯಾಗಿ ಬೆಳೆದು ನಿಂತಿದೆ ಎಂದು ಉಜಿರೆ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ಭಟ್ ಹೇಳಿದರು.
ರಜತ ಸಂಭ್ರಮ: ರಜತ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮದ ಜ.18ರಂದು ನಡೆಯಲಿದ್ದು ಕಾರ್ಯಕ್ರಮವನ್ನು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸುವರು. ವಿಸ್ತೃತ ಕಟ್ಟಡದ ಉದ್ಘಾಟನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ತುರ್ತು ಚಿಕಿತ್ಸಾ ವಿಭಾಗದ ಉದ್ಘಾಟನೆಯನ್ನು ಮಂಗಳೂರು ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ, ಡೇ-ಕೇರ್ ವಿಭಾಗದ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ , ಮಕ್ಕಳ ವಾರ್ಡ್ ಉದ್ಘಾಟನೆಯನ್ನು ಅರೆ ವೈದ್ಯಕೀಯ ಮಂಡಳಿ ಅಧ್ಯಕ್ಷ ಡಾ. ಯು.ಟಿ. ಇಫ್ತಿಕರ್ ಅಲಿ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಉಷಾಕಿರಣ್ ಕಾರಂತ, ಉಪಾಧ್ಯಕ್ಷ ರವಿಕುಮಾರ್ ಬರೆಮೇಲು ಭಾಗವಹಿಸಲಿದ್ದಾರೆ. ಸೀತಾರಾಮ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಸೇವೆಗಳು: ಬೆನಕ ಹೆಲ್ತ್ ಕೇರ್ ಸೇವೆ, ಬೆನಕ ಸಭಾಭವನ, ಅತ್ಯಾಧುನಿಕ ಗ್ಯಾಸ್ಟ್ರೋಎಂಡೋಸ್ಕೋಪಿಕ್ ಉಪಕರಣ, ಆಧುನಿಕ ಅಲ್ಟ್ರಾಸೌಂಡ್ ಮತ್ತು ಡಿಜಿಟಲ್ ಎಕ್ಸ್‌ರೇ, ಸಿ.ಟಿ ಸ್ಕ್ಯಾನ್, ತುರ್ತು ಚಿಕಿತ್ಸಾ ವಿಭಾಗ, ಅತ್ಯಾಧುನಿಕ ಆಪರೇಷನ್ ಥಿಯೇಟರ್, ತೀವ್ರ ನಿಗಾ ಘಟಕ, ಮೈಕ್ರೋ ಸರ್ಜರಿ ಸೇವೆ, ಕೀಹೋಲ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಸಮಕಾಲೀನ ಚಿಕಿತ್ಸೆಯ ಬದ್ಧತೆ, ಸ್ಪೆಷಾಲಿಟಿ ಸೇವೆಗಳು, ವಿಮಾ ಸೌಲಭ್ಯ, ಆರೋಗ್ಯ ಶಿಬಿರಗಳು, ಸುಸಜ್ಜಿತ ತುರ್ತು ಚಿಕಿತ್ಸಾ ಘಟಕ, ಮಕ್ಕಳ ಸ್ನೇಹಿ ವಾರ್ಡ್, ವಿಶಾಲವಾದ ಕ್ಯಾಂಟೀನ್, ಮನೋಲ್ಲಾಸ ನೀಡುವ ವಿನ್ಯಾಸವನ್ನು ಆಸ್ಪತ್ರೆಗೆ ಹೊಂದಿದೆ ಎಂದು ಡಾ. ಗೋಪಾಲಕೃಷ್ಣ ತಿಳಿಸಿದರು.
- ಡಾ. ಗೋಪಾಲಕೃಷ್ಣ ಭಟ್