ಕುಮಟಾ: ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಮಂಜೂರಿ ಪಡೆದಿದ್ದ ಒಂದು ಕೋಟಿ ವೆಚ್ಚದ ಮೂರೂರು ರಸ್ತೆಯ ಪ್ರಮುಖ ಭಾಗದ ವಿಸ್ತರಣಾ ಕಾಮಗಾರಿ ಆರಂಭಿಸುತ್ತಿದ್ದೇವೆ. ಅತ್ಯಂತ ಅವಶ್ಯಕವಾಗಿರುವ ಈ ಕಾಮಗಾರಿಯನ್ನು ಸಾರ್ವಜನಿಕರು ಉತ್ತಮ ಗುಣಮಟ್ಟದಲ್ಲಿ ನಡೆಯುವಂತೆ ಸದಾ ಜಾಗೃತರಾಗಿದ್ದು ನಿಗಾವಹಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಶಾಸಕನಾಗಿ ಪಟ್ಟಣದ ಮೂರೂರು ರಸ್ತೆಯ ಅಗಲೀಕರಣದ ಮಹತ್ವ ಅರಿತು ಸರ್ಕಾರಕ್ಕೆ ಮನವಿ ಮಾಡಿದ್ದೆ. ಅಂದು ಸರ್ಕಾರ ತಕ್ಷಣ ಸ್ಪಂದಿಸಿ ಅಗತ್ಯವಿರುವ ಮಂಜೂರಿ ನೀಡಿತ್ತು. ಆದ್ದರಿಂದ ೨೦೨೨-೨೩ನೇ ಸಾಲಿನ ಜಿಲ್ಲಾಮುಖ್ಯ ರಸ್ತೆ ಅಭಿವೃದ್ಧಿ ಯೋಜನೆಯ ಲೆಕ್ಕ ಶೀರ್ಷಿಕೆ ೫೦೫೪ರ ಅಡಿಯಲ್ಲಿ ₹೧ ಕೋಟಿ ವೆಚ್ಚದ ಕಾಮಗಾರಿಯ ಮೂಲಕ ರಸ್ತೆಯ ಇಕ್ಕೆಲಗಳನ್ನು ಸಮತಟ್ಟು ಹಾಗೂ ಅಗಲಗೊಳಿಸಿ, ಗಟಾರ ಸಹಿತ ಅಭಿವೃದ್ಧಿ ಪಡಿಸಲಾಗುವುದು. ಕಾಮಗಾರಿ ಉತ್ತಮವಾಗಿರುವಂತೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ನೋಡಿಕೊಳ್ಳಬೇಕು. ಕಾಮಗಾರಿಗೆ ಪೂರಕವಾಗಿ ಸಹಕಾರವನ್ನೂ ನೀಡಬೇಕಾಗುತ್ತದೆ ಎಂದರು.
ಕಾಮಗಾರಿಯ ಗುತ್ತಿಗೆದಾರ ರಾಮನಾಥ ಶಾನಭಾಗ, ಪಿಡಬ್ಲ್ಯುಡಿ ಎಇಇ ಎಂಪಿ. ನಾಯ್ಕ, ಎಇಇ ಸೋಮನಾಥ ಭಂಡಾರಿ, ಜಿ.ಎಸ್. ಗುನಗಾ, ಎಸ್.ವಿ. ಹೆಗಡೆ ಭದ್ರನ್, ಜಿ.ಐ. ಹೆಗಡೆ, ಪುರಸಭೆ ಸದಸ್ಯರಾದ ಸಂತೋಷ ನಾಯ್ಕ, ಮಹೇಶ ನಾಯ್ಕ, ವಿನಯಾ ಜಾರ್ಜ್, ಸೂರ್ಯಕಾಂತ ಗೌಡ, ಅನಿಲ ಹರ್ಮಲಕರ, ಮೋಹಿನಿ ಗೌಡ, ತುಳಸು ಗೌಡ ಇನ್ನಿತರರು ಇದ್ದರು.