ಶರಣು ಸೊಲಗಿ ಮುಂಡರಗಿ
ಮತೀಯ ಕಂದಾಚಾರ ಬದಿಗೆ ಸರಿಸುತ್ತ ವೈಚಾರಿಕ ಹಾಗೂ ವೈಜ್ಞಾನಿಕ ಪಥದಲ್ಲಿ ಸಾಗಿದ್ದ ಕನ್ನಡದ ಜಗದ್ಗುರು ಎಂದೇ ಖ್ಯಾತರಾಗಿದ್ದ ಲಿಂ.ಜ.ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಯಾವುದೇ ಜಾತಿ ಭೇದವಿಲ್ಲದೇ ಮಠವನ್ನು ಎಲ್ಲ ಧರ್ಮೀಯರಿಗಾಗಿ ತೆರೆದಿಟ್ಟಿದ್ದರು. ಅಂತದ್ದೇ ಮನಸ್ಸುಳ್ಳ ನಾಡಿನ ಬಸವತತ್ವ ಪ್ರಚಾರಕ ಜ.ನಿಜಗುಣಪ್ರಭು ಸ್ವಾಮೀಜಿ ಅವರನ್ನು ತೋಂಟದ ಸಿದ್ದಲಿಂಗ ಶ್ರೀಗಳು ಮುಂಡರಗಿ ತೋಂಟದಾರ್ಯ ಮಠಕ್ಕೆ ಪೀಠಾಧಿಪತಿಯನ್ನಾಗಿ ಮಾಡಿದ್ದು, ಅವರೂ ಶ್ರೀಗಳ ಹಾದಿಯಲ್ಲಿಯೇ ನಡೆಯುತ್ತಾ ಪ್ರತಿವರ್ಷದ ಪ್ರವಚನ ಕಾರ್ಯಕ್ರಮಕ್ಕೆ ವಿವಿಧ ಜಾತಿ, ಜನಾಂಗದವರನ್ನು ಪ್ರವಚನ ಕಮಿಟಿ ಅಧ್ಯಕ್ಷರನ್ನಾಗಿ ಮಾಡುತ್ತಾ ಬಂದಿದ್ದು, ಕಳೆದ ವರ್ಷ ಜೈನ ಸಮುದಾಯದವರನ್ನು, ಪ್ರಸ್ತುತ ವರ್ಷ ಲಿಂಗಾಯತ ಸಮುದಾಯದ ಎಸ್.ಎಸ್. ಗಡ್ಡದ ಅಧ್ಯಕ್ಷರಾಗಿದ್ದು, ಛಲವಾದಿ ಸಮುದಾಯದ ಅಡಿವೆಪ್ಪ ಛಲವಾದಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಲ್ಲಿನ ಆಷಾಢ ಮಾಸದ ಪ್ರವಚನ ಕಾರ್ಯಕ್ರಮಕ್ಕೆ ಪ್ರತಿವರ್ಷ ನಾಡಿನ ಹೆಸರಾಂತ ಪ್ರವಚನಕಾರರು ಬಂದು ಪ್ರವಚನ ಮಾಡಿದ್ದಾರೆ. ಪ್ರಸ್ತುತ ವರ್ಷ ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಒಂದಿಷ್ಟು ಹೊಸತನ ತಂದಿದ್ದು, ಪ್ರತಿದಿನ ಒಂದೊಂದು ವಿಷಯದ ಮೇಲೆ ಅನುಭಾವ ದರ್ಶನ ಮಾಡಲು ನಾಡಿನ ಪ್ರಖ್ಯಾತ ವಿಷಯ ತಜ್ಞರನ್ನು ಕರೆ ತಂದು ಮಾತನಾಡಿಸಿದ್ದಾರೆ.ಸಾಂಸ್ಕೃತಿಕ ನಾಯಕ ಬಸವಣ್ಣ ಕುರಿತು ಹಾರೋಗೇರಿಯ ಐ.ಆರ್. ಮಠಪತಿ, ಜಂಗಮ ಪ್ರೇಮಿ ಬಸವಣ್ಣ ಕುರಿತು ಸಿಂಧನೂರಿನ ವೀರಭದ್ರಪ್ಪ ಕುರಕುಂದಿ, ಷಟ್‌ಸ್ಥಲಗಳ ಕುರಿತು ಶಿರಗುಪ್ಪಿಯ ಬಸವರಾಜಪ್ಪ ಶರಣರು, ಪಂಚಾಚಾರಗಳ ಕುರಿತು ಬೇಲೂರಿನ ಡಾ. ಮಹಾಂತ ಸ್ವಾಮೀಜಿ, ಶರಣರು ಕಂಡ ಶಿವಯೋಗ ಬೆಳಗಾವಿಯ ಶರಣಬಸವ ಸ್ವಾಮೀಜಿ, ಶರಣರು ಕಂಡ ಸಮಾಜ ಬೈಲೂರಿನ ಶಿಕ್ಷಕ ವಿವೇಕ ಕುರಗುಂದ, ಶರಣರ ಮನೋವಿಜ್ಞಾನ ಕಲ್ಪನೆ ಧಾರವಾಡ ಎಸ್.ಡಿ.ಎಂ. ಕಾಲೇಜಿನ ಡಾ. ನಾಗೇಶ ಅಜ್ಜವಾಡಿಮಠ ತಮ್ಮ ಅನುಭಾವದ ನುಡಿಗಳನ್ನಾಡಿದರು.
ಕಾರ್ಯಕ್ರಮದ ಮಧ್ಯದಲ್ಲಿ ಜನಪದ ಕಲೆ ಪ್ರೋತ್ಸಾಹಿಸುವ ಉದ್ದೇಶದಿಂದ ಹರ್ಲಾಪುರದ ಕಲಾ ತಂಡದ ಎಸ್.ಎಸ್. ಹಿರೇಮಠ ಹಾಗೂ ಸಂಗಡಿಗರಿಂದ ಜನಪದ ಕಾರ್ಯಕ್ರಮ, ಮೌಢ್ಯತೆ ಕುರಿತು ಜಾಗೃತಿ ನೀಡಲು ಚಿಕ್ಕೊಡಿ ಶಿಕ್ಷಕ ಎಸ್.ಆರ್. ಡೋಂಗರೆ ಅವರಿಂದ ಪವಾಡ ಬಯಲು, ಜನರನ್ನು ನಗಿಸಲು ನವಲಗುಂದದ ಹಾಸ್ಯ ಕಲಾವಿದ ಶರಣು ಯಮನೂರು ಅವರಿಂದ ಹಾಸ್ಯೋತ್ಸವ, ಶ್ರೀಮಠದಿಂದ ಪತ್ರಿಕಾ ದಿನಾಚರಣೆ, ಉಚಿತ ರಕ್ತದಾನ ಶಿಬಿರ ಸೇರಿದಂತೆ ಹಲವಾರು ಜನಪರ ಹಾಗೂ ಜೀವಪರ ಕಾರ್ಯಕ್ರಮ ಜರುಗಿದವು.
ತೋಂಟದಾರ್ಯ ಮಠ 12ನೇ ಶತಮಾನದ ಅನುಭವ ಮಂಟಪದ ತತ್ವ ನಿಷ್ಠದ ಮಠ. ಈ ತತ್ವನಿಷ್ಠದ ಮಠದ ಪರಂಪರೆಗೆ ಕೈಗನ್ನಡಿಯಂತೆ ಆಷಾಢ ಮಾಸದಲ್ಲಿ ಈ ವರ್ಷ ನಡೆದಂತಹ ಅನುಭಾವಿಗಳ ಅನುಭಾವವೇ ಒಂದು ಕೈಗನ್ನಡಿ. ಇಂತಹ ಕಾರ್ಯಕ್ರಮ ಸಮಾಜದಲ್ಲಿ ಜನಸಾಮಾನ್ಯರ ಹೃದಯಕ್ಕೆ ಮುಟ್ಟಿದರೆ, ಸಮಾಜ ಧರ್ಮ ಮತ್ತು ಧಾರ್ಮಿಕತೆಯಿಂದ ಅಧ್ಯಾತ್ಮದ ಕಡೆಗೆ ಬಂದು ಜೀವನ ಸಮೃದ್ಧಿಗೊಳಿಸಿಕೊಳ್ಳುವಲ್ಲಿ ಕೆಲಸ ಮಾಡುತ್ತದೆ. ಎಂದು ಜ. ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ.