ಅವ್ಯವಸ್ಥೆ ಆಗರವಾದ ಮುಂಡಗೋಡ ಬಸ್ ನಿಲ್ದಾಣ

KannadaprabhaNewsNetwork | Published : Mar 24, 2025 12:32 AM

ಸಾರಾಂಶ

ಸ್ವಚ್ಛತೆ, ಮೂಲಭೂತ ಸೌಲಭ್ಯದ ಕೊರತೆಯಿಂದ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ.

ಮುಂಡಗೋಡ: ಸಾರಿಗೆ ಸಂಸ್ಥೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.ಮುಂಡಗೋಡ ಬಸ್ ನಿಲ್ದಾಣದಿಂದ ಹುಬ್ಬಳ್ಳಿ-ಶಿರಸಿ, ಮಂಗಳೂರ, ಧರ್ಮಸ್ಥಳ, ಮುಂಬೈ, ಕೊಲ್ಲಾಪುರ, ಬೆಂಗಳೂರ ಸೇರಿದಂತೆ ಸುತ್ತಮುತ್ತ ಸುತ್ತಮುತ್ತ ತಾಲೂಕುಗಳಾದ ಯಲ್ಲಾಪುರ, ಕಲಘಟಗಿ, ಬಂಕಾಪುರ, ಶಿಗ್ಗಾಂವ್, ಹಾನಗಲ್ ಮುಂತಾದ ತಾಲೂಕುಗಳಿಗೆ ನಿತ್ಯ ನೂರಾರು ಬಸ್‌ಗಳು ಬಿಡುವಿಲ್ಲದೇ ಸಂಚರಿಸುತ್ತವೆ. ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾತ್ರ ಇಲ್ಲ. ಸ್ವಚ್ಛತೆ, ಮೂಲಭೂತ ಸೌಲಭ್ಯದ ಕೊರತೆಯಿಂದ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ.

ಕಳೆದ ೫-೬ ದಿನಗಳಿಂದ ಬಸ್ ನಿಲ್ದಾಣದ ಬೋರ್‌ವೆಲ್ ಹಾಳಾಗಿದ್ದು, ನೀರಿನ ಸಮಸ್ಯೆಯಿಂದಾಗಿ ಬಸ್ ನಿಲ್ದಾಣದ ಕ್ಯಾಂಟೀನ್ ಬಂದ್ ಮಾಡಲಾಗಿದೆ. ಶೌಚಾಲಯಗಳು ಗಬ್ಬೆದ್ದು ನಾರುತ್ತಿರುವುದರಿಂದ ಸಾರ್ವಜನಿಕರು ಮೂತ್ರ ವಿಸರ್ಜನೆಗೆ ಹೋಗಲು ಹಿಂದೇಟು ಹಾಕುವಂತಾಗಿದೆ. ಬಸ್ ನಿಲ್ದಾಣದ ಅಕ್ಕ ಪಕ್ಕ ಬಯಲು ಮೂತ್ರ ವಿಸರ್ಜನೆಗೆ ತೆರಳುವ ದುಃಸ್ಥಿತಿ ನಿರ್ಮಾಣವಾಗಿದೆ.

ಹಾಳಾದ ಬಸ್ ನಿಲ್ದಾಣದ ಬೋರ್‌ವೆಲ್ ತಕ್ಷಣ ರಿಪೇರಿ ಮಾಡಿಸದ ಕಾರಣ ಬಸ್ ನಿಲ್ದಾಣಕ್ಕೆ ಜಲಮೂಲವೇ ಇಲ್ಲದಂತಾಗಿದೆ. ಲಕ್ಷಾಂತರ ರುಪಾಯಿ ಬಾಡಿಗೆ ನೀಡಿ ಹೋಟೆಲ್ ನಡೆಸುತ್ತಿರುವವರು ನೀರಿಲ್ಲದ ಕಾರಣ ೫-೬ ದಿನಗಳಿಂದ ಹೋಟೆಲ್ ಬಂದ್ ಮಾಡಬೇಕಾಯಿತು. ಹೋಟೆಲ್ ಮತ್ತು ಶೌಚಾಲಯಕ್ಕೆ ನೀರಿಲ್ಲದಂತಾಗುವಷ್ಟರ ಮಟ್ಟಿಗೆ ನಿರ್ಲಕ್ಷ್ಯತನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿ ಹಗಲು ಮತ್ತು ರಾತ್ರಿ ಪಾಳೆಯದಂತೆ ಇಬ್ಬರು ಕಂಟ್ರೋಲರ್ ಮಾತ್ರ ಕಾರ್ಯ ನಿರ್ವಹಿಸುತ್ತಾರೆ. ರಾತ್ರಿ ೧೦ ಗಂಟೆಯಾಗುತ್ತಲೇ ನಿಲ್ದಾಣದ ಲೈಟ್ ಬಂದ್ ಮಾಡಲಾಗುತ್ತದೆ. ಇದರಿಂದ ಕತ್ತಲು ಆವರಿಸುವುದರಿಂದ ರಾತ್ರಿ ವೇಳೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಪ್ರಯಾಣಿಕರು ದೂರುತ್ತಾರೆ.

ಒಟ್ಟಾರೆಯಾಗಿ ಹೇಳಬೇಕಾದರೆ ಮುಂಡಗೋಡ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದ್ದು, ತಕ್ಷಣ ಸಂಬಂಧಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುವುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

ನಿರ್ವಹಣೆ ಇಲ್ಲದ ಕಾರಣ ಬಸ್ ನಿಲ್ದಾಣದ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಅಸ್ವಚ್ಛತೆಯಿಂದ ಕೂಡಿದೆ. ಎಲ್ಲೆಂದರಲ್ಲಿ ಕಸ ಕಡ್ಡಿ ಬಿದ್ದಿರುತ್ತದೆ. ಶೌಚಾಲಯಗಳು ಗಬ್ಬೆದ್ದು ನಾರುತ್ತವೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ರಾತ್ರಿ ೧೦ ಘಟೆಗೆ ವಿದ್ಯುತ್ ದೀಪ ಆರಿಸಲಾಗುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎನ್ನುತ್ತಾರೆ ಮಾಜಿ ಪಪಂ ಸದಸ್ಯ ರಾಬರ್ಟ್‌ ಲೋಬೋ.

ಆಗಾಗ ಬೋರ್‌ವೆಲ್ ಹಾಳಾಗುತ್ತಿರುವುದರಿಂದ ಸಮಸ್ಯೆಯಾಗಿದೆ. ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಶೀಘ್ರದಲ್ಲಿ ಸಾರಿಗೆ ಇಲಾಖೆಯ ಎಂಜಿನಿಯರ್‌ನ್ನು ಕಳುಹಿಸಿ ಮುಂಡಗೋಡ ಬಸ್ ನಿಲ್ದಾಣದ ಸಮಸ್ಯೆಗಳನ್ನು ಪರಿಹರಿಸುವ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಬಸವರಾಜ ಅಮ್ಮನವರ, ಸಾರಿಗೆ ನಿಯಂತ್ರಾಣಾಧಿಕಾರಿ, ಶಿರಸಿ ವಿಭಾಗ.

Share this article