ನವಲಗುಂದ:
ಮಹಿಳಾ ನೌಕರರು ಎಲ್ಲ ಇಲಾಖೆಗಳಲ್ಲಿ ಮಾತೃ ಹೃದಯದಿಂದ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ತಹಸೀಲ್ದಾರ್ ಸುಧೀರ್ ಸಾಹುಕಾರ ಹೇಳಿದರು.ಸರ್ಕಾರ ಹಿರಿಯ ಪ್ರಾಥಮಿಕ ಶಾಲೆ ನಂ. 4ರಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಆಲ್ ಇಂಡಿಯಾ ಪ್ರೈಮರಿ ಟೀಚರ್ ಫೆಡರೇಷನ್ ಅಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ದೇಶದ ಆರ್ಥಿಕ ವ್ಯವಸ್ಥೆಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಸದ್ಯ ದೇಶದಲ್ಲಿ ಮಹಿಳಾ ಸಬಲೀಕರಣ ಹಾಗೂ ಲಿಂಗ ಸಮಾನತೆ ತುರ್ತು ಅವಶ್ಯಕತೆಯಿದೆ ಎಂದರು.ಸಿಡಿಪಿಒ ಗಾಯತ್ರಿದೇವಿ ಪಾಟೀಲ ಮಾತನಾಡಿ, ಹೆಣ್ಣು ಸಂಸಾರದ ಕಣ್ಣು, ಸಂಸಾರದ ಜಂಜಾಟದಲ್ಲಿ ಮಹಿಳೆಯರು ಆರೋಗ್ಯದ ಕಡೆ ಗಮನ ಹರಿಸಬೇಕು. ಹೆಣ್ಣು ಇಲ್ಲದ ಮನೆ ಅನಾಥವಾಗುತ್ತದೆ, ಹೆಣ್ಣು ಮಕ್ಕಳು ಏಕಕಾಲದಲ್ಲಿ ನಾಲ್ಕೈದು ಕೆಲಸ ಮಾಡುವ ಶಕ್ತಿ ಹೊಂದಿದ್ದಾಳೆ. ಇದರಿಂದ ಸಮಾಜದಲ್ಲಿ ಇಂದು ಪುರುಷನಿಗೆ ಸಮನಾಗಿ ಎಲ್ಲ ಕೆಲಸ ಮಾಡುತ್ತಾ, ಸಮಾಜದ ದಿಕ್ಕನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯುತ್ತಿದ್ದಾರೆ ಎಂದು ಹೇಳಿದರು.
ನೌಕರ ಸಂಘದ ನಿಕಟಪೂರ್ವ ಅಧ್ಯಕ್ಷ ಎ.ಬಿ. ಕೊಪ್ಪದ ಮಾತನಾಡಿದರು. ಇಂದುಮತಿ ವಿಷ್ಣು ನಾಯಕ ಹಾಗೂ ವಕೀಲ ಜೋಶಿ ಉಪನ್ಯಾಸ ನೀಡಿದರು. ಬೆಳಗ್ಗೆ ಮಾಡಲ್ ಹೈಸ್ಕೂಲ್ ಆವರಣದಲ್ಲಿ ಮಹಿಳಾ ನೌಕರರಿಗಾಗಿ ಖೋಖೋ, ವಾಲಿಬಾಲ್ ಪಂದ್ಯಾಟ ಹಾಗೂ ಮೋಜಿನ ಆಟಗಳು ಜರುಗಿದವು. ವಿ.ಡಿ. ರಂಗಣ್ಣವರ ಕ್ರೀಡಾಕೂಟ ಧ್ವಜಾರೋಹಣ ನೆರವೇರಿಸಿದರು. ಸಾಧಕ ಮಹಿಳಾ ನೌಕರರಿಗೆ ಸೇವಾ ಸುಧೆ ಪ್ರಶಸ್ತಿ ನೀಡಲಾಯಿತು. ನ್ಯಾಯಾಧೀಶರಾಗಿ ಆಯ್ಕೆಗೊಂಡ ತಾಲೂಕು ಬ್ಯಾಲ್ಯಾಳ ಗ್ರಾಮದ ಸುಧಾ ಪಟ್ಟಣಶೆಟ್ಟಿ ಅವರನ್ನು ಗೌರವಿಸಲಾಯಿತು.ಅತಿಥಿಗಳಾಗಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಎಸ್.ಎಫ್. ಸಿದ್ಧನಗೌಡ್ರ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಫ್. ಚುಳಕಿ, ರಾಜಶೇಖರ್ ಹೊನ್ನಪ್ಪನವರ, ರಮೇಶ ಲಿಂಗದಾಳ, ಆರ್.ಎಚ್. ನೇಗಲಿ, ಎಸ್.ಕೆ. ಕುರಹಟ್ಟಿ, ಗಣೇಶ ಹೊಳೆಯಣ್ಣವರ, ಎನ್.ಎಸ್. ತೋಳಿಕೋಟಿಮಠ, ಎಸ್.ಎನ್. ಶಿದ್ರಾಮಶೆಟ್ಟರ, ಎನ್.ವೈ. ಕಳಸಾಪೂರ ಸೇರಿದಂತೆ ಹಲವರಿದ್ದರು.