ಶಿವಾನಂದ ಗೊಂಬಿ
ರೈತರೇ ನಮಗೆ ಒತ್ತಡ ಹಾಕಿದ್ದರಿಂದ ಹೆಸರು ಖರೀದಿಸಿದ್ದು. ಇದರಲ್ಲಿ ನಮ್ಮದೇನೂ ತಪ್ಪಿಲ್ಲ. ಹೀಗಾಗಿ ಹಿಂತೆಗೆದುಕೊಂಡು ಹೋಗುವಂತೆ ಅವರಿಗೆ ನೋಟಿಸ್ ನೀಡಿದ್ದೇವೆ.
ಇದು ತಾಲೂಕಿನ ಬ್ಯಾಹಟ್ಟಿ ಬೆಂಬಲ ಬೆಲೆ ಕೇಂದ್ರದ ಸಿಬ್ಬಂದಿ ಉಪವಿಭಾಗಾಧಿಕಾರಿಗೆ ಲಿಖಿತವಾಗಿ ನೀಡಿರುವ ಉತ್ತರ. ಈ ಮೂಲಕ ತಮ್ಮ ತಪ್ಪಿನಿಂದ ನುಣುಚಿಕೊಳ್ಳಲು ಯತ್ನಿಸಿದ್ದಾರೆ. ಇದರಿಂದ ಕೆರಳಿರುವ ರೈತರು, ನಾವು ಒತ್ತಡ ಹಾಕಿ ಮಾರಾಟ ಮಾಡಲು ಸಾಧ್ಯವೇ? ಒತ್ತಡ ಹೇರುತ್ತಾರೆ ಎಂದರೆ ನಿಯಮ ಮೀರಿ ಖರೀದಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.ಆಗಿದ್ದೇನು?
ಬೆಳೆ ಮಾರಿದ ಹಣ ಬರುತ್ತದೆ ಎಂದು ಎದುರು ನೋಡುತ್ತಿದ್ದ ರೈತರು ನೋಟಿಸ್ ಕಂಡು ದಂಗಾಗಿದ್ದಾರೆ. ನಾವು ಮಾರಾಟ ಮಾಡಿ ತಿಂಗಳಾದ ಬಳಿಕ ಅದ್ಹೇಗೆ ಕಳಪೆಯಾಯಿತು? ಎಂದು ಚರ್ಚಿಸಿದ್ದಾರೆ. ಬಳಿಕ ನಮಗೆ ಮಾರಾಟ ಮಾಡಿದ ಹಣ ನೀಡಬೇಕೆಂದು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಅದರನ್ವಯ ಉಪವಿಭಾಗಾಧಿಕಾರಿ ವಿಚಾರಣೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಅದರಂತೆ ಹೆಸರು ಖರೀದಿಸಿ ಬಾರ್‌ಕೋಡ್ ಹಾಕಿದ ಮೇಲೆ ಗುಣಮಟ್ಟ ಇಲ್ಲವೆಂದು ನೋಟಿಸ್ ನೀಡಿರುವುದೇಕೆ? ಎಂಬ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಉಪವಿಭಾಗಾಧಿಕಾರಿ ಬ್ಯಾಹಟ್ಟಿ ಬೆಂಬಲ ಬೆಲೆ ಕೇಂದ್ರಕ್ಕೆ ತಾಕೀತು ಮಾಡಿದ್ದರು.
ಇದಕ್ಕೆ ಲಿಖಿತ ಉತ್ತರ ನೀಡಿರುವ ಬ್ಯಾಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ರೈತರೇ ಒತ್ತಡ ಹಾಕಿ ಹೆಸರು ಮಾರಾಟ ಮಾಡಿದ್ದರು. ಜತೆಗೆ ಗುಣಮಟ್ಟ ಇರದಿದ್ದರೆ ವಾಪಸ್ ಪಡೆಯುವುದಾಗಿ ತಿಳಿಸಿದ್ದರು. ಹೀಗಾಗಿ ನಾವು ಕೇಂದ್ರದಲ್ಲಿ ಗುಣಮಟ್ಟ ಪರಿಶೀಲಿಸಿರಲಿಲ್ಲ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.
ಎಚ್ಚರಿಕೆ:
ಇದೀಗ ಉಪವಿಭಾಗಾಧಿಕಾರಿ ಅಂಕಣದಲ್ಲಿ ಚೆಂಡು ಇದ್ದು ಎತ್ತ ಹೊಡೆಯುತ್ತಾರೆ ಎಂಬುದು ಸದ್ಯದ ಕುತೂಹಲ.ಬ್ಯಾಹಟ್ಟಿಯಲ್ಲಿ ಒತ್ತಡ ಹೇರಿ ರೈತರು ಮಾರಾಟ ಮಾಡಿದ್ದಾರೆ ಎಂದು ಬೆಂಬಲ ಬೆಲೆ ಕೇಂದ್ರದ ಅಧಿಕಾರಿ ತಿಳಿಸಿದ್ದಾರೆ. ಆದರೆ, ಹೀಗೇ ಒತ್ತಡ ಹಾಕಿದರೆ ಖರೀದಿಸಲು ಬರುವುದಿಲ್ಲ. ಇದರಲ್ಲಿ ಕೇಂದ್ರದ ಸಿಬ್ಬಂದಿಯೇ ತಪ್ಪು ಮಾಡಿದ್ದಾರೆ.
ಮಲ್ಲಣ್ಣ ಅಲೇಕರ್, ಬ್ಯಾಹಟ್ಟಿ ರೈತರು, ರಾಜ್ಯ ಉಪಾಧ್ಯಕ್ಷರು, ರೈತಸೇನಾ ಕರ್ನಾಟಕ