ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ರಂಜಾನ್ ಹಬ್ಬವು ಶಾಂತಿ, ಸೋದರತ್ವ, ದೈವಭಕ್ತಿಯ ಸಂದೇಶವನ್ನು ಸಾರುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಹೇಳಿದರು.

ಗಾಳೀಪುರ ಬಡಾವಣೆಯಲ್ಲಿರುವ ಮರ್ಸಿ ಪಬ್ಲಿಕ್‌ ಶಾಲೆಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಇಫ್ತಾರ್‌ ಕೂಟದಲ್ಲಿ ‌ಭಾಗವಹಿಸಿ ಮಾತನಾಡಿದರು.

ಮುಸಲ್ಮಾನ್ ಬಂಧುಗಳು ಮುಂಜಾನೆಯಿಂದ ಸೂರ್ಯಾಸ್ತದವರೆಗೆ ಉಪವಾಸವಿರುತ್ತಾರೆ. ಇಸ್ಲಾಂ 5 ಕಂಬಗಳಲ್ಲಿ ಒಂದಾದ ಉಪವಾಸವು ದೇಹ, ಮನಸ್ಸಿನ ನಿಯಂತ್ರಣವನ್ನು ಕಲಿಸುತ್ತದೆ. ದೇವನೊಬ್ಬ ನಾಮ ಹಲವು ಎಂಬಂತೆ ಎಲ್ಲ ಧರ್ಮಗಳು, ಜಾತಿಗಳು ಒಗ್ಗೂಡಿ ಬಾಳಿದರೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ಮರ್ಸಿ ‌ಪಬ್ಲಿಕ್‌ ಶಿಕ್ಷಣ ಸಂಸ್ಥೆಯವರು ರಂಜಾನ್ ಪ್ರಯುಕ್ತ ಶಾಲೆಯಲ್ಲಿ ಇಫ್ತಾರ್‌ ಕೂಟ ಆಯೋಜಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳ ಪ್ರಮುಖರನ್ನು ಆಹ್ವಾನಿಸಿ ಆಚರಣೆ ಮಾಡುತ್ತಿರುವುದು ಒಂದು ವಿಶೇಷ, ಅರ್ಥಪೂರ್ಣ ಕಾರ್ಯಕ್ರಮ ಇದಾಗಿದೆ. ಎಲ್ಲ ಹಬ್ಬಗಳನ್ನೂ ಎಲ್ಲರೂ ಸೇರಿ ಆಚರಣೆ ಮಾಡುವುದರಿಂದ ತುಂಬಾ ಸಂಭ್ರಮ ಇರುತ್ತದೆ. ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶದಲ್ಲಿ ನಾವೆಲ್ಲರೂ ಭಾರತೀಯರು, ಎಲ್ಲ ಧರ್ಮೀಯರು ಅಣ್ಣ- ತಮ್ಮಂದಿರಂತೆ ಬಾಳಿದರೆ ದೇಶ ಕೂಡ ಅಭಿವೃದ್ಧಿ ಹೊಂದುತ್ತದೆ ಎಂದರು.


ಇಫ್ತಾರ್‌ ಕೂಟ ಆಯೋಜಿಸಿರುವ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಹಾಗೂ ಮುಸ್ಲಿಂ ಬಾಂಧವರಿಗೆ ಈ ಮೂಲಕ ರಂಜಾನ್‌ ಶುಭಾಶಯ ಕೋರುವೆ ಎಂದರು.

ಜಿಲ್ಲಾ ಪೊಲೀಸ್‌ ‌ವರಿಷ್ಠಾಧಿಕಾರಿ ಎಂ.ಮುತ್ತುರಾಜು, ಜಿಪಂ ಸಿಇಒ ಮೋನಾ ರೋತ್ ರಂಜಾನ್ ಹಬ್ಬದ ಶುಭಾಶಯ ಕೋರಿದರು.

ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮದ ಗುರುಗಳಾದ ಮುಪ್ತಾಹ ಮದನಿ, ಡಾ. ರಾಹಿಪಿದಾಯಿ, ಚೂಡಾಧ್ಯಕ್ಷ ಮಹಮ್ಮದ್ ಅಸ್ಗರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರ ಪಾಟೀಲ್, ಎಪಿಪಿ ವಸೀಂ, ಅನ್ಸರ್‌ ಖಾನ್, ನಗರಸಭಾ ಮಾಜಿ ಸದಸ್ಯರಾದ ಎಂ. ಮಹೇಶ್, ಅಬ್ರಾರ್‌ ಅಹಮದ್, ಕಲೀಲ್ ಉಲ್ಲಾ, ಮೊಹಮ್ಮದ್ ಅಮೀಕ್, ಎಂವೈಎಫ್ ಶಾಲೆಯ ಆಡಳಿತಾಧಿಕಾರಿ ಮೊಹಮ್ಮದ್‌ ಸಾಬೀರ್‌, ಹುದಾ ಪಬ್ಲಿಕ್ ಶಾಲೆ ಅಧ್ಯಕ್ಷ ಇಸಾನ್ ಜಾವಿದ್, ಬ್ರೈಟ್ ಚೇನ್ ಶಾಲೆ ಅಧ್ಯಕ್ಷೆ ನಾಜೀಯಾ, ಎಂಇಟಿ ಶಾಲೆ ಅಧ್ಯಕ್ಷ ಮೊಹಮ್ಮದ್ ಅಜೀಂ, ಮರ್ಸಿ ಶಾಲೆಯ ಅಧ್ಯಕ್ಷ ಮುಜಾಯಿದ್, ಕಾರ್ಯದರ್ಶಿ ಸಿದ್ದಿಕ್, ಟಿಪ್ಪು ಸುಲ್ತಾನ್‌ ಅಸೋಸಿಯೇಷನ್ ಅಧ್ಯಕ್ಷ ಮಹಮ್ಮದ್ ಜಾವೀದ್, ವಕೀಲರಾದ ರಾಜೇಂದ್ರ, ಫೈಸಾಲ್ ಮುಸ್ಲಿಂ ‌ಮುಖಂಡರು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.