15 ವರ್ಷದಲ್ಲಿ ಒಂದೇ ಕುಟುಂಬದ 7 ಮಂದಿಗೆ ಹೃದಯಾಘಾತ!

Sujatha NR | Published : Jul 3, 2025 9:58 AM
Why Do Heart Attacks Happen More Often in the Morning

ತೋಟ- ಹೊಲಗಳಲ್ಲಿ ಬೆವರು ಸುರಿಸಿ ದುಡಿದು ಬದುಕುವ ಕಷ್ಟಜೀವಿಗಳ ತುಂಬು ಕುಟುಂಬ ವೊಂದು  ನೂರಾರು ವರ್ಷಗಳಿಂದ ನೆಮ್ಮದಿಯಿಂದ ನೆಲೆಸಿದೆ. ಆದರೀಗ, ಆ ನೆಮ್ಮದಿಗೆ ಬೆಂಕಿ ಬಿದ್ದಿದೆ. ‘ಹೃದಯ ಬೇನೆ’ ಎಂಬ ಮಹಾಮಾರಿ ಇಡೀ ಕುಟುಂಬದ ವಂಶವಾಹಿನಿಯನ್ನೇ ನುಂಗಿ ನೀರು ಕುಡಿಯುತ್ತಿದೆ!

 ಮಲ್ಲಿಕಾರ್ಜುನ ಸಿದ್ದಣ್ಣವರ

 ಹುಬ್ಬಳ್ಳಿ :  ಅದೊಂದು ಹಸಿರಿನ ಮಧ್ಯದ ಪುಟ್ಟ ದ್ವೀಪದಂತ ಪ್ರದೇಶ. ತಮ್ಮದೇ ತೋಟ- ಹೊಲಗಳಲ್ಲಿ ಬೆವರು ಸುರಿಸಿ ದುಡಿದು ಬದುಕುವ ಕಷ್ಟಜೀವಿಗಳ ತುಂಬು ಕುಟುಂಬವೊಂದು ಅಲ್ಲಿ ನೂರಾರು ವರ್ಷಗಳಿಂದ ನೆಮ್ಮದಿಯಿಂದ ನೆಲೆಸಿದೆ. ಆದರೀಗ, ಆ ನೆಮ್ಮದಿಗೆ ಬೆಂಕಿ ಬಿದ್ದಿದೆ. ‘ಹೃದಯ ಬೇನೆ’ ಎಂಬ ಮಹಾಮಾರಿ ಇಡೀ ಕುಟುಂಬದ ವಂಶವಾಹಿನಿಯನ್ನೇ ನುಂಗಿ ನೀರು ಕುಡಿಯುತ್ತಿದೆ!

ಹೌದು! ಈ ಕುಟುಂಬದ ಬರೋಬ್ಬರಿ 7 ಜನ ಈಗಾಗಲೇ ಹೃದಯಾಘಾತಕ್ಕೆ ಬಲಿಯಾಗಿದ್ದು, ನಾಲ್ವರು ಬೈಪಾಸ್‌ ಸರ್ಜರಿ ಮಾಡಿಸಿಕೊಂಡು ತಪಾಸಣೆ, ಚಿಕಿತ್ಸೆ, ಔಷಧಿಯಿಂದ ದಿನದೂಡುತ್ತಿದ್ದಾರೆ!

ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕು ಲೋಕಾಪುರ ಹೋಬಳಿಯ ‘ಚೌಡಾಪುರ ತೋಟ’ ಎಂಬ ಪುಟ್ಟ ಊರಿನಲ್ಲಿ ಹೃದಯ ಬೇನೆ ಅಜ್ಜಿ, ಮಕ್ಕಳು, ಸೊಸೆ, ಮೊಮ್ಮಕ್ಕಳನ್ನು ಸಾಲು ಸಾಲಾಗಿ ಬಲಿ ಪಡೆಯುತ್ತ ಅಕ್ಷರಶಃ ಕೇಕೆ ಹಾಕುತ್ತಿದೆ.

ಕಳೆದ ಒಂದೂವರೆ ದಶಕದಲ್ಲಿ ಆಸ್ಪತ್ರೆ ಸೇರಿ ಅಸುನೀಗಿದ 7 ಮಂದಿಯ ಸಾವಿಗೆ ಹೃದಯಾಘಾತವೇ ಕಾರಣ ಎಂದು ಖಚಿತವಾಗಿದೆ. ಆದರೆ, ಮನೆಯಲ್ಲೇ ಸತ್ತ ಎಷ್ಟೋ ಜನರ ಸಾವಿಗೂ ಇದೇ ಹೃದಯ ಬೇನೆಯೇ ಕಾರಣ ಎನ್ನುವ ಶಂಕೆ ಆ ಕುಟುಂಬದಲ್ಲೀಗ ಬಲವಾಗುತ್ತಿದೆ. ಹಾಗಾಗಿ ಈ ಕುಟುಂಬದ ಎಲ್ಲೂರ ಆಗಾಗ ಇಸಿಜಿ ಮಾಡಿಸಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾರಂತೆ.

ಇಡೀ ವಂಶವಕ್ಕೆ ಬೆನ್ನು: ಮೂಲ ಬೇರಿನ ಯಲ್ಲಪ್ಪ-ಯಮನವ್ವ ದಂಪತಿಗೆ ದುರಗಪ್ಪ, ಸಂತಪ್ಪ, ರಾಮಪ್ಪ, ರಾಣಪ್ಪ, ಸಂತವ್ವ, ನೀಲವ್ವ, ಹನುಮವ್ವ ಎಂಬ ಏಳು ಮಕ್ಕಳು. ಎಲ್ಲರದೂ ಮದುವೆ ಮಾಡಿ, ಅವರೆಲ್ಲ ತಮ್ಮದೇ ಸಂಸಾರ ಹೂಡಿ ಆರಾಮಾಗಿದ್ದಾರೆ ಎನ್ನುವ ಹೊತ್ತಿಗೆ ತಾಯಿ ಯಮನವ್ವ ಮಲಗಿದಲ್ಲೇ ಇಹಲೋಕ ತ್ಯಜಿಸಿದ್ದಳು. ವೈದ್ಯರು ಬಂದು ನೋಡಿದಾಗ ಗೊತ್ತಾಗಿದ್ದು ಸೀವಿಯರ್‌ ಹಾರ್ಟ್ ಅಟ್ಯಾಕ್‌!

ಮಕ್ಕಳಾದ ಸಂತಪ್ಪ, ರಾಮಪ್ಪ, ರಾಣಪ್ಪ, ಸಂತವ್ವ, ಸಂತಪ್ಪನ ಮಗಳು ಪಾರವ್ವ, ಸಂತವ್ವನ ಮಗ ಕಾಶಪ್ಪ ಸಾಲು ಸಾಲಾಗಿ ಹೃದಯ ಬೇನೆಗೆ ಬಲಿಯಾದರು. ನೀಲವ್ವ ಮತ್ತು ಆಕೆಯ ಹಿರಿಯ ಮಗ ಈರಣ್ಣ, ಮೊಮ್ಮಗ ರಾಜು, ದುರಗಪ್ಪನ ಮೊಮ್ಮಗ ಯಲ್ಲಪ್ಪ, ಹನುಮವ್ವನ ಮೊಮ್ಮಗ ಸಂಗಮೇಶ (15) ಅವರಿಗೆ ಬೈಪಾಸ್‌ ಸರ್ಜರಿ ಆಗಿದೆ.

3 ದಿನದಲ್ಲಿ 2 ಸಾವು:

ಹೊಲದ ಬದುವಿನಲ್ಲಿ ದನ ಮೇಯಿಸುತ್ತಿದ್ದ ರಾಣಪ್ಪ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಎಷ್ಟೊತ್ತಾದರೂ ಮನೆಗೆ ಬಾರದ ರಾಣಪ್ಪನನ್ನು ಹುಡುಕಿಕೊಂಡು ಹೋದಾಗ ಸಿಕ್ಕಿದ್ದು ಆತನ ಶವ. ವೈದ್ಯರು ಬಂದು ತಪಾಸಿಸಲಾಗಿ ಸೀವಿಯರ್‌ ಹಾರ್ಟ್ ಅಟ್ಯಾಕ್‌!

ಈ ರಾಣಪ್ಪನ ಶವ ಸಂಸ್ಕಾರ ಮಾಡಿದ ಬೂದಿ ಇನ್ನೂ ಆರಿರಲಿಲ್ಲ. ಬಂಧುಗಳ ಕಣ್ಣೀರು ಇನ್ನೂ ಇಂಗಿರಲಿಲ್ಲ. ರಾಣಪ್ಪನ ಅಣ್ಣ ಸಂತಪ್ಪನ ಮಗಳಿಗೆ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟೊತ್ತಿಗೆ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಆಗಲೂ ವೈದ್ಯರು ಹೇಳಿದ್ದು ಹಾರ್ಟ್ ಅಟ್ಯಾಕ್!

ಮೂರು ದಿನಗಳ ಅಂತರದಲ್ಲಿ ಈ ಕುಟುಂಬ ಇಬ್ಬರನ್ನು (ಚಿಕ್ಕಪ್ಪ-ಮಗಳು) ಕಳೆದುಕೊಂಡಿತು. ಹೀಗೆ ಸಾಲುಗಟ್ಟಿ ನಡೆಯುವ ಸಾವುಗಳ ಸರಣಿ ನೋಡುತ್ತಿರುವ ಈ ಕುಟುಂಬದ ಸದಸ್ಯರನ್ನು ಸಂತೈಸುವ ಕೈಗಳೇ ಸೋತುಹೋಗಿವೆ. ಯಾರಿಗಾಗಿ ಅಳುವುದು? ಎಷ್ಟುಬಾರಿ ಅಳುವುದು?

ಕಾಲ್‌ ಬಂದರೆ ಕೈ ನಡುಗುತ್ತವೆ:

ಈ ಚೌಡಾಪುರ ತೋಟದಿಂದ ಯಾವುದಾದರು ಊರಿನ ಬಂಧುಗಳಿಗೆ ಮೊಬೈಲ್‌ ಕಾಲ್‌ ಹೋದರೆ ಅವರ ಕೈಗಳು ಅರೆಕ್ಷಣ ನಡುಗುತ್ತವೆ. ಕಾರಣ, ‘ಮತ್ತ್ಯಾರ ಸಾವಿನ ಸುದ್ದಿ ಹೊತ್ತು ತಂದಿದೆ ಈ ಕಾಲ್‌’ ಎನ್ನುವುದು ಅವರ ಆತಂಕ. ಬಳಿಕ ಬೆವರುತ್ತಲೇ ನಿಧಾನಕ್ಕೆ ರಿಸೀವ್‌ ಮಾಡುತ್ತಾರೆ. ಅಷ್ಟು ಭಯ ಹುಟ್ಟಿಸಿದೆ ಈ ಸಾವಿನ ಮೆರವಣಿಗೆ!

ಊಟಕ್ಕೆ ಕುಳಿತಿದ್ದ ರಾಮಪ್ಪ ಊಟ ಮುಗಿಸಿ ಏಳಲಾಗದೇ ಕುಸಿದು ಕುಂತು ಜೀವಬಿಟ್ಟರು. ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದ ಕಾಶಪ್ಪ ಕುಸಿದುಬಿದ್ದರು. ಕಸಗೂಡಿಸುತ್ತಿದ್ದ ಕಾಶವ್ವ ಎದೆ ಚುಚ್ಚುತ್ತಿದೆ ಎಂದು ಜೀವ ಬಿಟ್ಟರು.

ಹೀಗೆ, ಯಾರು ಯಾವ ಹೊತ್ತಿನಲ್ಲಿ ಕುಸಿದುಬಿದ್ದು ಜೀವ ಬಿಡುತ್ತಾರೆ, ಕುಂತಲ್ಲೇ ಉಸಿರು ಚಲ್ಲುತ್ತಾರೆ ಮತ್ತು ಹೊಲಕ್ಕೆ ಹೋದವರು ವಾಪಸ್‌ ಮನೆ ಬರುತ್ತಾರೆ ಎನ್ನುವ ಯಾವ ಭರವಸೆಯೂ ಇಡೀ ಕುಟುಂಬಕ್ಕೆ ಇಲ್ಲದಂತಾಗಿದೆ.

ಅಕ್ಷರ ಲೋಕ ಮತ್ತು ಆಧುನಿಕ ಜಗತ್ತಿನಿಂದ ತುಸು ದೂರವೇ ಇರುವ ಈ ಕುಟುಂಬ ಜನ ಸುಂದರ ಹಸಿರು ಪರಿಸರದ ಮಧ್ಯೆ ತೋಟ- ಹೊಲ, ದನಕರು, ಆಡು-ಕುರಿಗಳನ್ನು ನಂಬಿ ಬದುಕುತ್ತಿದ್ದಾರೆ. ದಿನವಿಡೀ ಮೈಮುರಿದು ಬೆವರು ಸುರಿಸಿ ದುಡಿಯುತ್ತಾರೆ. ತಾವೇ ಬೆಳೆದ ಶುದ್ಧ ಆಹಾರವನ್ನು ಸೇವಿಸುತ್ತಾರೆ. ಆದಾಗ್ಯೂ ಈ ‘ಹೃದಯ ಬೇನೆ’ ಇವರ ಬೆನ್ನು ಬಿದ್ದಿರುವುದು ವೈದ್ಯಕೀಯ ಲೋಕವೇ ಬೆಕ್ಕಸ ಬೆರಗಾಗಿದೆ.

ಶುದ್ಧ ಆಹಾರ ಸೇವಿಸಿ ಬದುಕುವ ಶ್ರಮಜೀವಿಗಳಿಗೆ ಈ ಹೃದಯ ಬೇನೆ ಕಾಡುತ್ತಿದೆ. ಇಲ್ಲಿನ ಜನ ಅಮಾಯಕರು, ಹೊಸ ಜಗತ್ತು ಗೊತ್ತಿಲ್ಲ, ಸರ್ಕಾರವೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು.

-ಈರಣ್ಣ ಫಕ್ಕೀರಪ್ಪ ದೊಡಮನಿ, ಹೃದಯ ಬೇನೆಯ ಸಂತ್ರಸ್ತ.

ನಮ್ ಭಾಳ್ ಜನ ಹಿರಿಯರು ಹಾರ್ಟ್ ಅಟ್ಯಾಕ್‌ ಸತ್ತಿದ್ದಾರೆ. ಇದು ನಮಗೆಲ್ಲಾ ಭಯ ಆಗೈತಿ. ಆಗಾಗ ಡಾಕ್ಟರ್ ಬೆಟ್ಟಿ ಆಗಿ ಇಸಿಜಿ ತೆಗಸ್ತೇವಿ. ಬ್ಲಾಕ್‌ ಇದ್ರ ಬೈಪಾಸ್‌ ಸರ್ಜರಿ ಮಾಡಿಸಿಕೊಳ್ಳುತ್ತೇವೆ.

-ಮುತ್ತಪ್ಪ ರಾಣಪ್ಪ ಹಾದಿಮನಿ, ಮೃತನ ಪುತ್ರ

Read more Articles on