ಗಜೇಂದ್ರಗಡ: ಪಟ್ಟಣದ ಅಭಿವೃದ್ಧಿಗೆ ಪುರಸಭೆ ಆಡಳಿತ ಬದ್ಧವಾಗಿದ್ದು, ಸಾರ್ವಜನಿಕರು ಸಕಾಲದಲ್ಲಿ ತೆರಿಗೆ ಪಾವತಿಸುವ ಮೂಲಕ ಆಡಳಿತಕ್ಕೆ ಕೈ ಜೋಡಿಸಬೇಕು ಎಂದು ಪುರಸಭೆ ಸ್ಥಾಯಿ ಸಮಿತಿ ಚೇರ್‌ಮನ್ ಮುದಿಯಪ್ಪ ಮುಧೋಳ ಹೇಳಿದರು.
ನೀರು ಕರ ಸಂಗ್ರಹ: ಪಟ್ಟಣದ ಕೆಲವು ಬಡಾವಣೆಗಳಲ್ಲಿ ನೀರಿನ ಕರ ಸಂಗ್ರಹ ಗುರಿ ತಲುಪಿಲ್ಲ ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಸಭೆಗೆ ಮಾಹಿತಿ ನೀಡಿದರು. ಸ್ಥಾಯಿ ಸಮಿತಿ ಚೇರ್‌ಮನ್ ಮುದಿಯಪ್ಪ ಮುಧೋಳ ಪ್ರತಿಕ್ರಿಯಿಸಿ, ನೀರಿನ ಕರ ತುಂಬುವಂತೆ ಪುರಸಭೆ ವಾಹನಗಳಲ್ಲಿ ಜಾಗೃತಿ ಮೂಡಿಸಿ, ತೆರಿಗೆ ಪಾವತಿ ಬಾಕಿ ಹೊಂದಿರುವವರಿಗೆ ಕರ ತುಂಬಲು ನೋಟಿಸ್ ನೀಡಿ, ತೆರಿಗೆ ತುಂಬದಿದ್ದರೆ ಮುಲಾಜಿಲ್ಲದೆ ನೀರಿನ ಸಂಪರ್ಕ ಕಡಿತಗೊಳಿಸಿ ಎಂದರು. ಪುರಸಭೆ ಅಧ್ಯಕ್ಷರು ಸೇರಿ ಸದಸ್ಯರು ಅವರ ಹೇಳಿಕೆಗೆ ದನಿಗೂಡಿಸಿದರು.
ಕೆಲವು ವರ್ಷಗಳ ಹಿಂದೆ ಬೇಸಿಗೆ ಸಂದರ್ಭದಲ್ಲಿ ಪಟ್ಟಣದಲ್ಲಿ ನೀರು ಪೂರೈಸಲು ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆಯಲಾಗಿತ್ತು. ಕೊಳವೆಬಾವಿ ಮಾಲೀಕರಿಗೆ ಅಂದಾಜು ₹೧೨ ಲಕ್ಷ ಬಾಡಿಗೆ ಪಾವತಿಸಬೇಕಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಅಷ್ಟೊಂದು ಹಣ ಎಲ್ಲಿದೆ? ಜಿಲ್ಲಾಡಳಿತಕ್ಕೆ ಪತ್ರ ಬರೆದು ಅನುದಾನ ಕೇಳಿ ಎಂದು ಮುದಿಯಪ್ಪ ಮುಧೋಳ ಹಾಗೂ ಸುಭಾಸ ಮ್ಯಾಗೇರಿ ಹೇಳಿದರು.ಸದಸ್ಯರಾದ ಮುರ್ತುಜಾ ಡಾಲಾಯತ, ರಾಜು ಸಾಂಗ್ಲೀಕರ, ವೆಂಕಟೇಶ ಮುದಗಲ್, ಶರಣಪ್ಪ ಉಪ್ಪಿನಬೆಟಗೇರಿ, ಕೌಸರಬಾನು ಹುನಗುಂದ, ದಾಕ್ಷಾಯಣಿ ಚೋಳಿನ, ವಿಜಯಾ ಮಳಗಿ, ಅಧಿಕಾರಿಗಳಾದ ಸಿ.ಡಿ. ದೊಡ್ಡಮನಿ, ಗುರಪ್ಪ ಪಟ್ಟಣಶೆಟ್ಟಿ, ಶಿವಕುಮಾರ ಇಲಾಳ, ರಂಜಿತ ಬೋಯಿಟೆ, ಪಿ.ಎನ್. ದೊಡ್ಡಮನಿ, ರಾಘವೇಂದ್ರ ಮಂತಾ ಇತರರು ಇದ್ದರು.