ಶರಣು ಸೊಲಗಿ
ಅನ್ನದಾನೀಶ್ವರ ಮಠದ ಏಳ್ಗೆಗಾಗಿ 1969ರ ಜ. 31ರಲ್ಲಿ ಇಂದಿನ ಡಾ. ಅನ್ನದಾನೀಶ್ವರ ಸ್ವಾಮಿಗಳು ಮಠದ 10ನೇ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡರು. ಶ್ರೀಮಠದ ಹಿಂದಿನ ಸಾಧನೆಗಳಿಗೆ ಜೀವಂತಿಕೆ ತುಂಬುವುದರ ಜತೆಗೆ ನಾಡಿನ ಸಾಮಾಜಿಕ ಮತ್ತು ಆರ್ಥಿಕ ಬದುಕನ್ನು ಸುಧಾರಿಸುವಲ್ಲಿ ಶ್ರೀಗಳ ಪಾತ್ರ ಪ್ರಮುಖವಾಗಿದೆ. ಎಲ್ಲ ವರ್ಗದ ಬಡವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಸಾದನಿಲಯವನ್ನು ಪ್ರಾರಂಭಿಸಿ ಅವರ ಬದುಕಿಗೆ ಆಶ್ರಯ ನೀಡುವುದರ ಜತೆಗೆ, ಶೈಕ್ಷಣಿಕ ಪ್ರಗತಿಗೆ ಕಾರಣರಾಗಿದ್ದಾರೆ. ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಮೂಲಕ ಪಟ್ಟಣ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಲ್‌ಕೆಜಿಯಿಂದ ಪಿಜಿ ಹಂತದವರೆಗೆ ಒಟ್ಟು 33 ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ, ಗ್ರಾಮೀಣ ಭಾಗದ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡಿದೆ. ಈ ಶಿಕ್ಷಣ ಸಂಸ್ಥೆಗಳಲ್ಲಿ 500ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನು ನೀಡುವ ಮೂಲಕ ಎಲ್ಲ ಕುಟುಂಬಗಳಿಗೆ ಶ್ರೀಮಠದಿಂದ ಆರ್ಥಿಕ ಭದ್ರತೆಯನ್ನು ಒದಗಿಸಿದೆ. ಇದೀಗ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದೆ.ಅನ್ನದಾನೀಶ್ವರ ಸ್ವಾಮೀಜಿಯವರು ನಿರಂತರ ಅಧ್ಯಯನ ನಡೆಸುವ ಮೂಲಕ 165ಕ್ಕೂ ಹೆಚ್ಚು ವಿವಿಧ ಪ್ರಕಾರದ ಸಾಹಿತ್ಯದ ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅನ್ನದಾನೀಶ್ವರ ಗ್ರಂಥಮಾಲೆಯನ್ನು ಪ್ರಾರಂಭಿಸಿ ಅದರಿಂದ 275ಕ್ಕೂ ಹೆಚ್ಚು ನಾಡಿನ ವಿವಿಧ ಸಾಹಿತಿಗಳ, ಸಾಹಿತ್ಯಾಸಕ್ತರ ಕೖತಿಗಳನ್ನು ಪ್ರಕಟಿಸಿದ್ದಾರೆ. ಶ್ರೀಗಳು ರಚಿಸಿದ ಸಾಹಿತ್ಯದ ಮೇಲೆ ಈಗಾಗಲೇ 6 ಜನ ಪಿಎಚ್‌ಡಿ, 3 ಜನ ಎಂಫಿಲ್ ಪದವಿಗಳನ್ನು ಪಡೆದಿರುವುದು ವಿಶೇಷ. ಚನ್ನಬಸವಣ್ಣ, ಅಲ್ಲಮಫ್ರಭು, ಅಕ್ಕಮಹಾದೇವಿ, ಸಿದ್ದರಾಮ, ಬಸವಣ್ಣ, ದ್ಯಾಂಪುರ ಚನ್ನಕವಿ ಮುಂತಾದ ಶರಣ 15ಕ್ಕೂ ಹೆಚ್ಚು ವಿಚಾರಸಂಕಿರಣಗಳನ್ನು ರಾಜ್ಯದ ವಿವಿಧೆಡೆ ನಡೆಸಿದ್ದಾರೆ.ಅನ್ನದಾನೀಶ್ವರ ಮಠದಿಂದ ನೂರಾರು ಎಕರೆ ಜಮೀನು ದಾನ ನೀಡಲಾಗಿದೆ. ಅಲ್ಲದೇ ರಾಜ್ಯದ 5 ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಾವಂತರಿಗೆ ಚಿನ್ನದ ಪದಕ ನೀಡಲು ಹಣವನ್ನು ಠೇವಣಿ ಇಡಲಾಗಿದೆ. ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅನ್ನದಾನೀಶ್ವರ ಶರಣ ಸಂಸ್ಕೖತಿ ಅಧ್ಯಯನ ಪೀಠ ಸ್ಥಾಪಿಸಲು ₹27 ಲಕ್ಷ ಠೇವಣಿ ಇಡಲಾಗಿದೆ. ತಾಲೂಕಿನ ಉತ್ತಮ ಪತ್ರಕರ್ತರಿಗೆ, ಉತ್ತಮ ಶಿಕ್ಷಕರಿಗೆ, ನಿವೃತ್ತ ಯೋಧರಿಗೆ ಪ್ರಶಸ್ತಿ ನೀಡುವುದಕ್ಕಾಗಿ ತಲಾ ಒಂದೊಂದು ಲಕ್ಷ ರು. ಠೇವಣಿ ಇಟ್ಟಿದ್ದಾರೆ.ಪ್ರತಿವರ್ವವೂ ಶ್ರೀಮಠದ ಯಾತ್ರಾ ಮಹೋತ್ಸವವು ಸಾಂಸ್ಕೖತಿಕ ಮಹೋತ್ಸವವನ್ನಾಗಿ ಮಾಡಿ, ಈ ಸಂದರ್ಭದಲ್ಲಿ ಬಡವರಿಗೆ ಹಾಗೂ ಹಿಂದುಳಿದವರಿಗೆ ಅನುಕೂಲ ಮಾಡುವ ಉದ್ದೇಶದಿಂದ ಉಚಿತ ಸಾಮೂಹಿಕ ವಿವಾಹ, ಆರೋಗ್ಯ ತಪಾಸಣಾ ಶಿಬಿರ, ಉಚಿತ ನೇತ್ರ ಚಿಕಿತ್ಸಾ ಶಿಬಿರ, ರೇಷ್ಮೆ- ಕೃಷಿ ಅಭಿವೃದ್ಧಿಯ ಪ್ರಾತ್ಯಕ್ಷಿಕೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಜಗದ್ಗುರು ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ. ಕಪ್ಪತ್ತಗುಡ್ಡದ ಉಳಿವಿಗಾಗಿ ಹೋರಾಟ, ಪೋಸ್ಕೋದಂತಹ ದೈತ್ಯ ಕಂಪನಿ ವಿರೋಧವಾಗಿ ರೈತರ ಪರವಾಗಿ ನಡೆದ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಅನ್ನದಾನ ಶ್ರೀಗಳು ರೈತರಿಗಾಗಿ ಹೋರಾಟ ಮಾಡಿದ್ದಾರೆ.ಶ್ರೀಗಳಿಗೆ ಅಲಹಾಬಾದ್ ವಿಶ್ವವಿದ್ಯಾಲಯ ಹಿಂದಿ ಸಾಹಿತ್ಯ ವಿಶಾರದ ಹಾಗೂ ಸಾಹಿತ್ಯ ರತ್ನ ಪ್ರಶಸ್ತಿ, ಬನಾರಸ್ ವಿಶ್ವವಿದ್ಯಾಲಯದಿಂದ ವೇದಾಂತ ಶಾಸ್ತ್ರಿ ಪ್ರಶಸ್ತಿ, ಶೈಕ್ಷಣಿಕ ಮತ್ತು ಸಾಮಾಜಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳನ್ನು ಗುರುತಿಸಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯವು 2005ರಲ್ಲಿ ಗೌರವ ಡಾಕ್ಟರೇಟ್, 2013ರಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯವು ನಾಡೋಜ ಪದವಿ ನೀಡಿ ಗೌರವಿಸಿದೆ. ಅದರಂತೆ ಅನೇಕ ಸಂಘ- ಸಂಸ್ಥೆಗಳು ಮತ್ತು ಮಠಮಾನ್ಯಗಳು ಶ್ರೀಗಳಿಗೆ ವಿವಿಧ ಪದವಿ-ಪುರಸ್ಕಾರಗಳನ್ನು ನೀಡಿವೆ.
ಪ್ರಸಾದದ ವ್ಯವಸ್ಥೆ: ಹಿರಿಯ ಶ್ರೀಗಳ ಕೃಪಾಶೀರ್ವಾದ ಮತ್ತು ಕಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಇಲ್ಲಿನ ಅನ್ನದಾನೀಶ್ವರ ಯಾತ್ರಾ ಮಹೋತ್ಸವವು ವರ್ಷದಿಂದ ವರ್ಷಕ್ಕೆ ಹೆಚ್ಚು ಜನಮನ್ನಣೆಯೊಂದಿಗೆ ಅದ್ಧೂರಿಯಾಗಿ ನಡೆಯುತ್ತಾ ಬಂದಿದೆ. ಈ ಬಾರಿ ಯಾತ್ರಾ ಮಹೋತ್ಸವದ ಅಂಗವಾಗಿ ಸುಮಾರು 15 ಜೋಡಿಗಳ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದೆ. ರಕ್ತದಾನ ಹಾಗೂ ರಕ್ತ ತಪಾಸಣಾ ಶಿಬಿರವನ್ನೂ ಏರ್ಪಡಿಸಲಾಗಿದೆ. ಬರುವ ಭಕ್ತರಿಗೆಲ್ಲ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಶ್ರೀ ಅನ್ನದಾನೀಶ್ವರ ಯಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಕೈಲಾಸಪತಿ ಹಿರೇಮಠ ತಿಳಿಸಿದರು.