ಮುಂಡಗೋಡ:
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಕರ್ನಾಟಕ ಅನ್ನದಾತ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ ಅವರಿಂದ ಸೋಮವಾರ ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ಪೌರ ಕಾರ್ಮಿಕರಿಗೆ ಪಾದ ಪೂಜೆ ಮಾಡುವ ಮೂಲಕ ವಿಶಿಷ್ಠ ರೀತಿಯಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಲಾಯಿತು.೫೦೦ ವರ್ಷಗಳ ಇತಿಹಾಸ ಹೊಂದಿರುವ ರಾಮಮಂದಿರ ನಿರ್ಮಾಣ ಕಾರ್ಯ ಕನಸು ಪ್ರಧಾನಿ ನರೇಂದ್ರ ಮೋದಿ ನನಸಾಗಿದ್ದು, ಅದರೊಂದಿಗೆ ಅವರ ಮಹತ್ತರವಾದ ಸ್ವಚ್ಛ ಭಾರತ ಯೋಜನೆ ಸಾಕಾರಗೊಳ್ಳಬೇಕಾದರೆ ಪೌರ ಕಾರ್ಮಿಕರನ್ನು ಗೌರವಿಸುವುದು ಅತ್ಯವಶ್ಯವಾಗಿದೆ ಎಂದು ಚಿದಾನಂದ ಹರಿಜನ ಹೇಳಿದರು.ಶ್ರೀರಾಮನ ಭಾವಚಿತ್ರಕ್ಕೆ ಪೂಜೆ, ಜಪ-ತಪ:ಪಟ್ಟಣದ ಶ್ರೀರಾಮ, ಆಂಜನೇಯ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ-ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಜರುಗಿತು.ಇಲ್ಲಿಯ ಶ್ರೀರಾಮನ ದೇವಾಲಯದಲ್ಲಿ ಶ್ರೀ ರಾಮ ಜಪ ಹಾಗೂ ಹೋಮ ಹವನ ಸೇರಿದಂತೆ ವಿಶೇಷ ಪೂಜೆ ಜರುಗಿತು. ಅಲ್ಲದೇ ದೇವಾಲಯದ ಆವರಣದಲ್ಲಿ ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಉದ್ಘಾಟನೆಯ ನೇರ ಪ್ರಸಾರ ವೀಕ್ಷಿಸಲು ಟಿವಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿತ್ತು.ಪಟ್ಟಣದ ಹೊಸ ಓಣಿ ಬಡಾವಣೆಯ ಆದಿಶೇಷ ದೇವಾಲಯದಲ್ಲಿ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಲಘು ಉಪಾಹಾರ ವ್ಯವಸ್ಥೆ ಮಾಡಲಾಗಿತ್ತಲ್ಲದೇ ಮಕ್ಕಳಿಗಾಗಿ ರಾಮಾಯಣಕ್ಕೆ ಸಂಬಂಧಪಟ್ಟ ವೇಷಭೂಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಎಲ್ಲ ದೇವಾಲಯಗಳು ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ಪಟ್ಟಣದ ಪ್ರತಿಯೊಂದು ಬಡಾವಣೆಗಳಲ್ಲಿ ಕೇಸರಿ ಬಂಟಿಂಗ್ಸ್, ಬ್ಯಾನರ್ ಅಳವಡಿಸಲಾಗಿತ್ತು. ಪಟ್ಟಣ ಸಂಪೂರ್ಣ ಕೇಸರಿಮಯವಾಗಿತ್ತಲ್ಲದೇ ಜನಜಂಗುಳಿಯಿಂದ ಕೂಡಿತ್ತು. ಇದರಿಂದ ಜಾತ್ರೆಯ ವಾತಾವರಣ ಬಾಸವಾಗಿತ್ತು.ವಿವಿಧ ಹಿಂದೂ ಸಂಘಟನೆ ಹಾಗೂ ಸಾಮಾಜಿಕ ಕಾರ್ಯಕರ್ತರಿಂದ ಪಟ್ಟಣದ ಶಿವಾಜಿ ಸರ್ಕಲ್ ಸೇರಿದಂತೆ ಬಹುತೇಕ ಸ್ಥಳಗಳಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಾಮ ಜಪ ಮಾಡಲಾಯಿತು. ಬಳಿಕ ಭಕ್ತರಿಗೆ ಅಲ್ಪೋಹಾರ ವ್ಯವಸ್ಥೆ ಮಾಡಲಾಗಿತ್ತು.