ಮುಂಡರಗಿ ಅಂಬೇಡ್ಕರ್ ವಸತಿ ಶಾಲೆ ಕಾಯಂ ಲಕ್ಷ್ಮೇಶ್ವರಕ್ಕೆ ಸ್ಥಳಾಂತರವಿಲ್ಲ- ಡಾ. ಚಂದ್ರು ಲಮಾಣಿ

KannadaprabhaNewsNetwork |  
Published : Jul 06, 2025, 11:48 PM IST
6ಎಂಡಿಜಿ4.ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ. | Kannada Prabha

ಸಾರಾಂಶ

ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯನ್ನು ಲಕ್ಷ್ಮೇಶ್ವರ ಪಟ್ಟಣಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಜನರಲ್ಲಿ ತಪ್ಪು ತಿಳುವಳಿಕೆ ಮೂಡಿದ್ದು, ಈ ಶಾಲೆಯನ್ನು ಯಾವುದೇ ಕಾರಣಕ್ಕೂ ಕಾಯಂ ಸ್ಥಳಾಂತರ ಮಾಡುವುದಿಲ್ಲ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಸ್ಪಷ್ಟ ಪಡಿಸಿದ್ದಾರೆ.

ಮುಂಡರಗಿ: ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯನ್ನು ಲಕ್ಷ್ಮೇಶ್ವರ ಪಟ್ಟಣಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಜನರಲ್ಲಿ ತಪ್ಪು ತಿಳುವಳಿಕೆ ಮೂಡಿದ್ದು, ಈ ಶಾಲೆಯನ್ನು ಯಾವುದೇ ಕಾರಣಕ್ಕೂ ಕಾಯಂ ಸ್ಥಳಾಂತರ ಮಾಡುವುದಿಲ್ಲ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಸ್ಪಷ್ಟ ಪಡಿಸಿದ್ದಾರೆ. ಅವರು ಈ ಕುರಿತು ಶುಕ್ರವಾರ ಪ್ರಕಟಣೆ ನೀಡಿ, ಈ ಹಿಂದೆ ಈ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪಾಲಕರು ಕಟ್ಟಡದ ಅವ್ಯವಸ್ಥೆಯ ಕುರಿತು ತಮ್ಮ ಗಮನಕ್ಕೆ ತಂದಿದ್ದರು. ನಂತರದಲ್ಲಿ ತಾವು ಆ ಶಾಲೆಗೆ ಭೇಟಿ ನೀಡಿ ಅಲ್ಲಿನ ಕಟ್ಟಡ ವೀಕ್ಷಿಸಿದ್ದು, ಅಲ್ಲಿ ಕಳೆದ 250 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಅಲ್ಲದೇ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಎಲ್ಲರೂ ಒಂದೇ ಕಟ್ಟಡದಲ್ಲಿರುವುದಕ್ಕೂ ಸಹ ಪಾಲಕರು ತಮ್ಮ ಮುಂದೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಈಗಾಗಲೇ ಈ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಜಮೀನು ಖರೀದಿಯಾಗಿದ್ದು, ಕಟ್ಟಡ ನಿರ್ಮಾಣಕ್ಕೂ ಸಹ 24 ಕೋಟಿ ರು.ಗಳ ಅನುದಾನ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿಯುವವರೆಗೆ ಪಟ್ಟಣದಲ್ಲಿಯೇ ಬೇರೆಡೆ ಶಾಲೆ ನಡೆಸಲು ಸುಸಜ್ಜಿತ ಕಟ್ಟಡ ಇದ್ದರೆ ಪರಿಶೀಲಿಸಲು ಕೆಲವು ಹಿರಿಯರೊಂದಿಗೆ ಚರ್ಚಿಸಿದ್ದೆ. ಆದರೆ ಮುಂಡರಗಿಯಲ್ಲಿ ದೊರೆಯಲಿಲ್ಲ.

ಆದ್ದರಿಂದ ನೂತನ ಕಟ್ಟಡ ಕಾಮಗಾರಿ ಪ್ರಾರಂಭಗೊಂಡು ಮುಕ್ತಾಯವಾಗುವವರೆಗೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಇದುವರೆಗೂ ವಡವಿ ಹೊಸೂರಿನ ಮೊರಾರ್ಜಿ ಶಾಲೆ ನಡೆಯುತ್ತಿದ್ದ ಸುಸಜ್ಜಿತ ಕಟ್ಟಡ ಕಾಲಿ ಇದ್ದು ಆ ಕಟ್ಟಡಕ್ಕೆ ಈ ಶಾಲೆ ಸ್ಥಳಾಂತರಗೊಳಿಸಲು ಯೋಚಿಸಿದ್ದೆ. ಆದರೆ ಇಲ್ಲಿನ ಹೋರಾಟಗಾರರು ಹಾಗೂ ಸಾರ್ವಜನಿಕರು ಲಕ್ಷ್ಮೇಶ್ವರಕ್ಕೆ ಸ್ಥಳಾಂತರಿಸುವುದು ಬೇಡ ಎಂದಾದರೆ ಇಲ್ಲಿಯೇ ಸುಸಜ್ಜಿತ ಕಟ್ಟಡ ಹುಡುಕಿದರೆ ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದರು. ಈ ಕುರಿತು ಶಾಲೆಯಲ್ಲಿ ಪಾಲಕರ ಸಭೆ ನಡೆಸಿ ಅಲ್ಲಿನ ಸಭೆಯಲ್ಲಿ ಪಾಲಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವೂ ಕೂಡಾ ಬದ್ಧರಾಗಿರುವುದಾಗಿ ತಿಳಿಸಿದ ಶಾಸಕರು, ವಿನಾಕಾರಣ ಸಾರ್ವಜನಿಕರು ತಪ್ಪು ತಿಳಿದುಕೊಳ್ಳಬಾರದು ಎಂದು ಶಾಸಕ ಡಾ. ಚಂದ್ರು ಲಮಾಣಿ ನೀಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV