- ಉಪಾಧ್ಯಕ್ಷ ಎಂ.ಜಂಬಣ್ಣ ಹೇಳಿಕೆ । ಕಾಮಗಾರಿ ಮರುಚಾಲನೆಗೆ ಪೂಜೆ - - -
ಕನ್ನಡಪ್ರಭ ವಾರ್ತೆ ಹರಿಹರನೂತನ ನಗರಸಭೆ ಕಟ್ಟಡ ಕಾಮಗಾರಿಯನ್ನು ಮುಂದಿನ 7 ರಿಂದ 8 ತಿಂಗಳೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ನಗರಸಭೆ ಉಪಾಧ್ಯಕ್ಷ ಎಂ. ಜಂಬಣ್ಣ ಹೇಳಿದರು.
ನಗರಸಭೆ ಆವರಣದಲ್ಲಿ ಸೋಮವಾರ ನನೆಗುದ್ದಿಗೆಗೆ ಬಿದ್ದಿದ್ದ ನೂತನ ಕಟ್ಟಡ ಕಾಮಗಾರಿಗೆ ಮರುಚಾಲನೆಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ₹4.22 ಕೋಟಿ ವೆಚ್ಚದಲ್ಲಿ ನಗರಸಭೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಆದರೆ, ತಾಂತ್ರಿಕ ಕಾರಣದಿಂದ ಕಳೆದ ನಾಲ್ಕೈದು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು ಎಂದರು.ಈ ಹಿನ್ನಲೆಯಲ್ಲಿ ನಾನು ಹಾಗೂ ನಗರಸಭೆ ಅಧ್ಯಕ್ಷೆ ಕವಿತಾ ಬೇಡರ್ ಅವರು ಗುತ್ತಿಗೆದಾರರನ್ನು ಸಂಪರ್ಕಿಸಿ ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿದ್ದೆವು. ಈ ಹಿನ್ನೆಲೆಯಲ್ಲಿ ಇಂದು ಸೋಮವಾರ ಕಟ್ಟಡ ನಿರ್ಮಾಣ ಕಾಮಗಾರಿ ಪುನಾರಂಭಿಸಲು ಪೂಜೆ ನೆರವೇರಿಸಲಾಗಿದೆ. ಮುಂದಿನ 7 ರಿಂದ 8 ತಿಂಗಳಲ್ಲಿ ಅನುಮೋದಿತ ನಕ್ಷೆಯ ಪ್ರಕಾರ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ತಾಕೀತು ಮಾಡಲಾಗಿದೆ. ಅದರಂತೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದರು.
ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮಾತನಾಡಿ, ಅಧಿಕಾರಿಗಳು ಹಾಗೂ ಸದಸ್ಯರ ನಿರಂತರ ಪ್ರಯತ್ನದ ಫಲವಾಗಿ ಸ್ಥಗಿತಗೊಂಡಿದ್ದ ಕಾಮಗಾರಿಗೆ ಮತ್ತೆ ಶುಭಾರಂಭ ಸಿಕ್ಕಿದೆ. ಶೀಘ್ರದಲ್ಲಿ ಸದೃಢ ಹಾಗೂ ಸುಂದರವಾದ ಕಟ್ಟಡ ನಿರ್ಮಾಣವಾಗಲಿದೆ ಎಂದರು.ನಗರಸಭೆ ಸದಸ್ಯ ಅಬ್ದುಲ್ ಅಲೀಮ್, ಆಟೋ ಹನುಮಂತಪ್ಪ, ಬಿ.ಅಲ್ತಾಫ್, ನಗರಸಭೆ ಎಂಜಿನಿಯರ್ ಸಹಾಯಕ ರೆಹಮಾನ್ ಸಾಬ್, ನಗರಸಭೆ ವಿದ್ಯುತ್ ನಿರ್ವಹಣಾ ಗುತ್ತಿಗೆದಾರ ಗುರೇಶ್, ಇತರರು ಉಪಸ್ಥಿತರಿದ್ದರು.
- - - -16ಎಚ್‍ಆರ್‌ಆರ್2:ಹರಿಹರ ನಗರಸಭೆ ಆವರಣದಲ್ಲಿ ಸೋಮವಾರ ಸ್ಥಗಿತಗೊಂಡಿದ್ದ ನೂತನ ಕಟ್ಟಡ ಕಾಮಗಾರಿಗೆ ಪುನರ್ ಪ್ರಾರಂಭಿಸಲು ಪೂಜೆ ನೆರವೇರಿಸಲಾಯಿತು. ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಉಪಾಧ್ಯಕ್ಷ ಎಂ.ಜಂಬಣ್ಣ, ಸದಸ್ಯ ಅಬ್ದುಲ್ ಅಲೀಮ್ ಹಾಗೂ ಇತರರಿದ್ದರು.